ADVERTISEMENT

ರೋಹಿತ್ ಗೈರಿನಲ್ಲಿ ಬೂಮ್ರಾಗೆ ನಾಯಕತ್ವ: ಗೌತಮ್ ಗಂಭೀರ್

ಪಿಟಿಐ
Published 11 ನವೆಂಬರ್ 2024, 23:40 IST
Last Updated 11 ನವೆಂಬರ್ 2024, 23:40 IST
   

ಮುಂಬೈ: ರೋಹಿತ್‌ ಶರ್ಮಾ ಅವರು ಪರ್ತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆರಂಭವಾಗುವ ಟೆಸ್ಟ್‌ ಸರಣಿಯ ಮೊದಲ ಪಂದ್ಯಕ್ಕೆ ಅಲಭ್ಯರಾದಲ್ಲಿ ಉಪನಾಯಕರಾಗಿರುವ ಜಸ್‌ಪ್ರೀತ್ ಬೂಮ್ರಾ ಭಾರತ ತಂಡದ ನಾಯಕತ್ವ ವಹಿಸಲಿದ್ದಾರೆ ಎಂದು ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಸೋಮವಾರ
ಇಲ್ಲಿ ತಿಳಿಸಿದರು.

ರೋಹಿತ್‌ ಆರಂಭ ಆಟಗಾರನೂ ಆಗಿರುವ ಕಾರಣ, ಆ ಸ್ಥಾನ ತೆರವಾದಲ್ಲಿ ಕೆ.ಎಲ್‌.ರಾಹುಲ್ ಅವರಿಗೆ ಇನಿಂಗ್ಸ್ ಆರಂಭಿಸುವ ಹೊಣೆ ವಹಿಸುವ ಸಾಧ್ಯತೆಯಿದೆ. ವೈಯಕ್ತಿಕ ಕಾರಣ ನೀಡಿರುವ ರೋಹಿತ್ ಮೊದಲ ಟೆಸ್ಟ್‌ನಲ್ಲಿ ಆಡುವುದು ಇನ್ನೂ ಖಚಿತವಾಗಿಲ್ಲ.

ಗಂಭೀರ್‌ ಒಳಗೊಂಡಂತೆ ಭಾರತದ ಕ್ರಿಕೆಟ್‌ ತಂಡ ದ ಎರಡನೇ ಬ್ಯಾಚ್‌ ಸೋಮವಾರ ಪರ್ತ್‌ಗೆ ಪ್ರಯಾಣ ಬೆಳೆಸಿತು. ಆದರೆ ರೋಹಿತ್ ಇಲ್ಲಿಯೇ ಉಳಿದಿದ್ದಾರೆ. ಮೊದಲ ಟೆಸ್ಟ್‌ ಇದೇ 22ರಂದು ಆರಂಭವಾಗಲಿದೆ.

ADVERTISEMENT

‘ರೋಹಿತ್‌ ಲಭ್ಯರಾಗುವುದು ಇನ್ನೂ ಖಚಿತವಾಗಿಲ್ಲ. ಪರಿಸ್ಥಿತಿ ಏನೆಂಬುದನ್ನು ನಿಮಗೆ ತಿಳಿಸಲಿದ್ದೇವೆ. ಅವರು ಲಭ್ಯರಾಗುವ ವಿಶ್ವಾಸವಿದೆ. ಸರಣಿಯ ಆರಂಭಕ್ಕೆ ಮೊದಲು ಎಲ್ಲವೂ ತಿಳಿದುಬರಲಿದೆ’ ಎಂದಿದ್ದಾರೆ.

ರಾಹುಲ್‌ಗೆ ಅವಕಾಶ?: ರೋಹಿತ್ ಅವರ ಸಂಭವ ನೀಯ ಗೈರುಹಾಜರಿಯಲ್ಲಿ ಅನುಭವಿ ಕೆ.ಎಲ್.ರಾಹುಲ್ ಅಥವಾ ಅಭಿಮನ್ಯು ಈಶ್ವರನ್ ಇವರಲ್ಲೊಬ್ಬರಿಗೆ ಅವಕಾಶ ದೊರೆಯಲಿದೆ. ಅಭಿಮನ್ಯು ಇನ್ನೂ ಟೆಸ್ಟ್‌ ಆಡಿಲ್ಲ. ಇವರಿಬ್ಬರೂ ಆಸ್ಟ್ರೇಲಿಯಾ ‘ಎ’ ವಿರುದ್ಧ ಇತ್ತೀಚೆಗೆ ಎರಡನೇ ‘ಟೆಸ್ಟ್‌’ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿದ್ದರು.

