ADVERTISEMENT

40 ಎಸೆತಗಳಲ್ಲಿ ಶತಕ; ಸಂಜು ಸ್ಯಾಮ್ಸನ್ ಮುಂದಿನ ಹಿಟ್‌ಮ್ಯಾನ್?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಅಕ್ಟೋಬರ್ 2024, 11:01 IST
Last Updated 13 ಅಕ್ಟೋಬರ್ 2024, 11:01 IST
<div class="paragraphs"><p>ರೋಹಿತ್ ಶರ್ಮಾ, ಸಂಜು ಸ್ಯಾಮ್ಸನ್</p></div>

ರೋಹಿತ್ ಶರ್ಮಾ, ಸಂಜು ಸ್ಯಾಮ್ಸನ್

   

(ಚಿತ್ರ ಕೃಪೆ: X/@PunjabKingsIPL)

ಬೆಂಗಳೂರು: 2024ನೇ ಸಾಲಿನ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಗೆಲುವಿನ ಬಳಿಕ ಚುಟುಕು ಕ್ರಿಕೆಟ್‌ಗೆ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ವಿದಾಯ ಘೋಷಿಸಿದ್ದರು.

ADVERTISEMENT

ಬಳಿಕ ಟಿ20 ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರನಾಗಿ ಹಿಟ್‌ಮ್ಯಾನ್ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬ ಬಗ್ಗೆ ಪ್ರಶ್ನೆ ಕಾಡಿತ್ತು.

ಇದಕ್ಕೀಗ ಬಿರುಸಿನ ಶತಕದ ಮೂಲಕ ಸಂಜು ಸ್ಯಾಮ್ಸನ್ ಉತ್ತರ ನೀಡಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಸಂಜು ಅವರನ್ನು ಓಪನರ್ ಆಗಿ ಕಣಕ್ಕಿಳಿಸಲು ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ಕೋಚ್ ಗೌತಮ್ ಗಂಭೀರ್ ನಿರ್ಧಾರ ಕೈಗೊಂಡಿದ್ದರು.

ಮೊದಲೆರಡು ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದ ಸಂಜು, ಹೈದರಾಬಾದ್‌ನಲ್ಲಿ ನಡೆದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಕೇವಲ 40 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾರೆ.

ಆ ಮೂಲಕ ರೋಹಿತ್ ಶರ್ಮಾ ಬಳಿಕ (35 ಎಸೆತ) ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ವೇಗದ ಶತಕ ಗಳಿಸಿದ ಎರಡನೇ ಬ್ಯಾಟರ್ ಎನಿಸಿದ್ದಾರೆ.

ಈ ಹಿಂದೆಯೂ ಸಂಜು ಅವರ ತೋಳ್ಬಲವನ್ನು ರೋಹಿತ್ ಅವರೊಂದಿಗೆ ಹೋಲಿಕೆ ಮಾಡಲಾಗುತ್ತಿತ್ತು. ಆದರೆ ಸಿಕ್ಕಿದ ಅವಕಾಶಗಳನ್ನು ಕೈಚೆಲ್ಲುತ್ತಾರೆ ಎಂಬ ಟೀಕೆಯೂ ಸಂಜು ಮೇಲಿತ್ತು.

ಆದರೆ ಈಗ ಸಂಜು ಅವರ ಆಟದಿಂದ ಫಿದಾ ಆಗಿರುವ ಅಭಿಮಾನಿಗಳು, ರೋಹಿತ್ ಅವರೊಂದಿಗೆ ಹೋಲಿಕೆ ಮಾಡಿದ್ದಾರೆ.

ಸವಾಲುಗಳನ್ನು ಮೆಟ್ಟಿ ನಿಲ್ಲುವಲ್ಲಿ ಕೊನೆಗೂ ಸಂಜು ಯಶಸ್ವಿಯಾಗಿದ್ದಾರೆ. ಈ ವೇಳೆ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಕೋಚ್ ಗೌತಮ್ ಗಂಭೀರ್ ನೀಡಿರುವ ಬೆಂಬಲವನ್ನು ಸಂಜು ಸ್ಮರಿಸಿದ್ದಾರೆ.

ಸಂಜು ಸ್ಯಾಮ್ಸನ್ 47 ಎಸೆತಗಳಲ್ಲಿ 111 ರನ್ ಗಳಿಸಿ ಔಟ್ ಆದರು. ಅವರ ಇನಿಂಗ್ಸ್‌ನಲ್ಲಿ 11 ಬೌಂಡರಿ ಹಾಗೂ ಎಂಟು ಸಿಕ್ಸರ್‌ಗಳು ಸೇರಿದ್ದವು. ಸಂಜು ಶತಕದ ಬಲದೊಂದಿಗೆ ಭಾರತ ಆರು ವಿಕೆಟ್ ನಷ್ಟಕ್ಕೆ 297 ರನ್ ಪೇರಿಸಿತು. ಇದು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ದಾಖಲಾದ ಎರಡನೇ ಅತ್ಯಧಿಕ ಮೊತ್ತ. ಟೆಸ್ಟ್ ಆಡುವ ತಂಡಗಳ ಪೈಕಿ ಇದು ದಾಖಲೆಯ ಮೊತ್ತವಾಗಿದೆ. ಭಾರತದ ಇನಿಂಗ್ಸ್‌ನಲ್ಲಿ ಒಟ್ಟು 22 ಸಿಕ್ಸರ್‌ಗಳು ಸೇರಿದ್ದವು.

ಈವರೆಗೆ 33 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಸಂಜು 22.85ರ ಸರಾಸರಿಯಲ್ಲಿ 594 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ಎರಡು ಅರ್ಧಶತಕಗಳು ಸೇರಿವೆ. ಏಕದಿನದಲ್ಲಿ ಒಂದು ಶತಕ ಹಾಗೂ ಐಪಿಎಲ್‌ನಲ್ಲಿ ಮೂರು ಶತಕಗಳು ಸಂಜು ಹೆಸರಿನಲ್ಲಿದೆ.

ಸಂಜು ಸ್ಯಾಮ್ಸನ್ ಈ ವರ್ಷ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.