ADVERTISEMENT

ಆಸ್ಟ್ರೇಲಿಯಾ ಎದುರಿನ ನಾಲ್ಕನೇ ಟೆಸ್ಟ್‌: ಅಭ್ಯಾಸ ಕಣದಲ್ಲಿ ವೇಗಿಗಳಿಗೆ ವಿಶ್ರಾಂತಿ

ರಾಯಿಟರ್ಸ್
Published 13 ಜನವರಿ 2021, 12:44 IST
Last Updated 13 ಜನವರಿ 2021, 12:44 IST
ಆಟಗಾರರು ಗಾಯದ ಸಮಸ್ಯೆಯಿಂದ ಬಳಲುತ್ತಿರುವುದರಿಂದ ತಂಡದ ಆಡಳಿತ ಮತ್ತು ಕೋಚ್‌ ‘ಫಿಟ್‌‘ ಆಗಿರುವ ಆಟಗಾರರನ್ನು ಆಯ್ಕೆ ಮಾಡುವ ಗೊಂದಲದಲ್ಲಿದ್ದಾರೆ –ಎಪಿ ಚಿತ್ರ
ಆಟಗಾರರು ಗಾಯದ ಸಮಸ್ಯೆಯಿಂದ ಬಳಲುತ್ತಿರುವುದರಿಂದ ತಂಡದ ಆಡಳಿತ ಮತ್ತು ಕೋಚ್‌ ‘ಫಿಟ್‌‘ ಆಗಿರುವ ಆಟಗಾರರನ್ನು ಆಯ್ಕೆ ಮಾಡುವ ಗೊಂದಲದಲ್ಲಿದ್ದಾರೆ –ಎಪಿ ಚಿತ್ರ   

ಮೆಲ್ಬರ್ನ್/ಬ್ರಿಸ್ಬೇನ್‌: ಆಸ್ಟ್ರೇಲಿಯಾ ವಿರುದ್ಧ ಬ್ರಿಸ್ಬೇನ್‌ನಲ್ಲಿ ನಡೆಯಲಿರುವ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಜಸ್‌ಪ್ರೀತ್ ಬೂಮ್ರಾ ಕೂಡ ಕಣಕ್ಕೆ ಇಳಿಯುವುದು ಸಂದೇಹ ಆಗಿರುವುದರಿಂದ ಇನ್ನಷ್ಟು ಗಾಯದ ಸಮಸ್ಯೆ ಕಾಡದೇ ಇರುವುದಕ್ಕಾಗಿ ಬುಧವಾರ ಅಭ್ಯಾಸದ ವೇಳೆ ಭಾರತ ತಂಡವು ವೇಗಿಗಳಿಗೆ ವಿಶ್ರಾಂತಿ ನೀಡಿತು.

ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್‌ ಸಂದರ್ಭದಲ್ಲಿ ಕಿಬ್ಬೊಟ್ಟೆ ನೋವಿನಿಂದ ಬಳಲಿದ್ದ ಬೂಮ್ರಾ ಇನ್ನು ಚೇತರಿಸಿಕೊಂಡಿಲ್ಲ. ಆದ್ದರಿಂದ ಆಯ್ಕೆಗೆ ಅವರು ಲಭ್ಯ ಇರುತ್ತಾರೆಯೋ ಇಲ್ಲವೋ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ಹೊರಬಿದ್ದಿಲ್ಲ. ಬುಧವಾರ ಅಭ್ಯಾಸದ ವೇಳೆ ಬೂಮ್ರಾ ತಂಡದೊಂದಿಗೆ ಇದ್ದರು. ಆದರೆ ಬೌಲಿಂಗ್ ಕೋಚ್ ಭರತ್ ಅರುಣ್ ಜೊತೆ ಮಾತುಕತೆಯಲ್ಲಿ ಮುಳುಗಿದ್ದರು. ಹೆಬ್ಬೆರಳಿಗೆ ಗಾಯಗೊಂಡಿರುವ ರವೀಂದ್ರ ಜಡೇಜ, ಪಕ್ಕೆಲುಬಿನಲ್ಲಿ ನೋವು ಕಾಣಿಸಿಕೊಂಡಿರುವ ಹನುಮ ವಿಹಾರಿ, ಬೆನ್ನುನೋವಿನಿಂದ ಬಳಲುತ್ತಿರುವ ರವಿಚಂದ್ರನ್ ಅಶ್ವಿನ್ ಅವರ ಬಗ್ಗೆಯೂ ನಿಖರ ಮಾಹಿತಿ ಇಲ್ಲ. ಹನುಮ ವಿಹಾರಿ ಮತ್ತು ಅಶ್ವಿನ್ ಕ್ರೀಸ್‌ನಲ್ಲಿ ತಳವೂರಿ ಬ್ಯಾಟಿಂಗ್ ಮಾಡಿದ್ದರಿಂದ ಮೂರನೇ ಟೆಸ್ಟ್ ಡ್ರಾದಲ್ಲಿ ಮುಕ್ತಾಯಗೊಂಡಿತ್ತು.

