ADVERTISEMENT

ಅಂಧ ಮಹಿಳೆಯರ ಕ್ರಿಕೆಟ್ 9ರಿಂದ

​ಪ್ರಜಾವಾಣಿ ವಾರ್ತೆ
Published 6 ಜನವರಿ 2023, 16:08 IST
Last Updated 6 ಜನವರಿ 2023, 16:08 IST
ಕರ್ನಾಟಕ ಅಂಧ ಮಹಿಳಾ ಕ್ರಿಕೆಟ್ ತಂಡದ ಆಲ್‌ರೌಂಡರ್ ಕಾವ್ಯಾ (ಎಡ), ನಾಯಕಿ ವರ್ಷಾ ಅವರೊಂದಿಗೆ  ಸಮರ್ಥನಂ ಟ್ರಸ್ಟ್‌ ಸಂಸ್ಥಾಪಕ ಕಾರ್ಯನಿರ್ವಾಹಕ ನಿರ್ದೇಶಕ ಜಿ.ಕೆ. ಮಹಾಂತೇಶ್  ಇದ್ದಾರೆ  –ಪ್ರಜಾವಾಣಿ ಚಿತ್ರ 
ಕರ್ನಾಟಕ ಅಂಧ ಮಹಿಳಾ ಕ್ರಿಕೆಟ್ ತಂಡದ ಆಲ್‌ರೌಂಡರ್ ಕಾವ್ಯಾ (ಎಡ), ನಾಯಕಿ ವರ್ಷಾ ಅವರೊಂದಿಗೆ  ಸಮರ್ಥನಂ ಟ್ರಸ್ಟ್‌ ಸಂಸ್ಥಾಪಕ ಕಾರ್ಯನಿರ್ವಾಹಕ ನಿರ್ದೇಶಕ ಜಿ.ಕೆ. ಮಹಾಂತೇಶ್  ಇದ್ದಾರೆ  –ಪ್ರಜಾವಾಣಿ ಚಿತ್ರ    

ಬೆಂಗಳೂರು: ಭಾರತ ಅಂಧರ ಕ್ರಿಕೆಟ್ ಸಂಸ್ಥೆ ಮತ್ತು ಸಮರ್ಥನಂ ಟ್ರಸ್ಟ್‌ ಫಾರ್ ದಿ ಡಿಸೇಬಲ್ಸ್‌ ಸಹಯೋಗದೊಂದಿಗೆ ಇದೇ 9ರಿಂದ 13ರವರೆಗೆ ಇಂಡಸ್ಇಂಡ್ ಬ್ಯಾಂಕ್ ಮಹಿಳಾ ರಾಷ್ಟ್ರೀಯ ಟಿ20 ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದೆ.

ಟೂರ್ನಿಯು ಲೀಗ್ ಮತ್ತು ನಾಕೌಟ್ ಮಾದರಿಯಲ್ಲಿ ನಡೆಯಲಿದೆ. 16 ರಾಜ್ಯಗಳ ತಂಡಗಳು ಸ್ಪರ್ಧಿಸಲಿವೆ. ಬರ್ಮಿಂಗ್ ಹ್ಯಾಮ್ ನ 2023ರ ವಿಶ್ವ ಅಂಧರ ಕ್ರೀಡಾಕೂಟದಲ್ಲಿ ಭಾಗವಹಿಸುವ ತಂಡವನ್ನೂ ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಗುವುದು.

ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಮರ್ಥನಂ ಟ್ರಸ್ಟ್ ಸಂಸ್ಥಾಪಕ ಜಿ.ಕೆ. ಮಹಾಂತೇಶ್, ‘ಪುರುಷರ ವಿಭಾಗದಲ್ಲಿ ಅಂಧರ ಕ್ರಿಕೆಟ್ ಇವತ್ತು ವಿಶ್ವಮಟ್ಟಕ್ಕೆ ಬೆಳೆದಿದೆ. ನಮ್ಮ ದೇಶದ ತಂಡವೂ ವಿಶ್ವ ಚಾಂಪಿಯನ್ ಆಗಿರುವುದು ಹೆಮ್ಮೆಯ ವಿಷಯ. ಇದೀಗ ಮಹಿಳಾ ತಂಡವೂ ಅಮೋಘ ಸಾಧನೆ ಮಾಡುತ್ತಿದೆ. ಇದರಿಂದಾಗಿ ಈ ವಿಭಾಗದಲ್ಲಿಯೂ ಉತ್ತಮ ಬೆಳವಣಿಗೆ ಇದೆ. ಎಲ್ಲ ರಾಜ್ಯಗಳ ಪ್ರತಿಭೆಗಳ ಉತ್ತೇಜನಕ್ಕಾಗಿ ರಾಷ್ಟ್ರೀಯ ಅಂಧ ಮಹಿಳೆಯರ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದೆ. ಹೋದ ವರ್ಷ ನಮ್ಮ ರಾಜ್ಯ ತಂಡವು ಚಾಂಪಿಯನ್ ಆಗಿತ್ತು’ ಎಂದರು.

ADVERTISEMENT

ಬೆಂಗಳೂರಿನ ನಾಲ್ಕು ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ. ಬೆಂಗಳೂರು, ಆಲ್ಟಿಯೋರ್ ಸ್ಪೋರ್ಟ್ಸ್ ಗ್ರೀನ್ ಪಾರ್ಕ್, ಸಚಿನ್ ತೆಂಡೂಲ್ಕರ್ ಟರ್ಫ್ ಗ್ರೌಂಡ್, ರಾಮಸಾಗರ, ಕ್ರಿಕ್ ಬಜ್ ಕ್ರಿಕೆಟ್ ಅಕಾಡೆಮಿ, ಚಂದಾಪುರ ಮತ್ತು ಬನ್ನೇರುಘಟ್ಟ ರಸ್ತೆಯ ಕ್ರಿಕ್ ಬಜ್ ಕ್ರಿಕೆಟ್ ಅಕಾಡೆಮಿಯಲ್ಲಿ 24 ಲೀಗ್ ಪಂದ್ಯಗಳು ನಡೆಯಲಿವೆ. ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಕ್ರಮವಾಗಿ ಜನವರಿ 12 ಮತ್ತು 13ರಂದು ಅಲ್ಟಿಯೊರ್ ಸ್ಪೋರ್ಟ್ಸ್ ಗ್ರೀನ್ ಪಾರ್ಕ್ ನಲ್ಲಿ ನಡೆಯಲಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ತಂಡದ ನಾಯಕಿ ವರ್ಷಾ ಹಾಗೂ ಆಲ್‌ರೌಂಡರ್ ಕಾವ್ಯಾ ತಮ್ಮ ಅನುಭವ ಹಂಚಿಕೊಂಡರು.

ಟೂರ್ನಿಯ ಉದ್ಘಾಟನೆಯು ಗಾಂಧಿನಗರದಲ್ಲಿರುವ ಜನವರಿ 8 ರಂದು ಸಂಜೆ 6:30 ಕ್ಕೆ ವಿವಿಡಸ್ ಹೋಟೆಲ್‌ನಲ್ಲಿ ನಡೆಯಲಿದೆ.

ಹರ್ಮನ್ ಪ್ರಚಾರ ರಾಯಭಾರಿ
ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರನ್ನು ಅಂಧ ಮಹಿಳೆಯರ ಕ್ರಿಕೆಟ್‌ಗೆ ಪ್ರಚಾರ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.