ADVERTISEMENT

ಕೆಪಿಎಲ್‌: ಬಿಜಾಪುರ ಬುಲ್ಸ್‌ಗೆ ಮಣಿದ ಲಯನ್ಸ್

ಅಪ್ಪಣ್ಣ ಪ್ರಭಾವಿ ಬೌಲಿಂಗ್, ಕೌನೈನ್‌ ಆಕರ್ಷಕ ಆಟ

ಮಹಮ್ಮದ್ ನೂಮಾನ್
Published 2 ಸೆಪ್ಟೆಂಬರ್ 2018, 17:36 IST
Last Updated 2 ಸೆಪ್ಟೆಂಬರ್ 2018, 17:36 IST
ಕೌನೈನ್‌ ಅಬ್ಬಾಸ್‌ ಅವರ ಬ್ಯಾಟಿಂಗ್‌ ವೈಖರಿ -ಪ್ರಜಾವಾಣಿ ಚಿತ್ರ/ ಸವಿತಾ ಬಿ. ಆರ್‌.
ಕೌನೈನ್‌ ಅಬ್ಬಾಸ್‌ ಅವರ ಬ್ಯಾಟಿಂಗ್‌ ವೈಖರಿ -ಪ್ರಜಾವಾಣಿ ಚಿತ್ರ/ ಸವಿತಾ ಬಿ. ಆರ್‌.   

ಮೈಸೂರು: ಆಲ್‌ರೌಂಡ್‌ ಆಟವಾಡಿದ ಬಿಜಾಪುರ ಬುಲ್ಸ್‌ ತಂಡ ಕೆಪಿಎಲ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್‌ ವಿರುದ್ಧ ಎರಡು ವಿಕೆಟ್‌ಗಳ ಜಯ ಸಾಧಿಸಿತು.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಭಾನುವಾರ ಮೊದಲು ಬ್ಯಾಟ್‌ ಮಾಡಿದ ಲಯನ್ಸ್‌ 9 ವಿಕೆಟ್‌ಗೆ 140 ರನ್‌ ಗಳಿಸಿದರೆ, ಬುಲ್ಸ್‌ 19.5 ಓವರ್‌ಗಳಲ್ಲಿ 8 ವಿಕೆಟ್‌ಗೆ 143 ರನ್ ಗಳಿಸಿ ಜಯ ಸಾಧಿಸಿತು. ಲಯನ್ಸ್‌ ತಂಡ ತಾನಾಡಿದ ಎಲ್ಲ ಐದೂ ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.

ಸಾಧಾರಣ ಗುರಿ ಬೆನ್ನಟ್ಟಿದ ಬುಲ್ಸ್‌ ತಂಡ ಎಂ.ಜಿ.ನವೀನ್‌ ಅವರನ್ನು ಮೊದಲ ಎಸೆತದಲ್ಲೇ ಕಳೆದುಕೊಂಡಿತು. ಭರತ್‌ ಚಿಪ್ಲಿ (43 ರನ್‌, 18 ಎಸೆತ, 7 ಬೌಂ, 1 ಸಿ.) ಮತ್ತು ಕೌನೈನ್‌ ಅಬ್ಬಾಸ್‌ (51 ರನ್‌, 45 ಎಸೆತ, 4 ಬೌಂ, 2 ಸಿ.) ಎರಡನೇ ವಿಕೆಟ್‌ಗೆ 37 ಎಸೆತಗಳಲ್ಲಿ 62 ರನ್‌ ಸೇರಿಸಿದರು.

ADVERTISEMENT

ಚಿಪ್ಲಿ ಮತ್ತು ಕೌನೈನ್‌ ಔಟಾದ ಬಳಿಕ ತಂಡ ಅಲ್ಪ ಒತ್ತಡ ಎದುರಿಸಿದರೂ, ಸುನಿಲ್‌ ರಾಜು ಅವರು (ಔಟಾಗದೆ 18) ಗೆಲುವಿನತ್ತ ಮುನ್ನಡೆಸಿದರು.

