ADVERTISEMENT

ರಣಜಿ ಫೈನಲ್: ಸೌರಾಷ್ಟ್ರದ ಛಲ, ಬಂಗಾಳದ ತಾಳ್ಮೆ

ಇನಿಂಗ್ಸ್‌ ಮುನ್ನಡೆಗಾಗಿ ಜಿದ್ದಾಜಿದ್ದಿ

ಪಿಟಿಐ
Published 11 ಮಾರ್ಚ್ 2020, 21:24 IST
Last Updated 11 ಮಾರ್ಚ್ 2020, 21:24 IST
ಮನೋಜ್ ತಿವಾರಿ
ಮನೋಜ್ ತಿವಾರಿ   
""

ರಾಜ್‌ಕೋಟ್: ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಆತಿಥೇಯ ತಂಡ ಮತ್ತು ಬಂಗಾಳ ಇಬ್ಬರಿಗೂ ಪಂದ್ಯ ಗೆಲ್ಲುವತ್ತ ಹೆಚ್ಚು ಒಲವಿಲ್ಲ. ಆದರೆ ಮೊದಲ ಇನಿಂಗ್ಸ್‌ ಮುನ್ನಡೆ ಸಿಕ್ಕರೆ ಸಾಕೆಂಬ ಹೋರಾಟ ಉಭಯ ತಂಡಗಳದ್ದು.

ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್‌ನ ಮೂರನೇ ದಿನವಾದ ಬುಧವಾರ ನಡೆದ ಆಟ ನೋಡಿದವರಿಗೆ ಹೀಗೆ ಅನಿಸುವುದರಲ್ಲಿ ಅನುಮಾನವೇ ಇಲ್ಲ. ಮೊದಲ ದಿನದಿಂದಲೇ ಕೆಳಮಟ್ಟದಲ್ಲಿ ಪುಟಿದೆದ್ದು ಬರುತ್ತಿರುವ ಚೆಂಡನ್ನು ಆಡುವುದು ಬ್ಯಾಟ್ಸ್‌ಮನ್‌ಗಳಿಗೆ ಸವಾಲಿನ ಪರಿಸ್ಥಿತಿ ತಂದೊಡ್ಡಿದೆ.

ದಿನದಿಂದ ದಿನಕ್ಕೆ ಸತ್ವ ಕಳೆದುಕೊಳ್ಳುತ್ತಿರುವ ಪಿಚ್‌ನಲ್ಲಿ ರನ್‌ ಗಳಿಕೆ ದುಸ್ತರವಾಗುತ್ತಿದೆ. ಸೌರಾಷ್ಟ್ರವು ಮೊದಲ ಇನಿಂಗ್ಸ್‌ನಲ್ಲಿ 425 ರನ್‌ ಗಳಿಸಿದೆ. ಬಂಗಾಳ ತಂಡವು ಮುನ್ನಡೆಗಾಗಿ ಈಗ ದೊಡ್ಡ ಹೋರಾಟ ನಡೆಸಬೇಕಾದ ಪರಿಸ್ಥಿತಿಯಲ್ಲಿದೆ.

ADVERTISEMENT

ಸುದೀಪ್ ಚಟರ್ಜಿ (ಬ್ಯಾಟಿಂಗ್ 47; 145ಎಸೆತ, 5ಬೌಂಡರಿ) ಮತ್ತು ಅನುಭವಿ ಮನೋಜ್ ತಿವಾರಿ (35; 116ಎ, 2ಬೌಂ) ಅವರ ತಾಳ್ಮೆಯ ಬ್ಯಾಟಿಂಗ್ ಫಲವಾಗಿ ದಿನದಾಟದ ಅಂತ್ಯಕ್ಕೆ 65 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 134 ರನ್ ಗಳಿಸಿದೆ. ಇನಿಂಗ್ಸ್ ಮುನ್ನಡೆ ಪಡೆಯಬೇಕಾದರೆ ಇನ್ನೂ 292 ರನ್ ಗಳಿಸಬೇಕಿದೆ. ಕ್ವಾರ್ಟರ್‌ಫೈನಲ್ ಮತ್ತು ಸೆಮಿಫೈನಲ್‌ನಲ್ಲಿ ಶತಕ ಬಾರಿಸಿದ್ದ ಅನುಸ್ಟುಪ್ ಮಜುಂದಾರ್ (ಬ್ಯಾಟಿಂಗ್ 4; 43ಎ, 1ಬೌಂ) ಸುದೀಪ್ ಜೊತೆಗೆ ಕ್ರೀಸ್‌ನಲ್ಲಿದ್ದಾರೆ.

407 ಎಸೆತಗಳು, 175 ರನ್‌: ಮೂರನೇ ದಿನದಾಟವು ಬ್ಯಾಟ್ಸ್‌ಮನ್‌ಗಳ ತಾಳ್ಮೆಯನ್ನು ಕಠಿಣ ಪರೀಕ್ಷೆಗೆ ಒಡ್ಡಿತ್ತು. ಆದ್ದರಿಂದ ಇಡೀ ದಿನ ಆಮೆಗತಿಯ ಆಟ ನಡೆಯಿತು. ಇಡೀ ದಿನ ದಾಖಲಾಗಿದ್ದು ಕೇವಲ 175 ರನ್‌ಗಳು ಮಾತ್ರ. ಆದರೆ, ಬೌಲರ್‌ಗಳು ಪ್ರಯೋಗಿಸಿದ್ದು 407 ಎಸೆತಗಳನ್ನು.

