ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಹದಿನಾರು ಆವೃತ್ತಿಗಳಲ್ಲಿ ಒಂದು ಬಾರಿಯೂ ಪ್ರಶಸ್ತಿ ಗೆಲ್ಲದಿದ್ದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ)ತಂಡದ ಅಭಿಮಾನಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.
ಅದೇ ಅಭಿಮಾನಿಗಳು ಈಗ ಆರ್‌ಸಿಬಿಯ ಮಹಿಳಾ ತಂಡಕ್ಕೂ ಬೆಂಬಲದ ಧಾರೆಯೆರೆಯುತ್ತಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ದವರೆಗೆ ಆರ್‌ಸಿಬಿ ತಂಡವು ನಾಲ್ಕು ಪಂದ್ಯಗಳನ್ನು ಆಡಿದೆ. ಪ್ರತಿ ಪಂದ್ಯಕ್ಕೂ ಸರಾಸರಿ 27 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಸೇರಿರುವುದು ದಾಖಲೆ.
ಹೋದ ಬಾರಿ ಮುಂಬೈನಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲ ಆವೃತ್ತಿ ನಡೆದಿತ್ತು. ಆದರೆ ಅಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿರಲಿಲ್ಲ. ಆದರೆ ಬೆಂಗಳೂರಿನ ಕ್ರಿಕೆಟ್‌ಪ್ರೇಮಿಗಳು ಈಗ ಹೊಸ ಮೈಲಿಗಲ್ಲು ಸಾಧಿಸಿದ್ದಾರೆ.
ಆರ್‌ಸಿಬಿ ಪಂದ್ಯಗಳಿಷ್ಟೇ ಅಲ್ಲ; ಇನ್ನುಳಿದ ತಂಡಗಳು ಆಡಿದಾಗಲೂ ಸುಮಾರು ಏಳೆಂಟು ಸಾವಿರ ಜನ ಸೇರಿರುವುದನ್ನು ಆಯೋಜಕರು
ಖಚಿತಪಡಿಸಿದ್ದಾರೆ.
‘ಈ ಬಾರಿ ಟಿಕೆಟ್ ದರಗಳನ್ನು ಕಡಿಮೆ ಇಡಲಾಗಿದೆ. ಆರ್‌ಸಿಬಿಗೆ ಇಲ್ಲಿ ಉತ್ತಮ ಫ್ಯಾನ್‌ಬೇಸ್ ಇರುವುದರಿಂದ ಹೆಚ್ಚು ಜನರು ಬರುತ್ತಿದ್ದಾರೆ. ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ಇದು ಆಶಾದಾಯಕ ಬೆಳವಣಿಗೆ’ ಎಂದು ಆರ್‌ಸಿಬಿಯ ಅಧಿಕಾರಿಯೊಬ್ಬರು ಸಂತಸ ವ್ಯಕ್ತಪಡಿಸಿದ್ದಾರೆ.
’ಇಂಡಿಯನ್ ಕ್ರಿಕೆಟ್ ಫ್ಯಾನ್‌ಡಮ್ ವರದಿ 2024 ಪ್ರಕಟಿಸಿದೆ. ಅದರಲ್ಲಿ ಶೇ 38ರಷ್ಟು 18 ರಿಂದ 24 ವಯೋಮಿತಿಯವರು, ಶೇ 34ರಷ್ಟು 25–34 ವಯೋಮಿತಿಯವರು, ಶೇ 31ರಷ್ಟು 35ರಿಂದ 44 ವರ್ಷದವರು, ಶೇ 33ರಷ್ಟು 45 ರಿಂದ 54 ವರ್ಷದವರು ಹಾಗೂ ಶೇ 31ರಷ್ಟು 55 ವರ್ಷ ದಾಟಿದ ಅಭಿಮಾನಿಗಳು ಇಲ್ಲಿದ್ದರೆಂದು ಉಲ್ಲೇಖಿಸಲಾಗಿದೆ‘ ಎಂದು ಆರ್‌ಸಿಬಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
‘ಐ ಲವ್ ಯೂ..‘, ‘ವಿಲ್ ಯು ಮ್ಯಾರಿ ಮೀ...‘ ಎಂಬ ಒಕ್ಕಣೆಗಳ ಮುಂದೆ ತಮ್ಮ ನೆಚ್ಚಿನ ಆಟಗಾರ್ತಿಯ ಹೆಸರು ಬರೆದ ಪ್ಲೆಕಾರ್ಡ್‌ಗಳೊಂದಿಗೆ ಕೆಲವು ಹುಡುಗರು ಪ್ರೇಕ್ಷಕರ ಗ್ಯಾಲರಿಯಲ್ಲಿದ್ದರು.
‘ನನಗೆ ಇದು ತವರಿನ ಅಂಗಳ. ಇಲ್ಲಿ ಆಡುತ್ತಿರುವುದು ರೋಮಾಂಚನ ಮೂಡಿಸಿದೆ. ಒಂದು ಸಮಯದಲ್ಲಿ ಆರ್‌ಸಿಬಿ (ಪುರುಷರ ತಂಡ) ಪಂದ್ಯಗಳನ್ನು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಆನಂದಿಸಿದ್ದೆ. ಇದೀಗ ನಾನು ಬೆಂಗಳೂರು ಪ್ರೇಕ್ಷಕರ ಮುಂದೆ ಆಡುತ್ತಿದ್ದೇನೆ’ ಎಂದು ಆಟಗಾರ್ತಿ ಶ್ರೇಯಾಂಕಾ ಪಾಟೀಲ ಹೇಳುತ್ತಾರೆ.
ತಂಡವು ಸೋಲಲಿ, ಗೆಲ್ಲಲಿ ಆರ್‌ಸಿಬಿ..ಆರ್‌ಸಿಬಿ.. ಎಂಬ ಕೂಗು ಪ್ರತಿಧ್ವನಿಸುತ್ತಲೇ ಇರುತ್ತದೆ. ಪುರುಷರ ಐಪಿಎಲ್‌ನಲ್ಲಿ ಈ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಅಚ್ಚುಮೆಚ್ಚು. ಡಬ್ಲ್ಯುಪಿಎಲ್‌ನಲ್ಲಿ ಸ್ಮೃತಿ ಮಂದಾನ ಮತ್ತು ಎಲಿಸ್ ಪೆರಿ ಅವರ ಮೇಲೆ ಹೆಚ್ಚು ಅಭಿಮಾನ!
ಇಂದಿನ ಪಂದ್ಯ (ರಾತ್ರಿ 7.30)
ರಾಯಲ್ ಚಾಲೆಂಜರ್ಸ್ ಬೆಂಗಳೂರು–ಯುಪಿ ವಾರಿಯರ್ಸ್
ನೇರಪ್ರಸಾರ: ಸ್ಪೋರ್ಟ್ಸ್ 18, ಜಿಯೊ ಸಿನಿಮಾ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.