ಚೈನಾಮನ್ ಬೌಲರ್ ಕುಲದೀಪ್ ಯಾದವ್ ಬುಧವಾರ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿದರು. ರವೀಂದ್ರ ಜಡೇಜ ಬದಲಿಗೆ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಶಾರ್ದೂಲ್ ಠಾಕೂರ್ ಮತ್ತು ವಾಷಿಂಗ್ಟನ್ ಸುಂದರ್ ಕೂಡ ಅಭ್ಯಾಸ ಮಾಡಿದರು.

ADVERTISEMENT

ವೇಗಿಗಳಾದ ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ ಮತ್ತು ಉಮೇಶ್ ಯಾದವ್ ಅವರು ಸರಣಿಯ ಆರಂಭದಲ್ಲೇ ಹೊರಬಿದ್ದಿದ್ದರು. ಬೂಮ್ರಾ ಕಣಕ್ಕೆ ಇಳಿಯದಿದ್ದರೆ ಶಾರ್ದೂಲ್ ಠಾಕೂರ್ ಅಥವಾ ಎಡಗೈ ವೇಗಿ ಟಿ.ನಟರಾಜನ್ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಹನುಮ ವಿಹಾರಿ ಮತ್ತು ರಿಷಭ್ ಪಂತ್ ಬದಲಿಗೆ ಯಾರಿಗೆ ಅವಕಾಶ ನೀಡಬೇಕು ಎಂಬ ವಿಷಯ ಕೂಡ ತಂಡದ ಆಡಳಿತಕ್ಕೆ ತಲೆನೋವು ಉಂಟುಮಾಡಿದೆ. ಸಿಡ್ನಿ ಟೆಸ್ಟ್‌ನಲ್ಲಿ ಗಾಯಗೊಂಡಿದ್ದ ರಿಷಭ್ ಪಂತ್ ಬದಲಿಗೆ ವೃದ್ಧಿಮಾನ್ ಸಹಾ ವಿಕೆಟ್ ಕೀಪಿಂಗ್ ಮಾಡಿದ್ದರು. ಅಮೋಘ ಬ್ಯಾಟಿಂಗ್ ಮಾಡಿ 97 ರನ್ ಗಳಿಸಿದ್ದ ಪಂತ್ ತಂಡದಲ್ಲಿ ಗೆಲುವಿನ ಭರವಸೆ ಮೂಡಿಸಿದ್ದರು. ಕೊನೆಯ ಪಂದ್ಯಕ್ಕೆ ಹನುಮ ವಿಹಾರಿ ಲಭ್ಯ ಇಲ್ಲ ಎಂದಾದರೆ ಮಯಂಕ್ ಅಗರವಾಲ್ ಅಥವಾ ಪೃಥ್ವಿ ಶಾ ಅವರ ಪೈಕಿ ಯಾರಿಗಾದರೂ ಅವಕಾಶ ನೀಡಬೇಕಾಗುತ್ತದೆ. ಇವರಿಬ್ಬರೂ ಸತತ ವೈಫಲ್ಯ ಕಂಡಿದ್ದಾರೆ.