‘ಆರಂಭ ಆಟಗಾರನ ಸ್ಥಾನಕ್ಕೆ ನಮ್ಮ ಮುಂದೆ ಆಯ್ಕೆಗಳಿವೆ. ಈಶ್ವರನ್ ಇದ್ದಾರೆ. ಕೆ.ಎಲ್‌. (ರಾಹುಲ್‌) ಕೂಡ ಲಭ್ಯರಿದ್ದಾರೆ’ ಎಂದರು.

ಅಭಿಮನ್ಯು ಅವರ ಈಗಿನ ಫಾರ್ಮ್‌ಗಿಂತ, ರಾಹುಲ್ ಅವರ ಅನುಭವಕ್ಕೆ ಆದ್ಯತೆ ನೀಡುವ ಸುಳಿ
ವನ್ನು ಗಂಭೀರ್‌ ನೀಡಿದರು. ‘ಕೆಲವೊಮ್ಮೆ ಅನುಭವಕ್ಕೆ ಮಣೆಹಾಕುವುದು ಅಗತ್ಯವಾಗುತ್ತದೆ. ರಾಹುಲ್ ಇನಿಂಗ್ಸ್ ಆರಂಭಿಸಬಲ್ಲರು. ಮೂರನೇ ಕ್ರಮಾಂಕ ಅಥವಾ ಆರನೇ ಕ್ರಮಾಂಕದಲ್ಲಿ ಬೇಕಾದರೂ ಆಡಬಲ್ಲರು’ ಎಂದು ಮಾಜಿ ಎಡಗೈ ಆಟಗಾರ ಸೂಚ್ಯವಾಗಿ ರಾಹುಲ್ ಆಡುವ ಸಾಧ್ಯತೆಯನ್ನು ಹೊರಗೆಡಹಿದರು.

‘ವಿವಿಧ ಹೊಣೆ ನಿಭಾಯಿಸಬೇಕಾದರೆ ಸಾಕಷ್ಟು ಪ್ರತಿಭೆ ಬೇಕಾಗುತ್ತದೆ. ಅಗತ್ಯ ಬಿದ್ದಲ್ಲಿ ರಾಹುಲ್ ಈ ಹೊಣೆಗಳನ್ನು ಹೊರಬಲ್ಲರು. ಏಕದಿನ ಮಾದರಿಯಲ್ಲಿ ಅವರು ವಿಕೆಟ್‌ ಕೀಪಿಂಗ್ ಕೂಡ ಮಾಡಿದ್ದಾರೆ.  ಅವರು ನಮಗೆ ಬೇಕಾದ ಕೆಲಸ ಮಾಡಿಕೊಡಬಲ್ಲರು’ ಎಂದರು.

ಅನುಭವಿ ವೇಗದ ಬೌಲಿಂಗ್ ಆಲ್‌ರೌಂಡರ್‌ ಶಾರ್ದೂಲ್ ಠಾಕೂರ್‌ ಬದಲು ಆಲ್‌ರೌಂಡರ್ ನಿತೀಶ್ ರೆಡ್ಡಿ ಅವರಿಗೆ ಅವಕಾಶ ನೀಡುವ ಸಾಧ್ಯತೆಯೂ ಗಂಭೀರ್ ಮಾತುಗಳಲ್ಲಿ ವ್ಯಕ್ತವಾಯಿತು. ನಿತೀಶ್ ರೆಡ್ಡಿ ಇನ್ನೂ ಟೆಸ್ಟ್‌ ಪದಾರ್ಪಣೆ ಮಾಡಿಲ್ಲ.

‘ನಾವು ಭವಿಷ್ಯ ದೃಷ್ಟಿಯಲ್ಲಿಟ್ಟುಕೊಂಡು ಯೋಜನೆ ರೂಪಿಸಬೇಕಾಗಿದೆ. ನಮ್ಮಲ್ಲಿ ಲಭ್ಯವಿರುವ ಉತ್ತಮ ಆಟಗಾರರ ಸಂಯೋಜನೆಯೊಡನೆ ತಂಡ ಕಟ್ಟಬೇಕಾಗುತ್ತದೆ’ ಎನ್ನುವ ಮೂಲಕ ಶಾರ್ದೂಲ್ ಅವರಿಗೆ ಸದ್ಯ ಬಾಗಿಲು ಮುಚ್ಚಿದೆ ಎಂಬ ಸಂದೇಶ ರವಾನಿಸಿದರು.

