ADVERTISEMENT

ಲೋಧಾ ಶಿಫಾರಸುಗಳು ಶೀಘ್ರವೇ ಜಾರಿಯಾಗಲಿ: ಮಮತಾ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2018, 19:41 IST
Last Updated 19 ಡಿಸೆಂಬರ್ 2018, 19:41 IST
ನಗರದ ದಿ ಚಾನ್ಸರಿ ಹೊಟೇಲ್‌ನಲ್ಲಿ ಬುಧವಾರ ನಡೆದ ‘ದಿ ಫೈರ್ ಬರ್ನ್ಸ್ ಬ್ಲೂ’ ಪುಸ್ತಕವನ್ನು ಹಿರಿಯ ಕ್ರಿಕೆಟ್ ಆಟಗಾರ್ತಿ ಪ್ರಮೀಳಾ ಭಟ್ ಬಿಡುಗಡೆ ಮಾಡಿ ಲೇಖಕಿ ಕಾರುಣ್ಯ ಕೇಶವ್ ಅವರಿಗೆ ನೀಡಿದರು (ಎಡದಿಂದ) ಹಿರಿಯ ಆಟಗಾರ್ತಿ ಮಮತಾ ಮಾಬೆನ್, ಪತ್ರಕರ್ತ ಸುರೇಶ್ ಮೆನನ್ ಹಾಗೂ ಪುಸ್ತಕದ ಲೇಖಕ ಸಿದ್ಧಾಂತ್‌ ಪಟ್ನಾಯಕ್ ಇದ್ದಾರೆ –ಪ್ರಜಾವಾಣಿ ಚಿತ್ರ
ನಗರದ ದಿ ಚಾನ್ಸರಿ ಹೊಟೇಲ್‌ನಲ್ಲಿ ಬುಧವಾರ ನಡೆದ ‘ದಿ ಫೈರ್ ಬರ್ನ್ಸ್ ಬ್ಲೂ’ ಪುಸ್ತಕವನ್ನು ಹಿರಿಯ ಕ್ರಿಕೆಟ್ ಆಟಗಾರ್ತಿ ಪ್ರಮೀಳಾ ಭಟ್ ಬಿಡುಗಡೆ ಮಾಡಿ ಲೇಖಕಿ ಕಾರುಣ್ಯ ಕೇಶವ್ ಅವರಿಗೆ ನೀಡಿದರು (ಎಡದಿಂದ) ಹಿರಿಯ ಆಟಗಾರ್ತಿ ಮಮತಾ ಮಾಬೆನ್, ಪತ್ರಕರ್ತ ಸುರೇಶ್ ಮೆನನ್ ಹಾಗೂ ಪುಸ್ತಕದ ಲೇಖಕ ಸಿದ್ಧಾಂತ್‌ ಪಟ್ನಾಯಕ್ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಲೋಧಾ ಸಮಿತಿಯ ಶಿಫಾರಸುಗಳು ಶೀಘ್ರವೇ ಜಾರಿಯಾಗಬೇಕು. ಆಗ ಮಹಿಳಾ ಕ್ರಿಕೆಟ್‌ನ ಅಭಿವೃದ್ಧಿ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ’ ಎಂದು ಹಿರಿಯ ಆಟಗಾರ್ತಿ ಮಮತಾ ಮಾಬೆನ್‌ ಬುಧವಾರ ತಿಳಿಸಿದರು.

ಪತ್ರಕರ್ತರಾದ ಕಾರುಣ್ಯ ಕೇಶವ್‌ ಮತ್ತು ಸಿದ್ಧಾಂತ್ ಪಟ್ನಾಯಕ್‌ ಅವರು ಬರೆದಿರುವ ‘ದಿ ಫೈರ್‌ ಬರ್ನ್ಸ್‌ ಬ್ಲೂ: ಎ ಹಿಸ್ಟರಿ ಆಫ್‌ ವುಮೆನ್ಸ್‌ ಕ್ರಿಕೆಟ್‌ ಇನ್‌ ಇಂಡಿಯಾ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾವು ಆಡುತ್ತಿದ್ದ ಕಾಲಘಟ್ಟಕ್ಕೆ ಹೋಲಿಸಿದರೆ ಈಗ ಮಹಿಳಾ ಕ್ರಿಕೆಟ್‌ ಸಾಕಷ್ಟು ಅಭಿವೃದ್ಧಿಯಾಗಿದೆ. ಆಗೆಲ್ಲಾ ಸೈಕಲ್‌ ಟ್ರ್ಯಾಕ್‌ನಂತಿದ್ದ ಪಿಚ್‌ಗಳಲ್ಲಿ ಪಂದ್ಯಗಳು ನಡೆಯುತ್ತಿದ್ದವು. ಈಗ ಸುಸಜ್ಜಿತ ಮೈದಾನಗಳಲ್ಲಿ ಪಂದ್ಯಗಳು ಆಯೋಜನೆಯಾಗುತ್ತಿವೆ. ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಮಹಿಳಾ ಕ್ರಿಕೆಟ್‌ನ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ’ ಎಂದರು.

ADVERTISEMENT

‘1995ರಲ್ಲಿ ನಡೆದಿದ್ದ ನ್ಯೂಜಿಲೆಂಡ್‌ ಎದುರಿನ ಸರಣಿಯಲ್ಲಿ ನಾವು ‍ಪ‍್ರಶಸ್ತಿ ಗೆದ್ದಿದ್ದೆವು. ಆ ಸಾಧನೆ ಮಹಿಳಾ ಕ್ರಿಕೆಟ್‌ಗೆ ಹೊಸ ಆಯಾಮ ನೀಡಿತು. 2017ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ಫೈನಲ್‌ ಪ್ರವೇಶಿಸಿದ ನಂತರ ಮಹಿಳಾ ಕ್ರಿಕೆಟ್‌ನ ಜನಪ್ರಿಯತೆ ಹೆಚ್ಚಿತು’ ಎಂದು ಹಿರಿಯ ಆಟಗಾರ್ತಿ ಪ್ರಮೀಳಾ ಭಟ್‌ ಹೇಳಿದರು.

‘ಆಟಗಾರ್ತಿಯರು ಎದುರಿಸುತ್ತಿರುವ ಸವಾಲುಗಳು, ಮಹಿಳಾ ಕ್ರಿಕೆಟ್‌ನಲ್ಲಿ ಆಗಬೇಕಾದ ಬದಲಾವಣೆಗಳು ಹೀಗೆ ಹಲವು ವಿಷಯಗಳ ಬಗ್ಗೆ ಪುಸ್ತಕದಲ್ಲಿ ಬೆಳಕು ಚೆಲ್ಲಲಾಗಿದೆ’ ಎಂದು ಲೇಖಕರಾದ ಕಾರುಣ್ಯ ಮತ್ತು ಸಿದ್ಧಾಂತ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.