ನಾಲ್ಕು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದಿದ್ದರೆ ಎರಡನೇ ಪಂದ್ಯದಲ್ಲಿ ಭಾರತ ತಿರುಗೇಟು ನೀಡಿತ್ತು. ಮೂರನೇ ಪಂದ್ಯ ರೋಚಕ ಡ್ರಾ ಕಂಡಿತ್ತು.

ಪಂದ್ಯ ಆರಂಭ: ಶುಕ್ರವಾರ ಬೆಳಿಗ್ಗೆ 5.00 (ಭಾರತೀಯ ಕಾಲಮಾನ)

ನೇರ ಪ್ರಸಾರ: ಸೋನಿ ನೆಟ್‌ವರ್ಕ್‌

ಮಹತ್ವದ ಮೈಲುಗಲ್ಲಿನತ್ತ ಲಯನ್

ಬ್ರಿಸ್ಬೇನ್‌: ಆಸ್ಟ್ರೇಲಿಯಾದ ಆಫ್‌ಸ್ಪಿನ್ನರ್ ನೇಥನ್ ಲಯನ್ ಮಹತ್ವದ ಮೈಲುಗಲ್ಲು ಸ್ಥಾಪನೆಯತ್ತ ಹೆಜ್ಜೆ ಇರಿಸಿದ್ದಾರೆ. ನಾಲ್ಕನೇ ಟೆಸ್ಟ್‌ನಲ್ಲಿ ಆಡಲು ಅವಕಾಶ ಲಭಿಸಿದರೆ ಅದು ಅವರ 100ನೇ ಟೆಸ್ಟ್ ಆಗಲಿದೆ. ಈ ಪಂದ್ಯದಲ್ಲಿ ನಾಲ್ಕು ವಿಕೆಟ್ ಗಳಿಸಿದರೆ 400 ವಿಕೆಟ್‌ಗಳು ಅವರ ಖಾತೆಗೆ ಸೇರಲಿವೆ. ಈ ವರೆಗೆ 12 ಆಟಗಾರರು ಆಸ್ಟ್ರೇಲಿಯಾ ಪರ 100 ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ. ಸ್ಟೀವ್ ವ್ಹಾ, ರಿಕಿ ಪಾಂಟಿಂಗ್‌, ಶೇನ್ ವಾರ್ನೆ ಮತ್ತು ಈಗಿನ ಕೋಚ್ ಜಸ್ಟಿನ್ ಲ್ಯಾಂಗರ್ ಈ ಪೈಕಿ ಪ್ರಮುಖರು. 400 ವಿಕೆಟ್‌ ಗಳಿಸಿದರೆ ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ ಮೂರನೇ ಆಟಗಾರ ಮತ್ತು ವಿಶ್ವದ 16ನೇ ಆಟಗಾರ ಆಗಲಿದ್ದಾರೆ ಅವರು. ಆಸ್ಟ್ರೇಲಿಯಾ ಪರ ಶೇನ್ ವಾರ್ನೆ ಮತ್ತು ಗ್ಲೆನ್ ಮೆಗ್ರಾ ಮಾತ್ರ 400 ವಿಕೆಟ್ ಗಳಿಸಿದ್ದಾರೆ.

33 ವರ್ಷದ ಲಯನ್ ಒಂದು ದಶಕದ ಹಿಂದೆ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. 2017ರಲ್ಲಿ ಬೆಂಗಳೂರಿನಲ್ಲಿ ನಡೆದ ಭಾರತದ ಎದುರಿನ ಪಂದ್ಯದಲ್ಲಿ 50ಕ್ಕೆ8 ವಿಕೆಟ್ ಗಳಿಸಿದ್ದು ಅವರ ಗರಿಷ್ಠ ಸಾಧನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.