ವೇಗದ ಬೌಲರ್ ಹರ್ಷಿತ್‌ ರಾಣಾ ಅವರನ್ನು ‘ಎ’ ತಂಡದ ಜೊತೆಗೆ ಆಸ್ಟ್ರೇಲಿಯಾಕ್ಕೆ ಕಳುಹಿಸಿರಲಿಲ್ಲ. ಬಾರ್ಡರ್‌–ಗಾವಸ್ಕರ್ ಟ್ರೋಫಿಗೆ ಸಜ್ಜಾಗುವ ನಿಟ್ಟಿನಲ್ಲಿ ಅವರಿಗೆ ಹೆಚ್ಚಿನ ಕಾರ್ಯಭಾರ ವಹಿಸಲು ತಂಡದ ಚಿಂತಕರ ಚಾವಡಿ ಬಯಸಿರಲಿಲ್ಲ ಎಂದರು.

‘ಅವರು (ಹರ್ಷಿತ್‌) ಅಸ್ಸಾಂ ವಿರುದ್ಧ ಮೊದಲ ದರ್ಜೆ ಪಂದ್ಯ ಆಡಿದ್ದರು. ಐದು ವಿಕೆಟ್‌ಗಳನ್ನು  ಗಳಿಸಿದ್ದರು. ಅರ್ಧ ಶತಕವನ್ನೂ ಗಳಿಸಿದ್ದರು. ಅವರಿಗೆ ಸಾಕಷ್ಟು ಬೌಲಿಂಗ್ ಅಭ್ಯಾಸ ಸಿಕ್ಕಿರುವ ಕಾರಣ ಮತ್ತೊಂದು ಪಂದ್ಯ ಆಡಲು ಕಳುಹಿಸುವ ಯೋಜನೆ ನಮಗಿರಲಿಲ್ಲ ಎಂದು ವಿವರಿಸಿದರು.

ಬೌಲಿಂಗ್ ಸಶಕ್ತ: ‘ಮೊಹಮ್ಮದ್ ಶಮಿ ಗೈರಿನಲ್ಲಿ ಬೂಮ್ರಾ ಮೇಲೆ ಹೆಚ್ಚಿನ ಒತ್ತಡವಿದೆ. ರಾಣಾ, ಪ್ರಸಿದ್ಧ ಕೃಷ್ಣ ಮತ್ತು ಆಕಾಶ್ ದೀಪ್ ಅನನುಭವಿಗಳಾಗಿದ್ದರೂ ತಂಡದ ವೇಗದ ದಾಳಿ ಸಾಕಷ್ಟು ಬಲವಾಗಿದೆ’ ಎಂದು ಗಂಭೀರ್ ಹೇಳಿದರು. ‘ನಮ್ಮಲ್ಲಿ ಗುಣಮಟ್ಟವಿದೆ. ಪ್ರಸಿದ್ಧ, ಹರ್ಷಿತ್ ಅವರಂತೆ ನೀಳಕಾಯದ ಬೌಲರ್‌ಗಳಿದ್ದು, ಚೆಂಡನ್ನು ಕುಕ್ಕಬಲ್ಲರು.  ಅವರ ಕೌಶಲಗಳು ವಿಭಿನ್ನವಾಗಿವೆ. ಹೀಗಾಗಿ ನಮ್ಮ ಬೌಲಿಂಗ್ ದಾಳಿ ಸಶಕ್ತವಾಗಿದೆ’ ಎಂದರು.

ಆಸ್ಟ್ರೇಲಿಯಾ ಪರಿಸ್ಥಿತಿಗೆ ಮುಂದಿನ 10 ದಿನಗಳಲ್ಲಿ ಹೊಂದಿಕೊಳ್ಳುವುದು ತಂಡದ ಪಾಲಿಗೆ ಮಹತ್ವದ್ದಾಗುತ್ತದೆ ಎಂದು ಗಂಭೀರ್ ಹೇಳಿದರು.

‘ನಮ್ಮಲ್ಲಿ ಈ ಹಿಂದೆ ಆಸ್ಟ್ರೇಲಿಯಾದಲ್ಲಿ ಆಡಿ ಅನುಭವವಿರುವ ಸಾಕಷ್ಟು ಆಟಗಾರರಿದ್ದಾರೆ. ಅವರ ಅನುಭವ ತಂಡದ ಯುವ ಆಟಗಾರರ ನೆರವಿಗೆ ಬರಲಿದೆ. ಮುಂದಿನ 10 ದಿನಗಳು ತಂಡದ ಪಾಲಿಗೆ ನಿರ್ಣಾಯಕ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.