ಮಂಗಳವಾರ ದಿನದಾಟದ ಕೊನೆಗೆ ಆತಿಥೇಯ ತಂಡ 160 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 384 ರನ್‌ ಗಳಿಸಿತ್ತು. ಕ್ರೀಸ್‌ನಲ್ಲಿದ್ದ ಚಿರಾಗ್ ಜಾನಿ (14 ರನ್), ಧರ್ಮೇಂದ್ರಸಿಂಹ ಜಡೇಜ (ಔಟಾಗದೆ 33; 52ಎ, 5ಬೌಂ) ಮತ್ತು ನಾಯಕ ಜಯದೇವ್ ಉನದ್ಕತ್ (20; 35ಎ) ಅವರ ಕಾಣಿಕೆಯ ಫಲವಾಗಿ ತಂಡವು 400ರ ಗಡಿ ದಾಟಿತು. ತಂಡವು ಮೂರನೇ ದಿನ ಬೆಳಿಗ್ಗೆ 11.5 ಓವರ್‌ಗಳಲ್ಲಿ 41 ರನ್‌ ಗಳಿಸಿತು.

ಇನಿಂಗ್ಸ್ ಆರಂಭಿಸಿದ ಬಂಗಾಳ ತಂಡಕ್ಕೆ 14ನೇ ಓವರ್‌ನಲ್ಲಿ ಧರ್ಮೇಂದ್ರಸಿಂಹ ಜಡೇಜ ಪೆಟ್ಟು ಕೊಟ್ಟರು.ಸುದೀಪ್ ಕುಮಾರ್ (26 ರನ್) ವಿಕೆಟ್ ಪಡೆದು ಸಂಭ್ರಮಿಸಿದರು. ನಾಯಕ ಅಭಿಮನ್ಯು ಈಶ್ವರನ್ ಆಟಕ್ಕೆ ಪ್ರೇರಕ್ ಮಂಕಡ್
ಅಡ್ಡಿಯಾದರು. ಆದರೆ ಸುದೀಪ್ ಚಟರ್ಜಿ ಮತ್ತು ಮನೋಜ್ ಅವರು ಮೂರನೇ ವಿಕೆಟ್‌ ಜೊತೆಯಾಟದಲ್ಲಿ 38.3 ಓವರ್‌ಗಳನ್ನು ಆಡಿ 89 ರನ್‌ ಸೇರಿಸಿದರು. ಈ ಅವಧಿಯಲ್ಲಿ ಬೌಲರ್‌ಗಳ ಎಲ್‌ಬಿಡಬ್ಲ್ಯು ಮನವಿಗಳು ಕ್ರೀಡಾಂಗಣದಲ್ಲಿ ಪ್ರತಿಧ್ವನಿಸಿದವು.

53ನೇ ಓವರ್‌ನಲ್ಲಿ ಕಡೆಗೂ ತಿವಾರಿ ಅವರನ್ನು ಎಲ್‌ಬಿ ಬಲೆಗೆ ಬೀಳಿಸುವಲ್ಲಿ ಚಿರಾಗ್ ಯಶಸ್ವಿಯಾದರು. ಕ್ರೀಸ್‌ಗೆ ಬಂದ ವೃದ್ಧಿಮಾನ್ ಸಹಾ (ಬ್ಯಾಟಿಂಗ್ 4; 43ಎ) ಕೂಡ ತಾಳ್ಮೆಯ ಆಟಕ್ಕೆ ಹೊಂದಿಕೊಂಡರು.

ಪೂಜಾರಗೆ ಬೆನ್ನುನೋವು
ರಾಜ್‌ಕೋಟ್: ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್‌ನ ಮೊದಲ ದಿನ ಜ್ವರದಿಂದ ಬಳಲಿದ್ದ ಸೌರಾಷ್ಟ್ರದ ಚೇತೇಶ್ವರ್ ಪೂಜಾರ ಅವರನ್ನು ಈಗ ಬೆನ್ನುನೋವು ಕಾಡುತ್ತಿದೆ. ಅದರಿಂದಾಗಿ ಪಂದ್ಯದಲ್ಲಿ ಉಳಿದಿರುವ ಇನ್ನೆರಡು ದಿನಗಳಲ್ಲಿಯೂ ಅವರು ಕಣಕ್ಕಿಳಿಯುವುದು ಅನುಮಾನವಾಗಿದೆ.

‘ಪೂಜಾರ ಅವರು ವಾರ್ಮ್‌ ಅಪ್ ಮಾಡುವಾಗ ಬೆನ್ನುನೋವು ಅನುಭವಿಸಿದರು. ಆಸ್ಪತ್ರೆಗೆ ತೆರಳಿ ಸ್ಕ್ಯಾನಿಂಗ್ ಮಾಡಿಸಿಕೊಂಡಿದ್ದಾರೆ. ಅಗತ್ಯ ಬಿದ್ದರೆ ಅವರು ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಾರೆ’ ಎಂದು ಎಸ್‌ಸಿಎ ಅಧ್ಯಕ್ಷ ಜಯದೇವ್ ಶಾ ತಿಳಿಸಿದ್ದಾರೆ.

Caption

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.