ಅಡಿಲೇಡ್: ಆಸ್ಟ್ರೇಲಿಯಾದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಜಯಿಸುವ ಭಾರತದ ಕನಸು ಈ ಬಾರಿ ಕೈಗೂಡುವುದೇ..? ಕಾಂಗರೂಗಳ ನಾಡಿನಲ್ಲಿ ವಿರಾಟ್ ಕೊಹ್ಲಿ ಬಳಗ ಇತಿಹಾಸ ನಿರ್ಮಿಸಲಿದೆಯೇ..?
ಸದ್ಯ ಭಾರತದ ಕ್ರಿಕೆಟ್ ಪ್ರಿಯರನ್ನು ಕಾಡುತ್ತಿರುವ ಪ್ರಶ್ನೆಗಳಿವು.
ಏಳು ದಶಕಗಳ ಹಿಂದೆ ಲಾಲಾ ಅಮರನಾಥ್ ಸಾರಥ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಆಗ ನಡೆದಿದ್ದ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಡಾನ್ ಬ್ರಾಡ್ಮನ್ ಬಳಗ 4–0ಯಿಂದ ಗೆದ್ದಿತ್ತು. ಅನಂತರ ಭಾರತ 10 ಬಾರಿ ಆಸ್ಟ್ರೇಲಿಯಾಕ್ಕೆ ಹೋಗಿದೆ. ಹೀಗಿದ್ದರೂ ಟೆಸ್ಟ್ ಸರಣಿ ಗೆಲ್ಲಲು ಆಗಿಲ್ಲ. ಈ ಬಾರಿ ಕೊಹ್ಲಿ ಪಡೆ ಟ್ರೋಫಿಗೆ ಮುತ್ತಿಕ್ಕುವ ಮೂಲಕ ಈ ಕೊರಗು ದೂರ ಮಾಡುವ ನಿರೀಕ್ಷೆ ಗರಿಗೆದರಿದೆ.
ಬಾರ್ಡರ್–ಗಾವಸ್ಕರ್ ಸರಣಿಯ ಮೊದಲ ಪಂದ್ಯಗುರುವಾರದಿಂದ (ಭಾರತೀಯ ಕಾಲಮಾನ ಬೆಳಿಗ್ಗೆ 5.30) ನಡೆಯಲಿದೆ. ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ಆಯೋಜನೆಯಾಗಿರುವ ಈ ಹಣಾಹಣಿಯಲ್ಲಿ ಭಾರತವೇ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ.
ಸ್ಟೀವನ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಕ್ಯಾಮರೂನ್ ಬ್ಯಾಂಕ್ರಾಫ್ಟ್ ಅವರು ಚೆಂಡು ವಿರೂಪ ಪ್ರಕರಣದಲ್ಲಿ ಭಾಗಿಯಾಗಿದ್ದರು. ಹೀಗಾಗಿ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಇವರ ಮೇಲೆ ನಿಷೇಧ ಹೇರಿದೆ. ಇವರ ಅನುಪಸ್ಥಿತಿಯಲ್ಲಿ ಆತಿಥೇಯ ತಂಡ ಸೊರಗಿದಂತೆ ಕಾಣುತ್ತಿದೆ. ಇತ್ತೀಚೆಗೆ ನಡೆದಿದ್ದ ಪಾಕಿಸ್ತಾನ ಎದುರಿನ ಟೆಸ್ಟ್ ಸರಣಿಯಲ್ಲಿ ಪೇನ್ ಪಡೆ ಸೋತಿರುವುದು ಇದಕ್ಕೆ ನಿದರ್ಶನ.
ತವರಿನಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ಎದುರಿನ ಸರಣಿಯಲ್ಲಿ ಪ್ರಶಸ್ತಿ ಜಯಿಸಿ ಇಲ್ಲಿಗೆ ಬಂದಿರುವ ವಿರಾಟ್ ಬಳಗ ವಿಶ್ವಾಸದ ಗಣಿಯಾಗಿದೆ. ವಿಂಡೀಸ್ ಎದುರಿನ ಸರಣಿಯಲ್ಲಿ ಮಿಂಚಿದ್ದ ಪೃಥ್ವಿ ಶಾ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಅಭ್ಯಾಸ ಪಂದ್ಯದ ವೇಳೆ ಅವರು ಗಾಯಗೊಂಡಿದ್ದರು. ಪೃಥ್ವಿ ಅನುಪಸ್ಥಿತಿಯಲ್ಲಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಡುವ ಜವಾಬ್ದಾರಿ ಕೆ.ಎಲ್.ರಾಹುಲ್ ಮತ್ತು ಮುರಳಿ ವಿಜಯ್ ಅವರ ಮೇಲಿದೆ.
