ADVERTISEMENT

ಕೆಎಸ್‌ಸಿಎ ಮೊದಲ ಡಿವಿಷನ್‌ ಕ್ರಿಕೆಟ್ ಟೂರ್ನಿ: ಸಿಸಿಕೆ, ಎಸ್‌ಡಿಎಂ ಶುಭಾರಂಭ

ಕೆಎಸ್‌ಸಿಎ ಮೊದಲ ಡಿವಿಷನ್‌ ಕ್ರಿಕೆಟ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 14:29 IST
Last Updated 18 ಮಾರ್ಚ್ 2021, 14:29 IST
ಲಿಖಿತ್‌ ಬನ್ನೂರ
ಲಿಖಿತ್‌ ಬನ್ನೂರ   

ಹುಬ್ಬಳ್ಳಿ: ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಧಾರವಾಡದ ಕ್ರಿಕೆಟ್‌ ಕ್ಲಬ್‌ ಆಫ್‌ ಕರ್ನಾಟಕ (ಸಿಸಿಕೆ) ‘ಎ’ ಮತ್ತು ಎಸ್‌ಡಿಎಂ ಕ್ರಿಕೆಟ್‌ ಅಕಾಡೆಮಿ ‘ಎ’ ತಂಡಗಳು ಕೆಎಸ್‌ಸಿಎ ಧಾರವಾಡ ವಲಯದ ಮೊದಲ ಡಿವಿಷನ್‌ ಕ್ರಿಕೆಟ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದವು.

ಇಲ್ಲಿನ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಸಿಸಿಕೆ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 306 ರನ್‌ ಗಳಿಸಿತು. ಲಿಖಿತ್‌ ಬನ್ನೂರ (ಔಟಾಗದೆ 110), ನಿನಾದ್‌ ಬಿ.ಎನ್‌. (54) ಮತ್ತು ರಾಹುಲ್‌ ವೆರ್ಣೇಕರ್‌ (48) ಅವರ ಬ್ಯಾಟಿಂಗ್ ಇದಕ್ಕೆ ಕಾರಣವಾಯಿತು.

ಎದುರಾಳಿ ಹುಬ್ಬಳ್ಳಿ ಸ್ಪೋರ್ಟ್ಸ್‌ ಕ್ಲಬ್‌ ‘ಎ’ ತಂಡ 36.3 ಓವರ್‌ಗಳಲ್ಲಿ 174 ರನ್‌ ಕಲೆಹಾಕಿ ಆಲೌಟ್ ಆಯಿತು. ಸಿಸಿಕೆ ತಂಡದ ಶ್ರೀಹರಿ ಎಂ. ನಾಲ್ಕು ಮತ್ತು ರಾಜೇಂದ್ರ ಡಂಗನವರ ಮೂರು ವಿಕೆಟ್ ಕಬಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ADVERTISEMENT

ಬೆಳಗಾವಿಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಸ್‌ಡಿಎಂ 49.1 ಓವರ್‌ಗಳಲ್ಲಿ 305 ರನ್‌ ಗಳಿಸಿತು. ನಿತಿನ್‌ ಭಿಲ್ಲೆ (79), ಪರೀಕ್ಷಿತ್‌ ಒಕ್ಕುಂದ (44), ರೋಷನ್‌ ಜವಳಿ (43) ಹಾಗೂ ಹಿಮಾದ್ರಿ ಮುಕರ್ಡಿ (40) ತಂಡದ ಸವಾಲಿನ ಮೊತ್ತಕ್ಕೆ ಕಾರಣರಾದರು.

ಎದುರಾಳಿ ಬೆಳಗಾವಿಯ ಆನಂದ ಕ್ರಿಕೆಟ್‌ ಅಕಾಡೆಮಿ ‘ಎ’ ತಂಡ 48.4 ಓವರ್‌ಗಳಲ್ಲಿ 201 ರನ್‌ ಗಳಿಸಿ ತನ್ನ ಹೋರಾಟ ಮುಗಿಸಿತು. ಬೆಳಗಾವಿ ತಂಡದ ರಾಜು ಕಲಾಲ್‌ ಮತ್ತು ಇಂದ್ರಸೇನ ದಾನಿ ತಲಾ ಮೂರು ವಿಕೆಟ್‌ ಕಬಳಿಸಿದರು. ಗೆಲುವು ಪಡೆದ ತಂಡಗಳು ತಲಾ ನಾಲ್ಕು ಅಂಕಗಳನ್ನು ಪಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.