ಲಂಡನ್: ‘ಚೆಂಡಿನಿಂದ ತಮಗೆ ಏಟು ಮಾಡಿದ ಏಕೈಕ ಬೌಲರ್ ಬಾಬ್ ವಿಲ್ಲಿಸ್. ಅವರನ್ನು ಎದುರಿಸುವುದೇ ಭಯ ಮೂಡಿಸುತಿತ್ತು’ ಎಂದು ಭಾರತದ ಮಾಜಿ ಆಲ್‌ರೌಂಡರ್ ಕಪಿಲ್ ದೇವ್ ಸ್ಮರಿಸಿದ್ದಾರೆ.
ಇಂಗ್ಲೆಂಡ್ ತಂಡದ ಮಾಜಿ ನಾಯಕ ಹಾಗೂ ವೇಗದ ಬೌಲರ್ ಬಾಬ್ ವಿಲ್ಲಿಸ್ (70) ಬುಧವಾರ ನಿಧನರಾಗಿದ್ದರು.
ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್‌ವೊಂದ ರಲ್ಲಿ ತಮ್ಮ ಸಿಗ್ನೇಚರ್ ಹೊಡೆತ– ಒಂಟಿಗಾಲಿನ (ನಟರಾಜ) ಪುಲ್ ಶಾಟ್‌ಗೆ ಯತ್ನಿಸಿದಾಗ ಕಪಿಲ್ ಅವರಿಗೆ ಚೆಂಡು ಬಡಿದಿತ್ತು. ‘ನಾನು ಅಂದಾಜು ಮಾಡಿದ್ದಕ್ಕಿಂತ ಚೆಂಡು ವೇಗವಾಗಿ ಧಾವಿಸಿ ಬಂತು. ನನ್ನ ಕಿವಿಗೆ ಬಡಿಯಿತು. ನಾನು ಚೆಂಡಿನಿಂದ ಪೆಟ್ಟು ತಿಂದಿದ್ದು ಅದೊಂದೇ ಸಲ’ ಎಂದು ಕಪಿಲ್ ದೇವ್ ನುಡಿನಮನ ಸಲ್ಲಿಸಿದ್ದಾರೆ.
ವಿಲ್ಲಿಸ್ 1982 ರಿಂದ 1984 ರವರೆಗೆ (18 ಟೆಸ್ಟ್‌ಗಳಿಗೆ) ತಂಡದ ನಾಯಕರಾಗಿದ್ದರು. ಒಟ್ಟು 90 ಟೆಸ್ಟ್ ಗಳನ್ನು ಆಡಿರುವ ಅವರು 325 ವಿಕೆಟ್‌ಗಳನ್ನು ಪಡೆದಿದ್ದರು. 1981ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೆಡಿಂಗ್ಲೆಯಲ್ಲಿ ನಡೆದ ಆ್ಯಷಸ್ ಸರಣಿಯ ಮೂರನೇ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ 43 ರನ್‌ಗಳಿಗೆ 8 ವಿಕೆಟ್ ಪಡೆದು ಸ್ಮರ ಣೀಯ ಸಾಧನೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.