ADVERTISEMENT

ವಿಶ್ವಕಪ್ ಫೈನಲ್‌ನಲ್ಲಿ ಗಪ್ಟಿಲ್ ರನೌಟ್‌: ಈ ವರ್ಷದ ಶ್ರೇಷ್ಠ ಕ್ರೀಡಾ ಕ್ಷಣ

ಇಂಗ್ಲೆಂಡ್‌ ಆಲ್ರೌಂಡರ್ ಬೆನ್‌ ಸ್ಟೋಕ್ಸ್‌ ವರ್ಷದ ಕ್ರೀಡಾಪಟು

ಏಜೆನ್ಸೀಸ್
Published 16 ಡಿಸೆಂಬರ್ 2019, 10:14 IST
Last Updated 16 ಡಿಸೆಂಬರ್ 2019, 10:14 IST
   

ನವದೆಹಲಿ: ವಿಶ್ವಕಪ್‌ ಕ್ರಿಕೆಟ್‌ ಪೈನಲ್‌ ಪಂದ್ಯದ ಸೂಪರ್‌ ಓವರ್‌ನಲ್ಲಿ ನ್ಯೂಜಿಲೆಂಡ್‌ ತಂಡದ ಬ್ಯಾಟ್ಸ್‌ಮನ್‌ ಮಾರ್ಟಿನ್‌ ಗಪ್ಟಿಲ್‌ ರನೌಟ್‌ ಆದ ಕ್ಷಣವು ಬಿಬಿಸಿಯವರ್ಷದ ಶ್ರೇಷ್ಠ ಕ್ರೀಡಾ ಕ್ಷಣ ಎನಿಸಿದೆ. ಇಂಗ್ಲೆಂಡ್‌ ಆಲ್ರೌಂಡರ್ ಬೆನ್‌ ಸ್ಟೋಕ್ಸ್‌ ಅವರು ವರ್ಷದ ಕ್ರೀಡಾಪಟು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ವರ್ಷ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಅಮೋಘವಾಗಿ ಆಡಿದ್ದ ಸ್ಟೋಕ್ಸ್‌, ಫೈನಲ್‌ ಪಂದ್ಯದಲ್ಲಿ ತಮ್ಮ ತಂಡಕ್ಕೆ ಚೊಚ್ಚಲ ವಿಶ್ವಕಪ್‌ ಗೆದ್ದುಕೊಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು.ಇದರೊಂದಿಗೆ ಅವರು ಈ ಪ್ರಶಸ್ತಿ ಸ್ವೀಕರಿಸಿದ ಐದನೇ ಕ್ರಿಕೆಟಿಗ ಎನಿಸಿದರು.

ಈ ಹಿಂದೆ, ಇಯಾನ್‌ ಬಾಥಮ್‌, ಜಿಮ್‌ ಲೇಕರ್‌, ಡೇವಿಡ್‌ ಸ್ಟೀಲೆ ಹಾಗೂ ಆ್ಯಂಡ್ರೋ ಫ್ಲಿಂಟಾಫ್‌ ಪ್ರಶಸ್ತಿ ಸ್ವೀಕರಿಸಿದ್ದರು.

ADVERTISEMENT

ಫಾರ್ಮುಲಾ ಒನ್‌ ರೇಸರ್‌ ಲೆವಿಸ್‌ ಹ್ಯಾಮಿಲ್ಟನ್‌ ಹಾಗೂ ಅಥ್ಲೀಟ್‌ ದಿನಾ ಆಷ್ಯರ್‌ ಸ್ಮಿತ್‌ ಅವರೂ ವರ್ಷದ ಕ್ರೀಡಾಪಟು ಪ್ರಶಸ್ತಿ ರೇಸ್‌ನಲ್ಲಿದ್ದರು. ಅವರು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಕ್ಕೆ ತೃಪ್ತರಾಗಿದ್ದಾರೆ. ಸ್ಟೋಕ್ಸ್‌, ಹ್ಯಾಮಿಲ್ಟನ್‌ ಮತ್ತುಆಷ್ಯರ್‌ ಅವರಿಗಿಂತಹೆಚ್ಚು ಮತ ಪಡೆದು ‍ಪ್ರಶಸ್ತಿ ಪಡೆದಿದ್ದಾರೆ.

ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದನ್ಯೂಜಿಲೆಂಡ್ ನಿಗದಿತ 50 ಓವರ್‌ಗಳಲ್ಲಿ ಎಂಟು ವಿಕೆಟ್‌ ಕಳೆದುಕೊಂಡು 241 ರನ್ ಗಳಿಸಿತ್ತು. ಈ ಮೊತ್ತ ಬೆನ್ನತ್ತಿದ್ದ ಆತಿಥೇಯ ಇಂಗ್ಲೆಂಡ್‌ 241 ರನ್‌ ಗಳಿಸಿ ಆಲೌಟ್‌ ಆಗಿತ್ತು. ಔಟಾಗದೆ 84 ರನ್‌ ಗಳಿಸಿದ್ದ ಸ್ಟೋಕ್ಸ್‌ ಪಂದ್ಯದ ಮೊತ್ತ ಸಮಬಲಗೊಳಿಸಿದ್ದರು. ಹೀಗಾಗಿ ಸೂಪರ್‌ ಓವರ್‌ ಮೊರೆ ಹೋಗಲಾಗಿತ್ತು.