ಅಪ್ಪಣ್ಣ ಪ್ರಭಾವಿ ಬೌಲಿಂಗ್: ಮೊದಲು ಬ್ಯಾಟ್‌ ಮಾಡಿದ ಲಯನ್ಸ್‌, ಕೆ.ಪಿ.ಅಪ್ಪಣ್ಣ (21ಕ್ಕೆ 4) ಮತ್ತು ಭವೇಶ್‌ ಗುಲೇಚಾ ಅವರ ಪ್ರಭಾವಿ ಬೌಲಿಂಗ್‌ ಮುಂದೆ ಪರದಾಟ ನಡೆಸಿತು.

ಮೂರು ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 30 ರನ್‌ ಗಳಿಸಿದ್ದ ತಂಡ ಆ ಬಳಿಕ ಆಗಿಂದಾಗ್ಗೆ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. 75 ರನ್‌ ಗಳಿಸುವಷ್ಟರಲ್ಲಿ ಐದು ವಿಕೆಟ್‌ಗಳು ಬಿದ್ದವು.

ಅಧೋಕ್ಷ್ ಹೆಗ್ಡೆ (42 ರನ್‌, 34 ಎಸೆತ) ಮತ್ತು ಆದಿತ್ಯ ಸೋಮಣ್ಣ (37, 29 ಎಸೆತ) ಆರನೇ ವಿಕೆಟ್‌ಗೆ 62 ರನ್‌ಗಳ ಜತೆಯಾಟ ನೀಡಿ ತಂಡಕ್ಕೆ ಆಸರೆಯಾದರು.

ಸಂಕ್ಷಿಪ್ತ ಸ್ಕೋರ್: ಶಿವಮೊಗ್ಗ ಲಯನ್ಸ್‌, 20 ಓವರ್‌ಗಳಲ್ಲಿ 9 ವಿಕೆಟ್‌ಗೆ 140 (ಬಿ.ಆರ್.ಶರತ್ 23, ಕೆ.ರೋಹಿತ್ 22, ಅಧೋಕ್ಷ್ ಹೆಗ್ಡೆ 42, ಆದಿತ್ಯ ಸೋಮಣ್ಣ 37, ಕೆ.‍ಪಿ.ಅಪ್ಪಣ್ಣ 21ಕ್ಕೆ 4, ಭವೇಶ್‌ ಗುಲೇಚಾ 31ಕ್ಕೆ 3, ಸೂರಜ್‌ ಕಾಮತ್‌ 33ಕ್ಕೆ 1)
ಬಿಜಾಪುರ ಬುಲ್ಸ್, 19.5 ಓವರ್‌ಗಳಲ್ಲಿ 8 ವಿಕೆಟ್‌ಗೆ 143 (ಭರತ್‌ ಚಿಪ್ಲಿ 43, ಕೌನೈನ್‌ ಅಬ್ಬಾಸ್ 51, ಸುನಿಲ್‌ ರಾಜು ಔಟಾಗದೆ 18, ಆದಿತ್ಯ ಸೋಮಣ್ಣ 28ಕ್ಕೆ 2)

ಫಲಿತಾಂಶ: ಬಿಜಾಪುರ ಬುಲ್ಸ್‌ಗೆ 2 ವಿಕೆಟ್‌ ಜಯ
ಪಂದ್ಯಶ್ರೇಷ್ಠ: ಕೆ.ಪಿ.ಅಪ್ಪಣ್ಣ

ಇಂದಿನ ಪಂದ್ಯ
ಬಳ್ಳಾರಿ ಟಸ್ಕರ್ಸ್‌– ಶಿವಮೊಗ್ಗ ಲಯನ್ಸ್
ಆರಂಭ: ಸಂಜೆ 6.40
ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ 2

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.