ADVERTISEMENT

ಸ್ಟ್ಯಾಂಡ್‌ನಿಂದ ನನ್ನ ಹೆಸರು ತೆಗೆದುಹಾಕಿ;ಡಿಡಿಸಿಎಗೆ ಬಿಷನ್ ಸಿಂಗ್ ಬೇಡಿ ಕಿಡಿ

ಡಿಡಿಸಿಎ ಸದಸ್ಯತ್ವವನ್ನು ತ್ಯಜಿಸಿದ ಬಿಷನ್ ಸಿಂಗ್ ಬೇಡಿ

ಪಿಟಿಐ
Published 23 ಡಿಸೆಂಬರ್ 2020, 8:18 IST
Last Updated 23 ಡಿಸೆಂಬರ್ 2020, 8:18 IST
ಬಿಷನ್ ಸಿಂಗ್ ಬೇಡಿ
ಬಿಷನ್ ಸಿಂಗ್ ಬೇಡಿ   

ನವದೆಹಲಿ: ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ದಿವಂಗತ ಮಾಜಿ ಅಧ್ಯಕ್ಷ ಅರುಣ್ ಜೇಟ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸುವ ಯೋಜನೆಯನ್ನು ವಿರೋಧಿಸಿರುವ ಸ್ಪಿನ್ ದಂತಕಥೆ ಬಿಷನ್ ಸಿಂಗ್ ಬೇಡಿ, 2017ರಲ್ಲಿ ಗೌರವ ಸೂಚಕವಾಗಿ ಪ್ರೇಕ್ಷಕ ಸ್ಟ್ಯಾಂಡ್‌ಗೆಇಡಲಾಗಿದ್ದ ತಮ್ಮ ಹೆಸರನ್ನು ತೆಗೆದು ಹಾಕುವಂತೆ ಮನವಿ ಮಾಡಿದ್ದಾರೆ.

ಅಲ್ಲದೆ ಬಿಷನ್ ಸಿಂಗ್ ಬೇಡಿ ಅವರು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯಲ್ಲಿ (ಡಿಡಿಸಿಎ) ತಮ್ಮ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ.

ಡಿಡಿಸಿಎ ನಿಲುವನ್ನು ಕಟುವಾಗಿ ಖಂಡಿಸಿರುವ ಬಿಷನ್ ಸಿಂಗ್ ಬೇಡಿ, ಸ್ವಜನಪಕ್ಷಪಾತವನ್ನು ಉತ್ತೇಜಿಸುವ ಹಾಗೂ ಆಡಳಿತಗಾರರನ್ನು ಕ್ರಿಕೆಟಿಗರಿಗಿಂತಲೂ ಮೇಲಾಗಿ ಕಾಣುವ ದೃಷ್ಟಿಕೋನವನ್ನು ವಿರೋಧಿಸಿದ್ದಾರೆ.

ADVERTISEMENT

ದಿವಂಗತ ರಾಜಕಾರಣಿ ಅರುಣ್ ಜೇಟ್ಲಿ ಪುತ್ರ ಹಾಗೂ ಡಿಡಿಸಿಎ ಅಧ್ಯಕ್ಷ ರೋಹನ್ ಜೇಟ್ಲಿ ಅವರಿಗೆ ಬರೆದಿರುವ ಪತ್ರದಲ್ಲಿ ಬಿಷನ್ ಸಿಂಗ್ ಬೇಡಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಅಪಾರ ಸಹಿಷ್ಣುತೆ ಮತ್ತುತಾಳ್ಮೆಯ ಮನುಷ್ಯ ನಾನು ಎಂದು ಹೆಮ್ಮೆಪಟ್ಟುಕೊಳ್ಳುತ್ತೇನೆ. ಆದರೆ ನನಗೀಗ ಭಯವಿದ್ದು, ಡಿಡಿಸಿಎ ನಿಜವಾಗಿಯೂ ನನ್ನನ್ನು ಪರೀಕ್ಷಿಸಿದ್ದು, ಈ ಕಠಿಣ ಕ್ರಮ ಕೈಗೊಳ್ಳಲು ಕಾರಣವಾಗಿದೆ ಎಂದು ಬಿಷನ್ ಸಿಂಗ್ ಬೇಡಿ ಹೇಳಿದರು.

ಹಾಗಾಗಿ ಈ ಕ್ಷಣದಿಂದಲೇ ಜಾರಿಗೆ ಬರುವಂತೆ ಪ್ರೇಕ್ಷಕ ಸ್ಟ್ಯಾಂಡ್‌ನಿಂದ ನನ್ನ ಹೆಸರನ್ನು ತೆಗೆಯುವಂತೆ ನಾನು ವಿನಂತಿಸುತ್ತೇನೆ. ಅಲ್ಲದೆ ನಾನು ಈ ಮೂಲಕ ಡಿಡಿಸಿಎ ಸದಸ್ಯತ್ವವನ್ನು ತ್ಯಜಿಸುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅರುಣ್ ಜೇಟ್ಲಿ, 1999ನೇ ಇಸವಿಯಿಂದ 2013ರ ವರೆಗೆ 14 ವರ್ಷಗಳ ಕಾಲ ಡಿಡಿಸಿಎ ಅಧ್ಯಕ್ಷರಾಗಿದ್ದರು. ಅವರ ಸ್ಮರಣಾರ್ಥ ಕೋಟ್ಲಾದಲ್ಲಿ ಆರು ಅಡಿ ಎತ್ತರದ ಪ್ರತಿಮೆ ನಿರ್ಮಿಸಲು ಡಿಡಿಸಿಎ ಯೋಜಿಸಿದೆ. 2017ರಲ್ಲಿ ಡಿಡಿಸಿಎ ಸ್ಟ್ಯಾಂಡ್‌ವೊಂದಕ್ಕೆ ಗೌರವ ಸೂಚಕವಾಗಿ ಮೊಹಿಂದರ್ ಅಮರನಾಥ್ ಹಾಗೂ ಬಿಷನ್ ಸಿಂಗ್ ಬೇಡಿ ಹೆಸರನ್ನು ಇಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.