ಸೂಪರ್‌ ಓವರ್‌ನಲ್ಲಿ ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ 15 ರನ್‌ ಗಳಿಸಿತ್ತು. ಸ್ಟೋಕ್ಸ್‌ ಮೂರು ಎಸೆತಗಳಲ್ಲಿ ಎಂಟು ರನ್‌ ಮತ್ತು ಜಾಸ್‌ ಬಟ್ಲರ್‌ ಮೂರು ಎಸೆತಗಳಲ್ಲಿ 7 ರನ್‌ ಗಳಿಸಿದ್ದರು. ಮೊತ್ತ ಬೆನ್ನತ್ತಿದ್ದ ನ್ಯೂಜಿಲೆಂಡ್‌ ಮೊದಲ ಐದು ಎಸೆತಗಳಲ್ಲಿ 14 ರನ್‌ ಗಳಿಸಿತ್ತು. ಕೊನೆಯ ಎಸೆತದಲ್ಲಿ ಎರಡು ರನ್‌ ಗಳಿಸಬೇಕಿತ್ತು.

ಬ್ಯಾಟಿಂಗ್‌ ಮಾಡುತ್ತಿದ್ದಮಾರ್ಟಿನ್‌ ಗಪ್ಟಿಲ್‌ಎರಡು ರನ್‌ಗಾಗಿ ಓಡುವ ವೇಳೆ ರನೌಟ್‌ ಆಗಿದ್ದರು. ಹೀಗಾಗಿ ಪಂದ್ಯವು ಎರಡೆರಡು ಬಾರಿ ಡ್ರಾ ಆದಂತಾಯಿತು. ವಿಕೆಟ್‌ ಕೀಪರ್‌ ಜಾಸ್‌ ಬಟ್ಲರ್‌ ಮಾಡಿದ ಆ ರನೌಟ್‌ ಸಂದರ್ಭವನ್ನು ವರ್ಷದ ಶ್ರೇಷ್ಠ ಕ್ರೀಡಾಕ್ಷಣ ಎಂದು ಗುರುತಿಸಲಾಗಿದೆ.

ಬಳಿಕ ಉಭಯ ಇನಿಂಗ್ಸ್‌ಗಳಲ್ಲಿ ದಾಖಲಾದ ಒಟ್ಟು ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಪರಿಗಣಿಸಿ ಇಂಗ್ಲೆಂಡ್‌ ವಿಜಯಿ ಎಂದು ಘೋಷಿಸಲಾಗಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್‌ ಇನಿಂಗ್ಸ್‌ನಲ್ಲಿ 14 ಬೌಂಡರಿ ಮತ್ತು 2 ಸಿಕ್ಸರ್‌ ದಾಖಲಾಗಿದ್ದರೆ,ಇಂಗ್ಲೆಂಡ್‌ 22 ಬೌಂಡರಿ ಮತ್ತು 2 ಸಿಕ್ಸರ್‌ ಬಂದಿದ್ದವು.

ಬಿಬಿಸಿಯ ಇತರೆ ಪ್ರಶಸ್ತಿಗಳು
ಹೆಲೆನ್‌ ರೊಲ್ಲಾಸನ್‌ ಅವಾರ್ಡ್‌:
ಡೊಡ್ಡೀ ವಿಯರ್‌ (ರಗ್ಬಿ ಆಟಗಾರ)
ವರ್ಷದ ಯುವ ಕ್ರೀಡಾಪಟು: ಕರೋಲಿನ್‌ ಡುಬೊಯಿಸ್‌ (ಮಹಿಳಾ ಬಾಕ್ಸರ್‌)
ಜೀವಮಾನದ ಸಾಧನೆ: ತಾನ್ನಿ ಗ್ರೇ ಥಾಂಪ್‌ಸನ್‌
ವರ್ಷದ ಕೋಚ್‌: ಜಾನ್‌ ಬ್ಲೇಕಿ (ದೋಹಾದಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ 200 ಮೀ. ಓಟಗಾರ್ತಿದಿನಾ ಆಷ್ಯರ್‌ ಸ್ಮಿತ್‌ ಕೋಚ್‌)
ವರ್ಷದ ತಂಡ:ವಿಶ್ವಕಪ್‌ ಗೆದ್ದ ಇಂಗ್ಲೆಂಡ್‌ ಕ್ರಿಕೆಟ್‌ ತಂಡ
ವಿಶ್ವ ಕ್ರೀಡಾ ತಾರೆ:ಎಲಿಯುದ್‌ ಕಿಪ್ಚೋಗೆ (ಮ್ಯಾರಥಾನ್‌ ಓಟಗಾರ, ಕೀನ್ಯಾ)
ರೋಮಾಂಚಿತ ಕ್ಷಣ: ವಿಶ್ವಕಪ್‌ ಕ್ರಿಕೆಟ್‌ನ ಫೈನಲ್‌ ಪಂದ್ಯದ ಸೂಪರ್‌ ಓವರ್‌ ವೇಳೆ ನ್ಯೂಜಿಲೆಂಡ್‌ನ ಮಾರ್ಟಿನ್‌ ಗಪ್ಟಿಲ್‌ ಅವರನ್ನು ಇಂಗ್ಲೆಂಡ್‌ನ ಜಾಸ್‌ ಬಟ್ಲರ್‌ ರನೌಟ್‌ ಮಾಡಿದ್ದು
ತೆರೆಮರೆಯ ಹೀರೋ: ಕೀರನ್‌ಥಾಂಪ್‌ಸನ್‌ (ಸಾಮಾಜಿಕ ಕಾರ್ಯಕರ್ತ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.