ಕೋಲ್ಕತ್ತ: ಯಾವತ್ತೂ ಆಡಳಿತಗಾರನಾಗಿ ಉಳಿಯಲು ಸಾಧ್ಯವಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ನಿರ್ಗಮಿತ ಅಧ್ಯಕ್ಷ ಸೌರವ್ ಗಂಗೂಲಿ ಗುರುವಾರ ಹೇಳಿದ್ದಾರೆ.
ಕಳೆದ ಮೂರು ವರ್ಷಗಳಿಂದ ಬಿಸಿಸಿಐ ಅಧ್ಯಕ್ಷರಾಗಿದ್ದ ಗಂಗೂಲಿ ಇದೇ 18ರಂದು ಅಧಿಕಾರವನ್ನು ರೋಜರ್ ಬಿನ್ನಿ ಅವರಿಗೆ ಹಸ್ತಾಂತರಿಸಲಿದ್ದಾರೆ.
ಈ ಮೂಲಕ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೇರಿದ ಕರ್ನಾಟಕದ ಎರಡನೇ ವ್ಯಕ್ತಿ ಎಂಬ ಗೌರವಕ್ಕೆ ಬಿನ್ನಿ ಪಾತ್ರರಾಗಲಿದ್ದಾರೆ. ಬಿನ್ನಿ 1983ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು.
ಶಾಶ್ವತವಾಗಿ ಆಡಲು ಸಾಧ್ಯವಿಲ್ಲ. ಯಾವತ್ತೂ ಆಡಳಿತಗಾರನಾಗಿ ಉಳಿಯಲು ಸಾಧ್ಯವಿಲ್ಲ. ನಾಣ್ಯದ ಎರಡೂ ಬದಿಗಳನ್ನು ನೋಡಿರುವುದು ಖುಷಿ ತಂದಿದೆ. ಭವಿಷ್ಯದಲ್ಲಿ ಮಹತ್ತರ ವಿಷಯಗಳತ್ತ ಗಮನ ಹಾಯಿಸುತ್ತೇನೆ ಎಂದು ಹೇಳಿದರು.
ನಾನು ಕ್ರಿಕೆಟಿಗರ ಆಡಳಿತಗಾರನಾಗಿದ್ದೆ. ಸಾಕಷ್ಟು ಕ್ರಿಕೆಟ್ ನಡೆಯುತ್ತಿರುವುದರಿಂದ ನಿರ್ಣಯ ತೆಗೆದುಕೊಳ್ಳಬೇಕಿತ್ತು. ದೇಶೀಯ ಕ್ರಿಕೆಟ್, ಮಹಿಳಾ ಕ್ರಿಕೆಟ್ ಹೀಗೆ ಸಾಕಷ್ಟು ಕ್ರಿಕೆಟ್ ನಡೆಯುತ್ತಿದೆ. ಹೌದು, ಕೆಲವೊಮ್ಮೆ ಓರ್ವ ವ್ಯಕ್ತಿಯಾಗಿ ನಿರ್ಣಯ ತೆಗೆದುಕೊಳ್ಳಬೇಕು ಎಂದು ಹೇಳಿದರು.
ತಮ್ಮ ಅಧಿಕಾರವಾಧಿಯ ಬಗ್ಗೆ ಮೆಲುಕು ಹಾಕಿದ ಗಂಗೂಲಿ, ಸಂಪೂರ್ಣವಾಗಿ ಆನಂದಿಸಿದ್ದೇನೆ. ಕಳೆದ ಮೂರು ವರ್ಷಗಳತ್ತ ಗಮನ ಹಾಯಿಸಿದರೆ ಎಷ್ಟೋ ಒಳ್ಳೆಯ ಸಂಗತಿಗಳು ನಡೆದಿವೆ. ಕೋವಿಡ್ ಸಮಯದಲ್ಲಿ ಐಪಿಎಲ್ ಆಯೋಜಿಸಿದ್ದೇವೆ. ಪ್ರಸಾರ ಹಕ್ಕುಗಳು ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ತಲುಪಿವೆ ಎಂದು ಹೇಳಿದರು.
ಇದನ್ನೂ ಓದಿ:ಮಹಿಳಾ ಏಷ್ಯಾಕಪ್ ಟಿ20 ಕ್ರಿಕೆಟ್: ಫೈನಲ್ ತಲುಪಿದ ಭಾರತ ತಂಡ
ನಾನು ಎಂಟು ವರ್ಷಗಳ ಕಾಲ ಆಡಳಿತಗಾರನಾಗಿದ್ದೆ. ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷನಾಗಿದ್ದೆ. ನಂತರ ಬಿಸಿಸಿಐ ಅಧ್ಯಕ್ಷನಾದೆ. ಆದರೆ ಓರ್ವ ಕ್ರಿಕೆಟಿಗನಾಗಿ ಹೆಚ್ಚು ಸವಾಲುಗಳನ್ನು ಎದುರಿಸಿದ್ದೇನೆ ಎಂದು ತುಲನೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.