ಕ್ರೈಸ್ಟ್ ಚರ್ಚ್, ನ್ಯೂಜಿಲೆಂಡ್: ವೇಗದ ಬೌಲರ್ ಟ್ರೆಂಟ್ ಬೌಲ್ಟ್ (43ಕ್ಕೆ5) ಅವರ ಭರ್ಜರಿ ದಾಳಿಗೆ ಬಾಂಗ್ಲಾದೇಶ ಬ್ಯಾಟರ್‌ಗಳು ನಿರುತ್ತರರಾದರು. ಇದರ ಪರಿಣಾಮ, ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಭರ್ಜರಿ ಮುನ್ನಡೆ ಸಾಧಿಸಿತು. 5 ವಿಕೆಟ್ ಉರುಳಿಸಿದ ಬೌಲ್ಟ್ ದಾಳಿಯಿಂದಾಗಿ ಬಾಂಗ್ಲಾದೇಶ ಮೊದಲ ಇನಿಂಗ್ಸ್‌ನಲ್ಲಿ 126 ರನ್‌ಗಳಿಗೆ ಆಲೌಟಾಯಿತು. ಈ ಮೂಲಕ ಆತಿಥೇಯ ತಂಡಕ್ಕೆ 395 ರನ್‌ಗಳ ಮುನ್ನಡೆ ಬಿಟ್ಟುಕೊಟ್ಟಿತು.
ಆರಂಭಿಕ ಬ್ಯಾಟರ್ ಟಾಮ್ ಲಥಾಮ್ (252; 373 ಎಸೆತ, 34 ಬೌಂಡರಿ, 2 ಸಿಕ್ಸರ್) ಅವರ ದ್ವಿಶತಕ ಮತ್ತು ಡೇವಾನ್ ಕಾನ್ವೆ (109; 166 ಎ, 12 ಬೌಂ, 1 ಸಿ) ಅವರ ಭರ್ಜರಿ ಆಟದ ಬೆನ್ನಲ್ಲೇ ಟಾಮ್ ಬ್ಲಂಡೆಲ್ (57; 60 ಎ, 8 ಬೌಂ) ಕೂಡ ಅಮೋಘ ಬ್ಯಾಟಿಂಗ್ ಮಾಡಿದರು. ಹೀಗಾಗಿ ನ್ಯೂಜಿಲೆಂಡ್ 6 ವಿಕೆಟ್‌ಗಳಿಗೆ 521 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿತು.
ಬಾಂಗ್ಲಾದೇಶದ ಮೊದಲ 5 ಮಂದಿ ಎರಡಂಕಿ ಮೊತ್ತ ದಾಟದೆ ಮರಳಿದರು. ಈ ಪೈಕಿ ಮೊಹಮ್ಮದ್ ನಯೀಮ್ ಮತ್ತು ಮೊಮಿನುಲ್ ಹಕ್ ಶೂನ್ಯಕ್ಕೆ ಔಟಾದರು. ಈ ಸಂದರ್ಭದಲ್ಲಿ ಜೊತೆಗೂಡಿದ ಯಾಸಿರ್ ಅಲಿ (55; 95 ಎ, 7 ಬೌಂ) ಮತ್ತು ನೂರುಲ್ ಹಸನ್ (41, 62 ಎ, 6 ಬೌಂ) ಸ್ವಲ್ಪ ಪ್ರತಿರೋಧ ಒಡ್ಡಿದರು. ಕೊನೆಯ ನಾಲ್ವರು ಬ್ಯಾಟರ್‌ಗಳು ಕೂಡ ಎರಡಂಕಿ ದಾಟದೆ ಔಟಾದರು. ದಿನದಾಟದ ಕೊನೆಯ ಓವರ್‌ನಲ್ಲಿ ಬಾಂಗ್ಲಾದೇಶದ ಕೊನೆಯ ವಿಕೆಟ್ ಉರುಳಿಸಿತು.
ಸಂಕ್ಷಿಪ್ತ ಸ್ಕೋರು
ಮೊದಲ ಇನಿಂಗ್ಸ್: ನ್ಯೂಜಿಲೆಂಡ್: 128.5 ಓವರ್‌ಗಳಲ್ಲಿ 6ಕ್ಕೆ 521 ಡಿಕ್ಲೇರ್ (ಟಾಮ್ ಲಥಾಮ್ 252, ಡೇವಾನ್ ಕಾನ್ವೆ 109, ರಾಸ್ ಟೇಲರ್ 28, ಟಾಮ್ ಬ್ಲಂಡೆಲ್ ಔಟಾಗದೆ 57; ಷರೀಫುಲ್ ಇಸ್ಲಾಂ 79ಕ್ಕೆ2, ಇಬಾದತ್ ಹೊಸೇನ್ 143ಕ್ಕೆ2, ಮೊಮಿನುಲ್ ಹಕ್34ಕ್ಕೆ1)
ಬಾಂಗ್ಲಾದೇಶ: 41.2 ಓವರ್‌ಗಳಲ್ಲಿ 126 (ಯಾಸಿರ್ ಅಲಿ 55, ನೂರುಲ್ ಇಸ್ಲಾಂ 41; ಟಿಮ್ ಸೌಥಿ 28ಕ್ಕೆ3, ಟ್ರೆಂಟ್ ಬೌಲ್ಟ್ 43ಕ್ಕೆ5, ಕೈಲ್ ಜೆಮೀಸನ್32ಕ್ಕೆ2).
ಎಜಾಜ್ ಪಟೇಲ್ ಐಸಿಸಿ ತಿಂಗಳ ಆಟಗಾರ
ನ್ಯೂಜಿಲೆಂಡ್ ಸ್ಪಿನ್ನರ್ ಎಜಾಜ್ ಪಟೇಲ್ ಅವರನ್ನು ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮುಂಬೈಯಲ್ಲಿ ಕಳೆದ ತಿಂಗಳು ನಡೆದ ಟೆಸ್ಟ್‌ನಲ್ಲಿ ಅವರು ಒಂದೇ ಇನಿಂಗ್ಸ್‌ನ 10 ವಿಕೆಟ್ ಗಳಿಸಿದ್ದರು. ಈ ಸಾಧನೆ ಮಾಡಿದ ವಿಶ್ವದ ಮೂರನೇ ಬೌಲರ್ ಆಗಿದ್ದಾರೆ ಅವರು.
ಭಾರತದಲ್ಲಿ ಜನಿಸಿ ನ್ಯೂಜಿಲೆಂಡ್‌ನಲ್ಲಿ ಬೆಳೆದ ಎಡಗೈ ಸ್ಪಿನ್ನರ್ ಅವರಿಗೆ ತಿಂಗಳ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ ಭಾರತದ ಮಯಂಕ್ ಅಗರವಾಲ್ ಮತ್ತು ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಭಾರಿ ಸವಾಲೊಡ್ಡಿದ್ದರು. ಆದರೆ ಅಂತಿಮವಾಗಿ ಎಜಾಜ್ ಅವರನ್ನೇ ಆಯ್ಕೆ ಮಾಡಲು ಐಸಿಸಿ ನಿರ್ಧರಿಸಿದೆ. ಮುಂಬೈ ಟೆಸ್ಟ್‌ನಲ್ಲಿ ಅವರು ಒಟ್ಟು 14 ವಿಕೆಟ್ ಉರುಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.