ನವದೆಹಲಿ: ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿಗೆ (ಸಿಎಸಿ), ಶುಕ್ರವಾರ ಭಾರತ ತಂಡದ ನೂತನ ಕೋಚ್ ಆಯ್ಕೆ ಜವಾಬ್ದಾರಿಯನ್ನು ವಹಿಸಲಾಗಿದೆ. ಇದಕ್ಕಾಗಿ ಆಗಸ್ಟ್ ಮಧ್ಯದಲ್ಲಿ ಸಂದರ್ಶನ ನಡೆಯುವ ಸಾಧ್ಯತೆಯಿದೆ.
ದೇಶದ ಕ್ರಿಕೆಟ್ ವ್ಯವಹಾರ ನೋಡಿಕೊಳ್ಳುತ್ತಿರುವ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಶುಕ್ರವಾರ ಸಭೆ ನಡೆಸಿದ ನಂತರ ಈ ನಿರ್ಧಾರ ಕೈಗೊಂಡಿದೆ. ಕಪಿಲ್ ಜೊತೆ ಸಲಹಾ ಸಮಿತಿಯಲ್ಲಿ ಮಹಿಳಾ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಮತ್ತು ಮಾಜಿ ಆರಂಭ ಆಟಗಾರ ಅಂಶುಮನ್ ಗಾಯಕವಾಡ್ ಇದ್ದಾರೆ.
ಸಿಎಸಿ ಹೊಣೆ, ಭಾರತ ತಂಡದ ಮುಂದಿನ ಕೋಚ್ ಆಯ್ಕೆಗೆ ಮಾತ್ರ ಸೀಮಿತಗೊಂಡಿದೆ. ಜೊತೆಗೆ ಹಿತಾಸಕ್ತಿ ಸಂಘರ್ಷ ನಿಯಮಕ್ಕೆ ಒಳಪಟ್ಟಿದೆ.
ಕಪಿಲ್ ದೇವ್ ಮತ್ತು ಶಾಂತಾ, ಅವರು ಭಾರತ ಕ್ರಿಕೆಟ್ ಆಟಗಾರರ ಸಂಘ (ಐಸಿಎ) ರಚನೆಯಲ್ಲಿ ಒಳಗೊಂಡಿದ್ದು, ಹಿತಾಸಕ್ತಿ ಸಂಘರ್ಷದ ವ್ಯಾಪ್ತಿಗೆ ಅವರು ಬರುತ್ತಾರೆಯೇ ಎಂಬುದನ್ನು ಸಂಹಿತೆ ಅಧಿಕಾರಿ ಡಿ.ಕೆ.ಜೈನ್ ನಿರ್ಧರಿಸಲಿದ್ದಾರೆ.
ಪ್ರಸ್ತುತ ಕೋಚ್ ರವಿಶಾಸ್ತ್ರಿ ಅವರ ಅವಧಿ ಸೆ. 3ರವರೆಗೆ ಇರಲಿದೆ. ಕೋಚ್ ಆಗಿ ಮುಂದುವರಿಯಬೇಕಾದರೆ ಅವರು ಜುಲೈ 30ರೊಳಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.