ನಾಯಕ ಕೊಹ್ಲಿ ಎಲ್ಲರ ಆಕರ್ಷಣೆಯಾಗಿದ್ದಾರೆ. ಈ ವರ್ಷ ಟೆಸ್ಟ್ ಮಾದರಿಯಲ್ಲಿ ಅತಿ ಹೆಚ್ಚು ರನ್ (18 ಪಂದ್ಯಗಳಿಂದ 1,063) ಗಳಿಸಿದ ಬ್ಯಾಟ್ಸ್‌ಮನ್ ಎಂಬ ಹಿರಿಮೆ ಹೊಂದಿರುವ ಅವರು ಆಸ್ಟ್ರೇಲಿಯಾ ಬೌಲರ್‌ಗಳನ್ನು ಕಾಡಲು ತಯಾರಾಗಿದ್ದಾರೆ.
ಅಜಿಂಕ್ಯ ರಹಾನೆ, ರಿಷಭ್ ಪಂತ್, ಚೇತೇಶ್ವರ ಪೂಜಾರ, ರೋಹಿತ್ ಶರ್ಮಾ ಮತ್ತು ಹನುಮ ವಿಹಾರಿ ಅವರು ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಬಲ ತುಂಬುವ ಸಾಮರ್ಥ್ಯ ಹೊಂದಿದ್ದಾರೆ. ಇವರು ಜೋಶ್ ಹ್ಯಾಜಲ್‌ವುಡ್, ಮಿಷೆಲ್ ಸ್ಟಾರ್ಕ್, ಪೀಟರ್ ಸಿಡ್ಲ್ ಅವರ ಬಿರುಗಾಳಿ ವೇಗದ ಎಸೆತಗಳನ್ನು ಹೇಗೆ ಎದುರಿಸುತ್ತಾರೆ ಎಂಬ ಕುತೂಹಲ ಗರಿಗೆದರಿದೆ.
ತಂಡಗಳು ಇಂತಿವೆ
ಭಾರತ: ವಿರಾಟ್ ಕೊಹ್ಲಿ (ನಾಯಕ), ಮುರಳಿ ವಿಜಯ್, ಕೆ.ಎಲ್.ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ರೋಹಿತ್ ಶರ್ಮಾ, ರಿಷಭ್ ಪಂತ್, ಪಾರ್ಥೀವ್ ಪಟೇಲ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಉಮೇಶ್ ಯಾದವ್, ಜಸ್‌ಪ್ರೀತ್ ಬೂಮ್ರಾ ಮತ್ತು ಭುವನೇಶ್ವರ ಕುಮಾರ್.
ಆಸ್ಟ್ರೇಲಿಯಾ: ಟಿಮ್ ಪೇನ್ (ನಾಯಕ), ಜೋಶ್ ಹ್ಯಾಜಲ್‌ವುಡ್, ಮಿಷೆಲ್ ಮಾರ್ಷ್, ಪ್ಯಾಟ್ ಕಮಿನ್ಸ್, ಆ್ಯರನ್ ಫಿಂಚ್, ಪೀಟರ್ ಹ್ಯಾಂಡ್ಸ್‌ಕಂಬ್, ಮಾರ್ಕಸ್ ಹ್ಯಾರಿಸ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜ, ನೇಥನ್ ಲಿಯೊನ್, ಶಾನ್ ಮಾರ್ಷ್, ಪೀಟರ್ ಸಿಡ್ಲ್, ಮಿಷೆಲ್ ಸ್ಟಾರ್ಕ್ ಮತ್ತು ಕ್ರಿಸ್ ಟ್ರೆಮೈನ್.
ಆರಂಭ: ಬೆಳಿಗ್ಗೆ 5.30 (ಗುರುವಾರ)
***
ಚೆಂಡು ವಿರೂಪ ಪ್ರಕರಣದಿಂದ ಆಟಗಾರರು ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ. ಭಾರತದ ಎದುರು ಟೆಸ್ಟ್ ಸರಣಿ ಗೆದ್ದು ಹಿಂದಿನ ಕಹಿ ಘಟನೆ ಮರೆಯಲು ಪ್ರಯತ್ನಿಸುತ್ತೇವೆ.
– ಟಿಮ್ ಪೇನ್, ಆಸ್ಟ್ರೇಲಿಯಾ ತಂಡದ ನಾಯಕ
ತಂಡದಲ್ಲಿ ಯುವ ಮತ್ತು ಅನುಭವಿ ಆಟಗಾರರಿದ್ದಾರೆ. ಎಲ್ಲರೂ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರೆ ಸರಣಿ ಜಯಿಸುವುದು ಕಷ್ಟವಾಗಲಾರದು.
–ವಿರಾಟ್ ಕೊಹ್ಲಿ, ಭಾರತ ತಂಡದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.