ಲಂಡನ್: ಟೆಸ್ಟ್ ಕ್ರಿಕೆಟ್ ಕಡೆ ಗಮನ ಹರಿಸುವ ಉದ್ದೇಶದಿಂದ ಇಂಗ್ಲೆಂಡ್‌ನ ಆಲ್‌ರೌಂಡ್ ಆಟಗಾರ ಬೆನ್ ಸ್ಟೋಕ್ಸ್ ಅವರು ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
ವೆಸ್ಟ್ ಇಂಡೀಸ್ ಹಾಗೂ ಅಮೆರಿಕ ಜಂಟಿ ಆತಿಥ್ಯದಲ್ಲಿ ಜೂನ್‌ನಲ್ಲಿ ನಡೆಯುವ ವಿಶ್ವಕಪ್ ಟೂರ್ನಿಗೆ ಎರಡು ತಿಂಗಳ ಮುಂಚಿತವಾಗಿ ಇಂಗ್ಲೆಂಡ್ ತಂಡದ ಟೆಸ್ಟ್ ತಂಡದ ನಾಯಕನೂ ಆಗಿರುವ ಸ್ಟೋಕ್ಸ್ ತಮ್ಮ ನಿರ್ಧಾರವನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಗೆ ತಿಳಿಸಿದ್ದಾರೆ.
ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಲ್ಲಿ ಆಲ್‌ರೌಂಡರ್ ಆಗಿ ಪೂರ್ಣ ಪಾತ್ರ ನಿರ್ವಹಿಸಲು ಮತ್ತು ಬೌಲಿಂಗ್ ಫಿಟ್‌ನೆಸ್ ಅನ್ನು ಮರಳಿ ಪಡೆಯುವತ್ತ ಗಮನ ಹರಿಸುತ್ತಿದ್ದೇನೆ. ಹೀಗಾಗಿ, ಐಪಿಎಲ್ ಮತ್ತು ವಿಶ್ವಕಪ್ ಟೂರ್ನಿಯಿಂದ ಹೊರಗುಳಿಯಲು ಬಯಸಿದ್ದೇನೆ’ ಎಂದು 32 ವರ್ಷದ ಸ್ಟೋಕ್ಸ್ ಹೇಳಿದ್ದಾರೆ.
ಭಾರತದಲ್ಲಿ ಇತ್ತೀಚೆಗೆ ನಡೆದಿದ್ದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಲ್‌ರೌಂಡರ್ ಆಗಿ ತಮ್ಮ ಕಾರ್ಯ ಪೂರ್ಣಗೊಳಿಸುವಲ್ಲಿ ಸ್ಟೋಕ್ಸ್ ವಿಫಲರಾಗಿದ್ದರು. ಈ ಟೆಸ್ಟ್ ಸರಣಿಯಲ್ಲಿ ಭಾರತದ ಎದುರು ಇಂಗ್ಲೆಂಡ್ 1-4 ಅಂತರದಲ್ಲಿ ಸೋಲು ಅನುಭವಿಸಿತ್ತು.
2022ರ ಟಿ20 ವಿಶ್ವಕಪ್ ಗೆಲುವಿನಲ್ಲಿ ಇಂಗ್ಲೆಂಡ್ ಪರ ಸ್ಟೋಕ್ಸ್ ಮಹತ್ವದ ಪಾತ್ರ ನಿರ್ವಹಿಸಿದ್ದರು. ಮೆಲ್ಬರ್ನ್‌ನಲ್ಲಿ ನಡೆದಿದ್ದ ಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು ಐದು ವಿಕೆಟ್‌ಗಳಿಂದ ಮಣಿಸಿ ಇಂಗ್ಲೆಂಡ್ ತಂಡವು ಚಾಂಪಿಯನ್ ಆಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.