ಬೆಂಗಳೂರು: ಗಾಯದಿಂದ ಚೇತರಿಸಿಕೊಂಡು ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿರುವ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಮಂಗಳವಾರ ಚಿನ್ನಸ್ವಾಮಿ ಅಂಗಳದಲ್ಲಿ ಬೌಲಿಂಗ್ ಅಭ್ಯಾಸ ಮಾಡಲಿಲ್ಲ. ಆದರೆ, ಅತ್ತ ಪಕ್ಕದಲ್ಲಿಯೇ ಅಭ್ಯಾಸ ಮಾಡುತ್ತಿದ್ದ ಆರ್‌ಸಿಬಿ ತಂಡದ ನೆಟ್ಸ್‌ನಲ್ಲಿ ಅಚ್ಚರಿಯೊಂದು ಗಮನ ಸೆಳೆದಿತ್ತು.
ಬೂಮ್ರಾ ಅವರ ‘ಸ್ಲಿಂಗ್ ಆರ್ಮ್’ ಶೈಲಿಯಲ್ಲಿಯೇ ಬೌಲಿಂಗ್ ಮಾಡುತ್ತಿದ್ದ ಯುವಕ ಮಹೇಶಕುಮಾರ್ ಅವರೇ ಆ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಮಹೇಶ್ ಅವರ ರನ್ ಅಪ್ ಮತ್ತು ಬೌಲ್ ರಿಲೀಸ್ ಎಲ್ಲವೂ ಥೇಟ್ ಬೂಮ್ರಾ ಅವರಂತೆಯೇ ಇತ್ತು.
‘2017ರಲ್ಲಿ ಇಂಗ್ಲೆಂಡ್ ವಿರುದ್ಧದ ಟ್ವೆಂಟಿ–20 ಪಂದ್ಯ ಇಲ್ಲಿ ನಡೆದಿದ್ದಾಗ ನೆಟ್ಸ್‌ನಲ್ಲಿ ಬೌಲಿಂಗ್ ಮಾಡುವ ಅವಕಾಶ ಪಡೆದಿದ್ದೆ. ಭಾರತ ತಂಡದ ಆಟಗಾರರು ಮೆಚ್ಚಿಕೊಂಡಿದ್ದರು. ಆದ್ದರಿಂದ ಆಗಿನಿಂದ ಇಲ್ಲಿ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಲು ಅವಕಾಶ ಸಿಗುತ್ತಿದೆ’ ಎಂದು 22 ವರ್ಷದ ಮಹೇಶ್ ಹೇಳುತ್ತಾರೆ.
‘ಅತ್ಯಂತ ಖುಷಿ ಕೊಡುವ ಅನುಭವ ಇದು. ಕೊಹ್ಲಿ ಜೊತೆಗೆ ಮಾತನಾಡುವುದು ಬಹಳ ವಿಶೇಷ ಸಂದರ್ಭ. ಆರ್‌ಸಿಬಿ ಕೋಚ್ ಆಶಿಶ್ ನೆಹ್ರಾ ಅವರು ಬೂಟು ಕಾಣಿಕೆ ನೀಡಿದ್ದಾರೆ’ ಎಂದು ಹೇಳುತ್ತಾರೆ.
ಸಾಯಿ ವಿದ್ಯಾ ತಾಂತ್ರಿಕ ಮಹಾವಿದ್ಯಾಲಯದಿಂದ ಎಂಜಿನಿಯರಿಂಗ್ ಪದವಿ ಗಳಿಸಿರುವ ಮಹೇಶ್ ಕುಮಾರ್ ಅವರು ಬೆಂಗಳೂರು ಒಕೆಷನಲ್ಸ್ ಮತ್ತು ವಿ.ವಿ. ಪುರಂ ಕ್ರಿಕೆಟ್ ಕ್ಲಬ್‌ಗಳಲ್ಲಿಯೂ ಕೆಲವು ವರ್ಷ ಆಡಿದ್ದರು.
‘ಬೂಮ್ರಾ ಅವರ ಆಟವನ್ನು ನೋಡುವ ಮುನ್ನವೇ ನನ್ನ ಶೈಲಿ ಹೀಗೆ ಇತ್ತು. ಇದು ನೈಜವಾಗಿ ಬಂದ ಶೈಲಿ. ನಾನು ಎಂಜಿನಿಯರ್ ಆಗಬೇಕು ಎಂಬುದು ನನ್ನ ತಂದೆಯ ಕನಸಾಗಿತ್ತು. ಅದಕ್ಕೆ ಅದನ್ನು ಮಾಡಿದೆ. ಈಗ ಕ್ರಿಕೆಟಿಗನಾಗುವ ನನ್ನ ಕನಸನ್ನು ಸಾಕಾರಗೊಳಿಸಿಕೊಳ್ಳುವ ಕಾಲ’ ಎಂದು ಮಹೇಶ್ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.