ADVERTISEMENT

ನ್ಯೂಜಿಲೆಂಡ್ ಟೆಸ್ಟ್ ಸರಣಿ: ಬೂಮ್ರ ಉಪನಾಯಕ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2024, 13:39 IST
Last Updated 12 ಅಕ್ಟೋಬರ್ 2024, 13:39 IST
<div class="paragraphs"><p>ಬೂಮ್ರ</p></div>

ಬೂಮ್ರ

   

ನವದೆಹಲಿ (ಪಿಟಿಐ): ಅಗ್ರ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಅವರನ್ನು ನ್ಯೂಜಿಲೆಂಡ್ ವಿರುದ್ಧ ಮೂರು ಟೆಸ್ಟ್‌ ಪಂದ್ಯಗಳ ಸರಣಿಯನ್ನು ಆಡಲಿರುವ ಭಾರತ ಕ್ರಿಕೆಟ್‌ ತಂಡಕ್ಕೆ ಉಪನಾಯಕನನ್ನಾಗಿ ನೇಮಕ ಮಾಡಲಾಗಿದೆ. ಆ ಮೂಲಕ ಮುಂದಿನ ತಿಂಗಳ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೊರಡಲಿರುವ ತಂಡದಲ್ಲಿ ಅವರಿಗೆ ಹೆಚ್ಚಿನ ಸ್ಥಾನಮಾನ ನೀಡುವ ಸಂಕೇತವನ್ನು ಆಯ್ಕೆ ಮಂಡಳಿ ರವಾನಿಸಿದೆ.

ನ್ಯೂಜಿಲೆಂಡ್ ವಿರುದ್ಧ ಟೆಸ್ಟ್‌ ಸರಣಿಯ ಮೊದಲ ಪಂದ್ಯ ಬೆಂಗಳೂರಿನಲ್ಲಿ ಇದೇ 16ರಂದು ಆರಂಭವಾಗಲಿದೆ. ಎರಡನೇ ಟೆಸ್ಟ್‌ ಪುಣೆಯಲ್ಲಿ 24 ರಂದು ಮತ್ತು ಮೂರನೇ ಟೆಸ್ಟ್‌ ಮುಂಬೈನಲ್ಲಿ ನವೆಂಬರ್ 1ರಂದು ಆರಂಭವಾಗಲಿವೆ.

ADVERTISEMENT

ಈಗಾಗಲೇ ವರದಿಯಾಗಿರುವಂತೆ ರೋಹಿತ್‌ ಶರ್ಮಾ ಅವರು ವೈಯಕ್ತಿಕ ಕಾರಣಗಳಿಂದ ಆಸ್ಟ್ರೇಲಿಯಾ ಪ್ರವಾಸದ ಮೊದಲ ಎರಡು ಟೆಸ್ಟ್‌ಗಳಲ್ಲಿ ಒಂದನ್ನು ಕಳೆದುಕೊಳ್ಳಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ರ ಸರಣಿ ನವೆಂಬರ್‌ 22ರಂದು ಪರ್ತ್‌ನಲ್ಲಿ ಆರಂಭವಾಗಲಿದೆ.

ಇತ್ತೀಚಿನ ಬಾಂಗ್ಲಾ ವಿರುದ್ಧದ ಟೆಸ್ಟ್‌, ಟಿ20 ಪಂದ್ಯಗಳಿಗೆ ಭಾರತ ತಂಡವು ಉಪನಾಯಕನನ್ನು ಹೆಸರಿಸಿರಲಿಲ್ಲ.

30 ವರ್ಷ ವಯಸ್ಸಿನ ಬೂಮ್ರಾ ಈ ಹಿಂದೆ ಒಮ್ಮೆ– 2022ರ ಜುಲೈನಲ್ಲಿ ಎಜ್ಬಾಸ್ಟನ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಐದನೇ ಟೆಸ್ಟ್‌ ಪಂದ್ಯದಲ್ಲಿ ತಂಡದ ನಾಯಕತ್ವ ವಹಿಸಿದ್ದರು. ಕಳೆದ ವರ್ಷ ಐರ್ಲೆಂಡ್ ವಿರುದ್ಧ ಟಿ20 ಸರಣಿಗೂ ಅವರು ಪ್ರವಾಸಿ ಭಾರತ ತಂಡದ ನಾಯಕತ್ವ ವಹಿಸಿದ್ದರು.

