ADVERTISEMENT

ಪಾಕಿಸ್ತಾನದಲ್ಲಿ ಅಂಧರ T20 World Cup: ಹಸಿರುನಿಶಾನೆಗೆ ಕಾದಿರುವ ಭಾರತ ತಂಡ

ಪಿಟಿಐ
Published 13 ನವೆಂಬರ್ 2024, 14:42 IST
Last Updated 13 ನವೆಂಬರ್ 2024, 14:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ/ಕರಾಚಿ: ಪಾಕಿಸ್ತಾನದಲ್ಲಿ ನಡೆಯಲಿರುವ ಅಂಧರ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಭಾರತ ತಂಡಕ್ಕೆ ಕೇಂದ್ರ ಕ್ರೀಡಾ ಸಚಿವಾಲಯವು ನಿರಾಕ್ಷೇಪಣಾ ಪತ್ರ ನೀಡಿದೆ. ಇದೀಗ ತಂಡವು ಗೃಹ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅನುಮತಿಗಾಗಿ ಕಾಯುತ್ತಿದೆ. 

ಇದೇ 22ರಿಂದ ಡಿಸೆಂಬರ್ 3ರವರೆಗೆ ಲಾಹೋರ್ ಮತ್ತು ಮುಲ್ತಾನ್‌ನಲ್ಲಿ ಅಂಧರ ವಿಶ್ವಕಪ್ ಟೂರ್ನಿ ನಡೆಯಲಿದೆ. ಭಾರತವು ಹೋದ ಬಾರಿ ಚಾಂಪಿಯನ್ ಆಗಿತ್ತು. ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಅನುಮತಿ ದೊರೆತ ನಂತರ ಭಾರತ ತಂಡವು ನವೆಂಬರ್ 21ರಂದು ವಾಘಾ ಗಡಿಯ ಮೂಲಕ ಪಾಕ್‌ಗೆ ಪ್ರಯಾಣಿಸಲಿದೆ. 

ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಭಾರತ ಪುರುಷರ ತಂಡವನ್ನು ಕಳಿಸುವುದಿಲ್ಲವೆಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪಾಕ್‌ ಮಂಡಳಿಗೆ ಪತ್ರ ಬರದಿದೆ. ಇದೇ ಹೊತ್ತಿನಲ್ಲಿ ಅಂಧರ ತಂಡವು ಪಾಕ್‌ಗೆ ತೆರಳಲು ಸಮ್ಮತಿ ಪಡೆದುಕೊಂಡಿದೆ.

ADVERTISEMENT

ಗುರುಗ್ರಾಮದಲ್ಲಿ ನಡೆದ 12 ದಿನಗಳ ಆಯ್ಕೆ ಟ್ರಯಲ್ಸ್‌ನಲ್ಲಿ 26 ಆಟಗಾರರು ಭಾಗವಹಿಸಿದ್ದರು. ಅದರಲ್ಲಿ 17 ಆಟಗಾರರ ತಂಡವನ್ನು ಆಯ್ಕೆ ಮಾಡಲಾಗಿದೆ. 

‘ತಂಡವು ಗುರುಗ್ರಾಮದಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ತರಬೇತಿ ಪಡೆಯುತ್ತಿದೆ. ವಿದೇಶಾಂಗ ವ್ಯವಹಾರಗಳ  ಸಚಿವಾಲಯದಿಂದ ಅನುಮತಿಗಾಗಿ ಕಾಯಲಾಗುತ್ತಿದೆ. ಅನುಮತಿ ಲಭಿಸುವ ಭರವಸೆ ಇದೆ’ ಎಂದು ಭಾರತ ಅಂಧರ ಕ್ರಿಕೆಟ್‌ ಸಂಘಟನೆ (ಸಿಎಬಿಐ) ಮಹಾಪ್ರಧಾನ ಕಾರ್ಯದರ್ಶಿ ಶೈಲೆಂದರ್ ಯಾದವ್ ಹೇಳಿದ್ದಾರೆ. 

ಈ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ ಅಷ್ಟೇ ಅಲ್ಲ; ಅಫ್ಗಾನಿಸ್ತಾನ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ನೇಪಾಳ ಮತ್ತು ಶ್ರೀಲಂಕಾ ತಂಡಗಳೂ ಭಾಗವಹಿಸಲಿವೆ.

‘ಈಗಾಗಲೇ ನಿಗದಿಯಾಗಿರುವ ವೇಳಾಪಟ್ಟಿಗೆ ಅನುಗುಣವಾಗಿಯೇ ಪಾಕಿಸ್ತಾನವು ಟೂರ್ನಿಯನ್ನು ಆಯೋಜಿಸಲಿದೆ. ಭಾರತ ತಂಡ ಬರಲಿ, ಬಾರದೇ ಇರಲಿ ನಮಗೆನೂ ವ್ಯತ್ಯಾಸ ವಾಗದು’ ಎಂದು ಪಾಕಿಸ್ತಾನ ಅಂಧರ ಕ್ರಿಕೆಟ್ ಕೌನ್ಸಿಲ್ (ಪಿಬಿಸಿಸಿ) ಚೇರ್ಮನ್ ಸೈಯದ್ ಸುಲ್ತಾನ್ ಶಹಾ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.