ADVERTISEMENT

ಸರ್ದಾರ್‌ ಪಟೇಲ್‌ ವಿರುದ್ಧ ಬಿಜೆಪಿ ಪ್ರತೀಕಾರ: ಕಾಂಗ್ರೆಸ್‌

ಮೊಟೇರಾ ಕ್ರೀಡಾಂಗಣದ ಮರು ನಾಮಕರಣ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 18:23 IST
Last Updated 24 ಫೆಬ್ರುವರಿ 2021, 18:23 IST
ನರೇಂದ್ರ ಮೋದಿ ಕ್ರೀಡಾಂಗಣ
ನರೇಂದ್ರ ಮೋದಿ ಕ್ರೀಡಾಂಗಣ   

ನವದೆಹಲಿ: ಗುಜರಾತ್‌ನ ಅಹಮದಾಬಾದ್‌ ಬಳಿಯ ಮೊಟೆರಾದಲ್ಲಿರುವ ವಿಶ್ವದ ಅತಿ ದೊಡ್ಡ ಕ್ರಿಕೆಟ್‌ ಕ್ರೀಡಾಂಗಣದ ಮರು ನಾಮಕರಣ ಪ್ರಕ್ರಿಯೆಯನ್ನು ಕಾಂಗ್ರೆಸ್‌ ತೀವ್ರವಾಗಿ ಟೀಕಿಸಿದೆ.

ಮೊಟೇರಾದಲ್ಲಿ 1983ರಲ್ಲಿ ನಿರ್ಮಿಸಲಾದ ಕ್ರೀಡಾಂಗಣಕ್ಕಿದ್ದ ಸರ್ದಾರ್‌ ವಲ್ಲಭಭಾಯ್ ಪಟೇಲ್‌ ಅವರ ಹೆಸರನ್ನು ಬದಲಿಸಿ, ಪ್ರಧಾನಿ ನರೇಂದ್ರ ಮೋದಿ ಹೆಸರನ್ನು ಇರಿಸಿರುವುದು ಪ್ರತೀಕಾರದ ಕ್ರಮ ಎಂದು ಪಕ್ಷದ ವಕ್ತಾರ ಪವನ್‌ ಖೇರಾ ಹೇಳಿದ್ದಾರೆ.

ಮಹಾತ್ಮಾ ಗಾಂಧಿ ಅವರಂತೆಯೇ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌)ದ ನಿಷೇಧದ ಪರ ಸರ್ದಾರ್ ಪಟೇಲ್ ಅವರೂ ಇದ್ದರು ಎಂಬ ಕಾರಣದಿಂದಲೇ ಅವರ ಹೆಸರು ಬದಲಿಸಲಾಗಿದೆ ಎಂದು ಬುಧವಾರ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ADVERTISEMENT

ಇತರ ಸರ್ಕಾರಗಳ ಉತ್ತಮ ಕೆಲಸ– ಕಾರ್ಯಗಳಿಂದಲೇ ಮನ್ನಣೆ ಪಡೆಯುತ್ತಿರುವ ಮೋದಿ ನೇತೃತ್ವದ ಸರ್ಕಾರ, ಇದುವರೆಗೂ ಯಾವುದೇ ಸ್ಮರಣೀಯ ಕಾರ್ಯ ಮಾಡಿಲ್ಲ. ಈ ಹಿಂದೆ ಮಹಾತ್ಮಾ ಗಾಂಧಿ ಅವರ ಕೈಲಿದ್ದ ಚರಕವನ್ನು ತೆರವುಗೊಳಿಸಿದ್ದ ಬಿಜೆಪಿ, ಇದೀಗ ಪಟೇಲ್‌ ಅವರ ಹೆಸರು ಬದಲಿಸಿದೆ ಎಂದು ಟೀಕಿಸಿದ್ದಾರೆ.

ಪಟೇಲ್‌ ಹೆಸರು ಬದಲಿಸಿ ದೇಶದ ಜನರನ್ನು ಅವಮಾನಿಸಿರುವ ಮೋದಿ ಹಾಗೂ ಬಿಜೆಪಿ, ಕ್ರೀಡಾಂಗಣದಲ್ಲಿನ ಎರಡು ಎಂಡ್‌ (ಪೆವಿಲಿಯನ್‌ ತುದಿ)ಗಳಿಗೆ ಅದಾನಿ ಮತ್ತು ರಿಲಯನ್ಸ್‌ ಹೆಸರು ಇರಿಸಿದ್ದು ಖಂಡನೀಯ ಎಂದು ಅವರು ಹೇಳಿದ್ದಾರೆ.

ಸರ್ಕಾರದ ವಿವಿಧ ಯೋಜನೆಗಳಿಗೆ ಇಂದಿರಾ ಗಾಂಧಿ ಹಾಗೂ ರಾಜೀವ್‌ ಗಾಂಧಿ ಅವರ ಹೆಸರು ಇರಿಸಿರುವುದನ್ನು ಸಮರ್ಥಿಸಿಕೊಂಡ ಖೇರಾ, ಅವರ ಸೇವೆ ಮತ್ತು ತ್ಯಾಗದ ಪ್ರತೀಕವಾಗಿ, ಅವರ ಸ್ಮರಣೆಗಾಗಿ ಹೆಸರು ಇರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

‘ಅನೇಕ ಅಡೆತಡೆಗಳ ಮಧ್ಯೆಯೂ ಸಾಧಕರನ್ನು ನೀಡಿರುವ ಈ ಮಣ್ಣಿನಲ್ಲಿ ವೈಶಿಷ್ಟ್ಯ ಇದೆ’ ಎಂಬ ಸರ್ದಾರ್‌ ಪಟೇಲ್‌ ಅವರ ಹೇಳಿಕೆಯನ್ನು ಕ್ರೀಡಾಂಗಣದ ವಿಷಯವನ್ನು ಪ್ರಸ್ತಾಪಿಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್‌ ಮಾಡಿದ್ದಾರೆ.

‘ಮಾತೃ ಸಂಘಟನೆ (ಆರ್‌ಎಸ್‌ಎಸ್‌)ಯನ್ನು ನಿಷೇಧಿಸಿದ್ದ ಪಟೇಲ್‌ ಅವರ ಹೆಸರನ್ನು ಬದಲಿಸಿರುವ ಬಿಜೆಪಿಯ ಕ್ರಮವು ಪ್ರತೀಕಾರದ್ದಾಗಿದೆ’ ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.