ಬೆಂಗಳೂರು: ಅಂಧ ಮಹಿಳೆಯರಿಗಾಗಿ ರಾಷ್ಟ್ರೀಯ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯು ಉದ್ಯಾನನಗರಿಯಲ್ಲಿ ಮಂಗಳವಾರದಿಂದ ನಡೆಯಲಿದ್ದು 14 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.
ನಗರದಲ್ಲಿ ಸೋಮವಾರ ನಡೆದ ಅಂಧರ ಕ್ರಿಕೆಟ್ ರಾಷ್ಟ್ರೀಯ ಸಮ್ಮೇಳನದಲ್ಲಿ ಈ ಕುರಿತು ಪ್ರಕಟಿಸಿ ಟೂರ್ನಿಯ ಟ್ರೋಫಿಗಳನ್ನು ಅನಾವರಣ ಮಾಡಲಾಯಿತು.
ಸಮರ್ಥನಂ ಸಂಸ್ಥೆಯ ಬೆಳ್ಳಿಹಬ್ಬದ ಸಂಭ್ರಮಾಚರಣೆಯನ್ನು ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಅಂಧ ಮಹಿಳೆಯರ ರಾಷ್ಟ್ರೀಯ ಟಿ20 ಟೂರ್ನಿ ಅದರಲ್ಲೊಂದು. ಮಾರ್ಚ್ 1ರಿಂದ ಮಾರ್ಚ್ 5ರವರೆಗೆ ಬೆಂಗಳೂರಿನ ಮೂರು ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ.14 ರಾಜ್ಯಗಳು ಪಾಲ್ಗೊಳ್ಳಲಿದ್ದು, 224 ಆಟಗಾರ್ತಿಯರು ಪಾಲ್ಗೊಳ್ಳಲಿದ್ದಾರೆ.
ಟೂರ್ನಿಯಲ್ಲಿ ವಿಜೇತ ತಂಡವು ₹ 1 ಲಕ್ಷ 4 ಸಾವಿರ ಮತ್ತು ಟ್ರೋಫಿಯನ್ನು ತನ್ನದಾಗಿಸಿಕೊಳ್ಳಲಿದೆ. ರನ್ನರ್ಸ್ ಅಪ್ ತಂಡವು ₹ 80 ಸಾವಿರ ಪಡೆಯಲಿದೆ. ಪಂದ್ಯಶ್ರೇಷ್ಠ ಆಟಗಾರ್ತಿಗೆ ಟ್ರೋಫಿ ಮತ್ತು ₹ 3 ಸಾವಿರ ಮತ್ತು ಸರಣಿ ಶ್ರೇಷ್ಠ ಆಟಗಾರ್ತಿಗೆ ₹ 10 ಸಾವಿರ ಬಹುಮಾನ ದೊರೆಯಲಿದೆ.
ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ರಾಜೇಶ್ವರಿ ಗಾಯಕವಾಡ್ ಅವರು ಟೂರ್ನಿಯ ರಾಯಭಾರಿಯಾಗಿದ್ದಾರೆ.
ಟೂರ್ನಿಯಲ್ಲಿ ಆಡಲಿರುವ ತಂಡಗಳು: ಕರ್ನಾಟಕ, ಒಡಿಶಾ, ರಾಜಸ್ಥಾನ್, ಜಾರ್ಖಂಡ್, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಕೇರಳ, ಗುಜರಾತ್, ದೆಹಲಿ, ಚಂಡೀಗಡ, ತಮಿಳುನಾಡು, ಹಾಗೂ ಪಶ್ಚಿಮ ಬಂಗಾಳ.
ಟೂರ್ನಿ ನಡೆಯುವ ಕ್ರೀಡಾಂಗಣಗಳು: ಸಚಿನ್ ತೆಂಡೂಲ್ಕರ್ ಟರ್ಫ್ ಕ್ರೀಡಾಂಗಣ, ಚಂದಾಪುರ, ಅಲ್ಟಾಯಿರ್ ಸ್ಪೋರ್ಟ್ಸ್ ದೊಮ್ಮಸಂದ್ರ ಮತ್ತು ನಿರ್ಮಾಣ್ ಕ್ರಿಕೆಟ್ ಚಂದಾಪುರ.
ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಅಂಧರ ಕ್ರಿಕೆಟ್ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿದರು.ಮಾರ್ಚ್ 13ರಿಂದ ಯುಎಇನಲ್ಲಿ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ತಂಡಗಳು ಎದುರು ನಡೆಯುವ ಅಂಧರ ಟಿ20 ತ್ರಿಕೋನ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಳ್ಳಲಿರುವ ಭಾರತ ಪುರುಷರ ತಂಡಕ್ಕೆ ರಾಜ್ಯಪಾಲರು ಶುಭ ಕೋರಿದರು. ಭಾರತ ತಂಡದ ಮಾಜಿ ಆಟಗಾರ ಸೈಯದ್ ಕೀರ್ಮಾನಿ, ತಂಡದ ಆಟಗಾರರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಂಜೆ ನೀಡಿದ ಕಾರ್ಯಕ್ರಮದಲ್ಲಿ ಮಹಿಳಾ ಟೂರ್ನಿಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಭಾರತ ತಂಡದ ಮಾಜಿ ಆಟಗಾರ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಮಾಜಿ ಕಾರ್ಯದರ್ಶಿ ಸುಧಾಕರ ರಾವ್,ಇಂಡಸ್ಇಂಡ್ ಬ್ಯಾಂಕ್ ಸಿಎಸ್ಆರ್ ವಿಭಾಗದ ಮುಖ್ಯಸ್ಥ ಮಟಿಲ್ಡಾ ಲೋಬೊ,ಯುನೈಟೆಡ್ ವೇ ಮುಂಬೈನ ಕಮ್ಯುನಿಟಿ ಇನ್ವೆಸ್ಟ್‌ಮೆಂಟ್ ಉಪಾಧ್ಯಕ್ಷ ಅನಿಲ್ ಪರ್ಮಾರ್, ಕೊಟಕ್ ಮಹೀಂದ್ರಾ ಬ್ಯಾಂಕ್‌ನ ಸಾಮಾಜಿಕ ಹೊಣೆಗಾರಿಕೆ ಮುಖ್ಯಸ್ಥೆ ಕೆ. ಪಲ್ಲವಿ ರಾಜ್, ರಾಷ್ಟ್ರೀಯ ಅಂಧರ ಕ್ರಿಕೆಟ್ ಸಂಸ್ಥೆಯ (ಸಿಎಬಿಐ) ಅಧ್ಯಕ್ಷ ಮತ್ತು ಸಮರ್ಥನಂ ಟ್ರಸ್ಟ್ ಸಂಸ್ಥಾಪಕ ವ್ಯವಸ್ಥಾಪನಾ ಟ್ರಸ್ಟಿ ಮಹಾಂತೇಶ್ ಕಿವಡಸಣ್ಣವರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.