ಬಾಂಗ್ಲಾ ವಿರುದ್ಧ ಸರಣಿಯಲ್ಲಿ ತೋರಿದ ಉತ್ತಮ ಸಾಧನೆಯಿಂದ ಅವರು ಟೆಸ್ಟ್‌ನಲ್ಲಿ ಐಸಿಸಿ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದರು.

ಅವರು 38 ಟೆಸ್ಟ್‌ ಪಂದ್ಯಗಳಲ್ಲಿ 20.18 ಸರಾಸರಿಯಲ್ಲಿ 170 ವಿಕೆಟ್‌ ಪಡೆದಿದ್ದಾರೆ. ಇದರಲ್ಲಿ 10 ಬಾರಿ ಐದು ವಿಕೆಟ್‌ಗಳ ಗೊಂಚಲು ಸೇರಿವೆ.

ಬಾಂಗ್ಲಾ ವಿರುದ್ಧ ಸರಣಿಯನ್ನಾಡಿದ್ದ ಯಶ್‌ ದಯಾಳ್ ಅವರನ್ನು ಪರಿಗಣಿಸಲಾಗಿಲ್ಲ. ಅವರು ಉತ್ತರ ಪ್ರದೇಶ ಪರ ಬಂಗಾಳ ವಿರುದ್ಧ ರಣಜಿ ಪಂದ್ಯದ ವೇಳೆ ಶುಕ್ರವಾರ ಭುಜದ ನೋವಿಗೆ ಒಳಗಾಗಿದ್ದರು.

ಪಾದದ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ಮೊಹಮ್ಮದ್ ಶಮಿ ಅವರು ಸ್ಥಾನ ಪಡೆದಿಲ್ಲ.

ಉಳಿದಂತೆ 15 ಆಟಗಾರರ ಈ ಹಿಂದಿನ ತಂಡವನ್ನು ಉಳಿಸಿಕೊಳ್ಳಲಾಗಿದೆ.

ಆಲ್‌ರೌಂಡರ್ ಹರ್ಷಿತ್ ರಾಣಾ, ಮಧ್ಯಮ ಕ್ರಮಾಂಕದ ಆಟಗಾರ ನಿತೀಶ್‌ ಕುಮಾರ್ ರೆಡ್ಡಿ, ವೇಗದ ಬವಲರ್ ಮಯಂಕ್ ಯಾದವ್ ಮತ್ತು ಪ್ರಸಿದ್ಧ ಕೃಷ್ಣ ಅವರು ಮೀಸಲು ಆಟಗಾರರ ಪಟ್ಟಿಯಲ್ಲಿದ್ದಾರೆ.

ತಂಡ ಹೀಗಿದೆ:

ರೋಹಿತ್‌ ಶರ್ಮಾ (ನಾಯಕ), ಜಸ್‌ಪ್ರೀತ್ ಬೂಮ್ರಾ (ಉಪ ನಾಯಕ), ಯಶಸ್ವಿ ಜೈಸ್ವಾಲ್‌, ಶುಭಮನ್ ಗಿಲ್‌, ವಿರಾಟ್‌ ಕೊಹ್ಲಿ, ಕೆ.ಎಲ್‌.ರಾಹುಲ್‌, ಸರ್ಫರಾಜ್ ಖಾನ್, ರಿಷಭ್ ಪಂತ್‌ (ವಿಕೆಟ್‌ ಕೀಪರ್), ಧ್ರುವ್ ಜುರೇಲ್ (ವಿಕೆಟ್‌ ಕೀಪರ್‌), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್ ಮತ್ತು ಆಕಾಶ್‌ ದೀಪ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.