ಕೋಲ್ಕತ್ತ: ಮೂರು ದಶಕಗಳ ಪ್ರಶಸ್ತಿ ಬರ ನೀಗಿಸುವ ಛಲದಲ್ಲಿರುವ ಬಂಗಾಳ ತಂಡ, ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಸೌರಾಷ್ಟ್ರ ತಂಡದ ಸವಾಲು ಎದುರಿಸಲಿದೆ.
ಕೋಲ್ಕತ್ತದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾಗುವ ಫೈನಲ್ ಪಂದ್ಯವು, ಹಿಂದಿನ ಸೋಲಿಗೆ ಮುಯ್ಯಿ ತೀರಿಸುವ ಉತ್ತಮ ಅವಕಾಶವನ್ನು ಬಂಗಾಳ ತಂಡಕ್ಕೆ ನೀಡಿದೆ.
2020ರ ಟೂರ್ನಿಯಲ್ಲಿ ಬಂಗಾಳ ಕೊನೆಯದಾಗಿ ಫೈನಲ್ ಪ್ರವೇಶಿಸಿದ್ದಾಗ, ಸೌರಾಷ್ಟ್ರ ಎದುರು ಸೋತಿತ್ತು. ರಾಜ್‌ಕೋಟ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲ ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ಸೌರಾಷ್ಟ್ರ ಗೆದ್ದಿತ್ತು.
ಬಂಗಾಳ ತಂಡ ತನ್ನ ಕೊನೆಯ ರಣಜಿ ಟ್ರೋಫಿಯನ್ನು 1990 ರಲ್ಲಿ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಎತ್ತಿಹಿಡಿದಿತ್ತು. ಇದೀಗ 33 ವರ್ಷಗಳ ಬಳಿಕ ಅದೇ ತಾಣದಲ್ಲಿ ಟ್ರೋಫಿ ಗೆಲ್ಲಬೇಕೆಂಬ ಕನಸು ಕಂಡಿದೆ.
ಆರಂಭಿಕ ಬ್ಯಾಟರ್ ಅಭಿಮನ್ಯು ಈಶ್ವರನ್, ಆಲ್‌ರೌಂಡರ್ ಶಹಬಾಜ್ ಅಹ್ಮದ್ ಮತ್ತು ವೇಗಿಗಳಾದ ಆಕಾಶ್ ದೀಪ್, ಇಶಾನ್ ಪೊರೆಲ್ ಮತ್ತು ಮುಕೇಶ್ ಕುಮಾರ್ ಅವರು ಬಂಗಾಳದ ಶಕ್ತಿ ಎನಿಸಿಕೊಂಡಿದ್ದಾರೆ. 9 ಪಂದ್ಯಗಳಿಂದ 37 ವಿಕೆಟ್‌ಗಳನ್ನು ಪಡೆದಿರುವ ಆಕಾಶ್, ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ.
ಸೌರಾಷ್ಟ್ರಕ್ಕೆ ಉನದ್ಕತ್ ಬಲ: ಮತ್ತೊಂದೆಡೆ ಸೌರಾಷ್ಟ್ರ ತಂಡವು ಎಡಗೈ ವೇಗಿ ಜೈದೇವ್ ಉನದ್ಕತ್ ಅವರ ಆಗಮನದಿಂದ ಬಲ ಹೆಚ್ಚಿಸಿಕೊಂಡಿದೆ.
ಬಾರ್ಡರ್–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಜೈದೇವ್ ಅವರಿಗೆ ರಣಜಿ ಫೈನಲ್ ಆಡಲು ಬಿಸಿಸಿಐ ಅನುಮತಿ ನೀಡಿದೆ. ಇನ್ನೊಬ್ಬ ಎಡಗೈ ವೇಗಿ ಚೇತನ್ ಸಕಾರಿಯಾ ಕೂಡಾ ಉತ್ತಮ ಲಯದಲ್ಲಿದ್ದಾರೆ.
ಬಂಗಾಳದ ಬ್ಯಾಟರ್‌ಗಳಿಗೆ ಸವಾಲೊಡ್ಡಬಲ್ಲ ವೇಗಿಗಳು ನಮ್ಮ ತಂಡದಲ್ಲೂ ಇದ್ದಾರೆ ಎಂದು ಉನದ್ಕತ್, ಎದುರಾಳಿಗಳನ್ನು ಎಚ್ಚರಿಸಿದ್ದಾರೆ.
‘ಈ ಪಂದ್ಯದಲ್ಲಿ ಸೌರಾಷ್ಟ್ರದ ಬ್ಯಾಟರ್‌ಗಳಿಗೆ ಮಾತ್ರ ಸವಾಲು ಎದುರಾಗುವುದಲ್ಲ. ಎರಡೂ ತಂಡಗಳ ಬ್ಯಾಟರ್‌ಗಳಿಗೆ ಸವಾಲು ಖಚಿತ ಎಂಬುದನ್ನು ಸ್ಪಷ್ಟಪಡಿಸುತ್ತೇನೆ’ ಎಂದಿದ್ದಾರೆ.
ಉನದ್ಕತ್ ಅವರ ನಾಯಕತ್ವದಲ್ಲಿ ಸೌರಾಷ್ಟ್ರ ತಂಡ 2020 ರಲ್ಲಿ ರಣಜಿ ಟ್ರೋಫಿ ಗೆದ್ದುಕೊಂಡಿದ್ದರೆ, ಈ ಋತುವಿನಲ್ಲಿ ವಿಜಯ್ ಹಜಾರೆ ಟ್ರೋಫಿ ಜಯಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.