ಬೆಂಗಳೂರು: ಬಲಗೈ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಅವರನ್ನು ನ್ಯೂಜಿಲೆಂಡ್ ವಿರುದ್ಧ ಮೂರು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿರುವ ಭಾರತ ಕ್ರಿಕೆಟ್ ತಂಡದ ಉಪನಾಯಕರನ್ನಾಗಿ ನೇಮಕ ಮಾಡಲಾಗಿದೆ.
ತಂಡದ ಮ್ಯಾನೇಜ್‌ಮೆಂಟ್ ಹಾಗೂ ಆಯ್ಕೆ ಮಂಡಳಿಯ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ, ಜಸ್‌ಪ್ರೀತ್ ಬೂಮ್ರಾ ಸದಾ ನಮ್ಮ ನಾಯಕತ್ವ ಗುಂಪಿನ ಭಾಗವಾಗಿದ್ದಾರೆ ಎಂದು ಹೇಳಿದ್ದಾರೆ.
ಇತ್ತೀಚಿಗಿನ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಉಪನಾಯಕನ ಪಟ್ಟವನ್ನು ಯಾವ ಆಟಗಾರನಿಗೂ ವಹಿಸಿರಲಿಲ್ಲ. ಈಗ ಬೂಮ್ರಾ ಅವರಿಗೆ ಉಪನಾಯಕನ ಜವಾಬ್ದಾರಿ ನೀಡುವ ಮೂಲಕ ಮುಂಬರುವ ಆಸ್ಟ್ರೇಲಿಯಾ ಪ್ರವಾಸದ ವೇಳೆ ಅವರಿಗೆ ಹೆಚ್ಚಿನ ಸ್ಥಾನಮಾನ ನೀಡುವ ಸಂಕೇತವನ್ನು ಆಯ್ಕೆ ಮಂಡಳಿ ರವಾನಿಸಿದೆ.
ಆಸ್ಟ್ರೇಲಿಯಾ ಪ್ರವಾಸದ ವೇಳೆ ರೋಹಿತ್ ಶರ್ಮಾ ವೈಯಕ್ತಿಕ ಕಾರಣಗಳಿಂದಾಗಿ ಒಂದೆರಡು ಟೆಸ್ಟ್‌ಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಈ ವೇಳೆ ಬೂಮ್ರಾ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
'ನೋಡಿ, ಬೂಮ್ರಾ ಸಾಕಷ್ಟು ಕ್ರಿಕೆಟ್ ಆಡಿರುತ್ತಾರೆ. ನಾನು ಕೂಡ ಅವರ ಜತೆ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. ಅವರು ಆಟವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ವಿವೇಚನೆಯುಕ್ತ ನಿರ್ಣಯ ತೆಗೆದುಕೊಳ್ಳುವಲ್ಲಿ ಸಮರ್ಥರಾಗಿದ್ದಾರೆ' ಎಂದು ರೋಹಿತ್ ಶರ್ಮಾ ಶ್ಲಾಘಿಸಿದ್ದಾರೆ.
'ತಂಡಕ್ಕೆ ಏನು ಬೇಕು ಎಂಬುದನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ. ಬೂಮ್ರಾ ಅವರಲ್ಲಿ ನಾಯಕತ್ವ ಗುಣವಿದೆ ಎಂದು ನಾನು ಭಾವಿಸುತ್ತೇನೆ. ಅವರು ಯಾವಾತ್ತೂ ನಮ್ಮ ನಾಯಕತ್ವ ಗುಂಪಿನಲ್ಲಿದ್ದರು. ಬೌಲರ್‌ಗಳು ಸೇರಿದಂತೆ ಎಲ್ಲರಿಗೂ ನೆರವಾಗುತ್ತಾರೆ' ಎಂದು ಅವರು ಉಲ್ಲೇಖ ಮಾಡಿದ್ದಾರೆ.
'ತಾಂತ್ರಿಕವಾಗಿ ಅವರ ನಾಯಕತ್ವದ ಬಗ್ಗೆ ಹೆಚ್ಚೇನು ಹೇಳಲಾರೆ. ಅವರು ಒಂದು ಟೆಸ್ಟ್ ಹಾಗೂ ಒಂದೆರಡು ಟಿ20 ಪಂದ್ಯಗಳಲ್ಲಷ್ಟೇ ತಂಡವನ್ನು ಮುನ್ನಡೆಸಿದ್ದಾರೆ' ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.