ಬೆಂಗಳೂರು: ಗಂಗಾ (ಅಜೇಯ 77; 52 ಎ., 8X4) ಅವರ ಮತ್ತೊಂದು ಅರ್ಧಶತಕ ಹಾಗೂ ದೀಪಿಕಾ (ಅಜೇಯ 44; 47 ಎ.) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡವು ಇಲ್ಲಿ ನಡೆಯುತ್ತಿರುವ ಇಂಡಸ್‌ಇಂಡ್ ಬ್ಯಾಂಕ್ ಅಂಧ ಮಹಿಳೆಯರ ರಾಷ್ಟ್ರೀಯ ಟಿ20 ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ತಲುಪಿತು.
ಚಂದ್ರಾಪುರದ ಕ್ರಿಕ್‌ಬಜ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಟೂರ್ನಿಯ ತನ್ನ ಮೂರನೇ ಲೀಗ್ ಪಂದ್ಯದಲ್ಲಿ ಕರ್ನಾಟಕ 10 ವಿಕೆಟ್‌ಗಳಿಂದ ಗುಜರಾತ್ ತಂಡವನ್ನು ಸೋಲಿಸಿತು.
ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಗುಜರಾತ್ ತಂಡವನ್ನು 17 ಓವರ್‌ಗಳಲ್ಲಿ 6 ವಿಕೆಟ್‌ಗೆ 132 ರನ್‌ಗಳಿಗೆ ಕಟ್ಟಿಹಾಕಿತು. ನಂತರ ಗುರಿ ಬೆನ್ನಟ್ಟಿದ ರಾಜ್ಯ ತಂಡವು 15.2 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು. ಮೊದಲ ವಿಕೆಟ್‌ಗೆ ಗಂಗಾ ಮತ್ತು ದೀಪಿಕಾ 133 ರನ್‌ಗಳ ಜೊತೆಯಾಟವಾಡಿ ಗೆಲುವನ್ನು ಸುಲಭಗೊಳಿಸಿದರು.
ಕಳೆದ ಬಾರಿಯ ಚಾಂಪಿಯನ್ ಕರ್ನಾಟಕ ತಂಡವು ಆಲ್ಟಾಯರ್ ಸ್ಪೋರ್ಟ್ಸ್ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ನಾಲ್ಕರ ಘಟ್ಟದ ಪಂದ್ಯದಲ್ಲಿ ದೆಹಲಿ ತಂಡದ ಸವಾಲು ಎದುರಿಸಲಿದೆ. ದೆಹಲಿ ತಂಡವು ಸಚಿನ್ ತೆಂಡೂಲ್ಕರ್ ಕ್ರೀಡಾಂಗಣದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ 115 ರನ್‌ಗಳಿಂದ ತಮಿಳುನಾಡು ತಂಡದ ವಿರುದ್ಧ ಜಯ ಗಳಿಸಿ ಮುಂದಿನ ಸುತ್ತಿಗೆ ಅರ್ಹತೆ ಗಳಿಸಿತು.
ಒಡಿಶಾ ಮತ್ತು ಆಂಧ್ರಪ್ರದೇಶ ತಂಡಗಳು ಸಹ ಸೆಮಿಫೈನಲ್ಸ್ ಪ್ರವೇಶಿಸಿದವು.
ಸಂಕ್ಷಿಪ್ತ ಸ್ಕೋರ್: ಗುಜರಾತ್: 17 ಓವರ್‌ಗಳಲ್ಲಿ 6 ವಿಕೆಟ್‌ಗೆ 132 (ಚೇತ್ನಬೇನ್ ರತ್‌ಭಾಯಿ 30, ಪ್ರೀತಿ ದೇಸಾಯಿ 28; ದೀಪಿಕಾ 16ಕ್ಕೆ 1, ವರ್ಷಾ 28ಕ್ಕೆ 1). ಕರ್ನಾಟಕ: 15.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 133 ( ಗಂಗಾ ಅಜೇಯ 77, ದೀಪಿಕಾ ಅಜೇಯ 44). ಫಲಿತಾಂಶ: ಕರ್ನಾಟಕ ತಂಡಕ್ಕೆ 10 ವಿಕೆಟ್‌ಗಳ ಜಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.