ADVERTISEMENT

ಕ್ರಿಕೆಟ್‌ಗೆ ಇದು ಕರಾಳ ಸಮಯ: ಕ್ರಿಕೆಟಿಗರ ಕಳವಳ

ದಕ್ಷಿಣ ಆಫ್ರಿಕಾ ಪ್ರವಾಸ ಮುಂದೂಡಿದ ಆಸ್ಟ್ರೇಲಿಯಾ ಕ್ರಿಕೆಟ್ ತಂಡ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2021, 13:51 IST
Last Updated 3 ಫೆಬ್ರುವರಿ 2021, 13:51 IST
ಕೆವಿನ್ ಪೀಟರ್ಸನ್
ಕೆವಿನ್ ಪೀಟರ್ಸನ್   

ನವದೆಹಲಿ: ದಕ್ಷಿಣ ಆಫ್ರಿಕಾ ಪ್ರವಾಸವನ್ನು ಮುಂದೂಡಿದ ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧಾರಕ್ಕೆ ಮಾಜಿ ಕ್ರಿಕೆಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ –19 ಪ್ರಸರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಆಸ್ಟ್ರೇಲಿಯಾ ತಂಡದ ಪ್ರವಾಸವನ್ನು ಮಂಗಳವಾರ ಮುಂದೂಡಿರುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಘೋಷಿಸಿತ್ತು.

’ಈ ನಿರ್ಧಾರ ಸೂಕ್ತವಲ್ಲ. ಆಸ್ಟ್ರೇಲಿಯಾದ ಈ ನಿರ್ಧಾರವು ವಿಷಾದನೀಯ. ಒಂದೊಮ್ಮೆ ಭಾರತದ ಪ್ರವಾಸವಾಗಿದ್ದರೆ ಆಸ್ಟ್ರೇಲಿಯಾವು ಇಂತಹ ನಿರ್ಧಾರ ಮಾಡುತ್ತಿತ್ತೆ?‘ ಎಂದು ಮಾಜಿ ಆಟಗಾರ ಮೈಕೆಲ್ ವಾನ್ ಟ್ವೀಟ್ ಮಾಡಿದ್ದಾರೆ.

ADVERTISEMENT

ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಕ್ರಿಕೆಟ್‌ನಲ್ಲಿ ದೊಡ್ಡ ಮತ್ತು ಬಲಿಷ್ಠ ರಾಷ್ಟ್ರಗಳಾಗಿವೆ. ಕೋವಿಡ್ ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ ಸಂಕಷ್ಟದಲ್ಲಿರುವ ಇನ್ನಿತರ ದೇಶಗಳ ಕ್ರಿಕೆಟ್‌ ಮಂಡಳಿಗಳಿಗೆ ಈ ದೇಶಗಳು ನೆರವಾಗಬೇಕು. ಕ್ರಿಕೆಟ್‌ ಆಟವನ್ನು ಮತ್ತೆ ಹಳಿಗೆ ತರಲು ಪ್ರಯತ್ನಿಸಬೇಕು. ಆದರೆ ಆಸ್ಟ್ರೇಲಿಯಾದ ಈ ನಡೆ ಸರಿಯಲ್ಲ ಎಂದೂ ವಾನ್ ಅಭಿಪ್ರಾಯಪಟ್ಟಿದ್ದಾರೆ.

’ಭಾರತದ ಎದುರಿಗಿನ ಸರಣಿ ಅಥವಾ ಪ್ರವಾಸವಾಗಿದ್ದರೆ ಕ್ರಿಕೆಟ್ ಆಸ್ಟ್ರೇಲಿಯಾ ಇಂತಹ ನಿರ್ಧಾರವನ್ನು ಖಂಡಿತವಾಗಿಯೂ ಮಾಡುತ್ತಿರಲಿಲ್ಲ. ಆಸ್ಟ್ರೇಲಿಯಾವು ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹಿಂದೆ ಸರಿದಿರುವುದು ಕ್ರಿಕೆಟ್ ಕ್ಷೇತ್ರದ ಕರಾಳ ಅಧ್ಯಾಯವಾಗಿದೆ. ಶ್ರೀಲಂಕಾದಲ್ಲಿ ಕೆಲವು ಆಟಗಾರರಿಗೆ ಕೊರೊನಾ ಸೋಂಕು ಖಚಿತವಾಗಿತ್ತು. ಆದರೂ ಸರಣಿಯನ್ನು ಮುಂದುವರಿಸಲಾಯಿತು. ದಕ್ಷಿಣ ಆಫ್ರಿಕಾದಲ್ಲಿ ಏನು ತೊಂದರೆ ‘ ಎಂದು ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಕೇಳಿದ್ದಾರೆ.

ಆಸ್ಟ್ರೇಲಿಯಾದ ನಡೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಕ್ರಿಕೆಟ್ ದಕ್ಷಿಣ ಆಫ್ರಿಕಾದ ನಿರ್ದೇಶಕ ಗ್ರೆಮ್ ಸ್ಮಿತ್, ’ಈ ಸರಣಿ ಆಯೋಜನೆಗಾಗಿ ಅವಿರತವಾಗಿ ಶ್ರಮಿಸಿದ್ದೆವು. ಎಲ್ಲ ರೀತಿಯ ಸೌಲಭ್ಯಗಳನ್ನು ಸಜ್ಜುಗೊಳಿಸಲಾಗಿತ್ತು. ಆಸ್ಟ್ರೇಲಿಯಾದ ನಿರ್ಧಾರವು ಅತೀವ ಬೇಸರ ತರಿಸಿದೆ. ಇದರಿಂದಾಗಿ ನಮಗೆ ಆರ್ಥಿಕವಾಗಿ ಬಹಳ ದೊಡ್ಡ ಪೆಟ್ಟು ಬೀಳುತ್ತದೆ‘ ಎಂದಿದ್ದಾರೆ.

’ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆಯ ಬಗ್ಗೆ ನನಗೆ ಸಹಾನುಭೂತಿ ಇದೆ. ಆಸ್ಟ್ರೇಲಿಯಾ ಇಂತಹ ನಿರ್ಧಾರ ಕೈಗೊಳ್ಳಬಾರದಿತ್ತು‘ ಎಂದು ವೆಸ್ಟ್‌ ಇಂಡೀಸ್‌ನ ದಿಗ್ಗಜ ಕ್ರಿಕೆಟಿಗ ಇಯಾನ್ ಬಿಶಪ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.