ADVERTISEMENT

ವೆಸ್ಟ್‌ ಇಂಡೀಸ್‌ ಮಾಜಿ ಕ್ರಿಕೆಟಿಗ ಲಾರಾಗೆ ಎದೆ ನೋವು; ಆಸ್ಪತ್ರೆಗೆ ದಾಖಲು

ಮುಂಬೈ

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 15:53 IST
Last Updated 25 ಜೂನ್ 2019, 15:53 IST
   

ಮುಂಬೈ: ವೆಸ್ಟ್ ಇಂಡೀಸ್‌ ತಂಡದ ಮಾಜಿ ಕ್ರಿಕೆಟಿಗ ಬ್ರಯನ್‌ ಲಾರಾ ಎದೆ ನೋವಿನಿಂದಾಗಿ ಮಂಗಳವಾರ ಆಸ್ಪತ್ರೆಗೆ ದಾಖಲಾಗಿದ್ದು, ಆಂಜಿಯೋಗ್ರಫಿಗೆ ಒಳಗಾಗಿದ್ದಾರೆ.

ಇಲ್ಲಿನ ಪರಲ್‌ನ ಗ್ಲೋಬಲ್‌ ಹಾಸ್ಪಿಟಲ್‌ನಲ್ಲಿ ದಾಖಲಾಗಿರುವ ಲಾರಾ ಅವರ ಆರೋಗ್ಯದ ಕುರಿತು ಆಸ್ಪತ್ರೆ ಇನ್ನಷ್ಟೇ ಪ್ರಕಟಣೆ ಬಿಡುಗಡೆ ಮಾಡಬೇಕಿದೆ.

ಮಾಧ್ಯಮಗಳ ವರದಿಗಳ ಪ್ರಕಾರ, ಆಸ್ಪತ್ರೆಯ ವೈದ್ಯರು ಲಾರಾ ಅವರಿಗೆ ಆಂಜಿಯೋಗ್ರಫಿ ಪರೀಕ್ಷೆಗೆ ಒಳಪಡಿಸಿದ್ದಾರೆ. ಆಂಜಿಯೋಗ್ರಫಿ ವರದಿಯಲ್ಲಿ ಅಪಾಯ ಕಂಡು ಬರದ ಹಿನ್ನೆಲೆಯಲ್ಲಿ ಆಂಜಿಯೋಪ್ಲಾಸ್ಟಿಗೆ ಒಳಪಡಿಸಿಲ್ಲ ಎನ್ನಲಾಗಿದೆ.

ADVERTISEMENT

ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಪಂದ್ಯಗಳ ಕಮೆಂಟರಿಗಾಗಿ ಲಾರಾ ಮುಂಬೈನಲ್ಲಿದ್ದಾರೆ. ಸ್ಟಾರ್‌ ಸ್ಫೋರ್ಟ್ಸ್‌ ವಾಹಿನಿಗಾಗಿ ಅವರು ಕಮೆಂಟರಿ ನಡೆಸುತ್ತಿದ್ದಾರೆ.ಟ್ರಿನಿಡಾಡ್‌ನ ಲಾರಾ ಅವರಿಗೆ ಈಗ 50 ವರ್ಷ.

ವೆಸ್ಟ್ ಇಂಡೀಸ್‌ ಪರವಾಗಿ ಆಡಿದ ಅತ್ಯುತ್ತಮ ಬ್ಯಾಟ್ಸ್‌ಮನ್‌ ಆಗಿ ಬ್ರಯನ್‌ ಲಾರಾ ಇಂದಿಗೂ ಪರಿಗಣಿಸಲ್ಪಟ್ಟಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ವೈಯಕ್ತಿಕ ಅತಿ ಹೆಚ್ಚು ರನ್‌ ಗಳಿಸಿರುವ ದಾಖಲೆಯನ್ನು ಲಾರಾ ಹೊಂದಿದ್ದಾರೆ. 2004ರಲ್ಲಿ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಅವರು 400 ರನ್‌ ದಾಖಲಿಸಿದ್ದರು.

1990 ರಿಂದ 2007ರವರೆಗೆ ಅವರು ವೆಸ್ಟ್ ಇಂಡೀಸ್ ತಂಡದಲ್ಲಿ ಆಡಿದ್ದರು. ಎಡಗೈ ಬ್ಯಾಟ್ಸ್‌ಮನ್ ಲಾರಾ 131 ಟೆಸ್ಟ್‌ಗಳಲ್ಲಿ 11,953 ರನ್‌ಗಳಿಸಿದ್ದಾರೆ.2 99 ಏಕದಿನ ಪಂದ್ಯಗಳಲ್ಲಿ ಅವರು10,405 ರನ್‌ಗಳನ್ನು ಕಲೆಹಾಕಿದ್ದಾರೆ. ಫಸ್ಟ್‌ ಕ್ಲಾಸ್‌ ಕ್ರಿಕೆಟ್‌ನಲ್ಲಿ ಅವರ ದಾಖಲೆಯನ್ನು ಈ ವರೆಗೂ ಮತ್ತೊಬ್ಬ ಆಟಗಾರ ಮುರಿಯಲು ಆಗಿಲ್ಲ. 1994ರಲ್ಲಿ ನಡೆದ ಪಂದ್ಯದಲ್ಲಿ ಲಾರಾ 501 ರನ್‌ ಗಳಿಸಿ ಅಜೇಯರಾಗಿ ಉಳಿದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.