ADVERTISEMENT

ಅಭಿಮಾನಿ ಅಜ್ಜಿಗೆ ಕೊಹ್ಲಿ ಪಂದ್ಯದ ಟಿಕೆಟ್ ಕೊಡುಗೆ

ಗಮನ ಸೆಳೆದ 87 ವರ್ಷದ ಚಾರುಲತಾ ಪಟೇಲ್

ಪಿಟಿಐ
Published 3 ಜುಲೈ 2019, 20:00 IST
Last Updated 3 ಜುಲೈ 2019, 20:00 IST
ಚಾರುಲತಾ ಪಟೇಲ್ ಅವರನ್ನು ಭೇಟಿಯಾದ ವಿರಾಟ್ ಕೊಹ್ಲಿ –ರಾಯಿಟರ್ಸ್ ಚಿತ್ರ
ಚಾರುಲತಾ ಪಟೇಲ್ ಅವರನ್ನು ಭೇಟಿಯಾದ ವಿರಾಟ್ ಕೊಹ್ಲಿ –ರಾಯಿಟರ್ಸ್ ಚಿತ್ರ   

ಬರ್ಮಿಂಗ್‌ಹ್ಯಾಂ: ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಮಂಗಳವಾರ ತಮ್ಮ ಎರಡೂ ಕೆನ್ನೆಗಳಲ್ಲಿ ತ್ರಿವರ್ಣ ಧ್ವಜದ ರಂಗು ಹಚ್ಚಿ. ವುವುಝೆಲಾ (ಪೀಪಿ) ಊದುತ್ತ ಕ್ಯಾಮೆರಾ ಕಣ್ಣುಗಳನ್ನು ತನ್ನತ್ತ ಸೆಳೆದಿಟ್ಟುಕೊಂಡ 87 ವರ್ಷದ ಚಾರುಲತಾ ಪಟೇಲ್ ಅವರೀಗ ಮನೆಮಾತಾಗಿದ್ದಾರೆ.

ಬಾಂಗ್ಲಾದೇಶ ತಂಡದ ವಿರುದ್ಧದ ಪಂದ್ಯದಲ್ಲಿ 28 ರನ್‌ಗಳಿಂದ ಗೆದ್ದ ನಂತರ ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಅವರು ಚಾರುಲತಾ ಅವರನ್ನು ಭೇಟಿಯಾದರು. ಬಹಳಷ್ಟು ಹೊತ್ತು ಮಾತನಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಚಾರುಲತಾ, ‘ಪಂದ್ಯ ಮುಗಿದ ಮೇಲೆ ವಿರಾಟ್ ನನ್ನನ್ನು ಭೇಟಿಯಾಗಲು ಬಂದರು. ಕಾಲುಮುಟ್ಟಿ ನಮಸ್ಕರಿಸಿದರು. ಅವರಿಗೆ ಆಶಿರ್ವಾದ ನೀಡಿದೆ. ಉತ್ತಮ ಕೆಲಸವನ್ನು ಸದಾ ಮುಂದುವರಿಸು ಮತ್ತು ವಿಶ್ವಕಪ್ ಜಯಿಸಿ ಎಂದು ಶುಭಹಾರೈಸಿದೆ. ಭಾರತ ತಂಡದ ಗೆಲುವಿಗಾಗಿ ನಾನು ಸದಾ ಪ್ರಾರ್ಥಿಸುತ್ತೇನೆ’ ಎಂದರು.

‘ಟೂರ್ನಿಯಲ್ಲಿ ಭಾರತವು ಆಡುವ ಮುಂದಿನ 2–3 ಪಂದ್ಯಗಳನ್ನು ವೀಕ್ಷಿಸಲು ಬನ್ನಿ ಎಂದು ವಿರಾಟ್ ಹೇಳಿದರು. ಅದಕ್ಕೆ ನನ್ನ ಬಳಿ ಟಿಕೆಟ್‌ಗಳಿಲ್ಲ ಎಂದೆ. ಆಗ ವಿರಾಟ್ ಅವರು, ಚಿಂತಿಸಬೇಡಿ. ತಾವೇ ಟಿಕೆಟ್ ಕೊಡುತ್ತೇನೆಂದು ಹೇಳಿದರು’ ಎಂದು ಚಾರುಲತಾ ಸಂತಸವ್ಯಕ್ತಪಡಿಸಿದರು.

‘ನನ್ನ ಅಪ್ಪ ಅಮ್ಮ ಭಾರತೀಯರು. ನಾನು ಹುಟ್ಟಿದ್ದು ತಾಂಜೇನಿಯಾದಲ್ಲಿ. ನನ್ನ ಮಕ್ಕಳಿಗೆ ಕ್ರಿಕೆಟ್ ಇಷ್ಟ. ಅವರು ಕ್ರಿಕೆಟ್ ಆಡುತ್ತಿರುವಾಗ ನೋಡುತ್ತಿದ್ದೆ. ಆಮೇಲೆ ಆಟ ಅರ್ಥವಾಗತೊಡಗಿತು. ಆಟ ಅರ್ಥವಾದರೆ ಅಲ್ಲವೇ ಅದನ್ನು ಆಸ್ವಾದಿಸುವುದಕ್ಕೆ ಆಗುವುದು? ಹಾಗೆ ನಾನು ಕ್ರಿಕೆಟ್ ಪ್ರೇಮಿಯಾದೆ. ಕಳೆದ 30 ವರ್ಷಗಳಿಂದ ನಾನು ಕ್ರಿಕೆಟ್ ನೋಡುತ್ತಿದ್ದೇನೆ. ಮೊದಲು ಕೆಲಸದಲ್ಲಿದ್ದೆ. ಆಗ ಟಿ.ವಿಯಲ್ಲಿ ಕ್ರಿಕೆಟ್ ನೋಡುತ್ತಿದ್ದೆ. ನಿವೃತ್ತಿ ಆದ ನಂತರ ಹೀಗೆ ಕ್ರೀಡಾಂಗಣಕ್ಕೆ ಬಂದು ವೀಕ್ಷಿಸುತ್ತಿದ್ದೇನೆ. ಕಳೆದ 20 ವರ್ಷಗಳಿಂದ ನಾನು ಕ್ರಿಕೆಟ್ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಂಡಿದ್ದು. ಇಲ್ಲಿ ಭಾರತೀಯರನ್ನು ಕಂಡಾಗ ನನಗೆ ಮಾತನಾಡಿಸಬೇಕು ಎಂದು ಅನಿಸುತ್ತಿರುತ್ತದೆ.ನಾನು ತುಂಬಾ ಸ್ನೇಹಜೀವಿ ಎಂದು ನಗುತ್ತಾರೆ.

‘1983ರಲ್ಲಿ ಕಪಿಲ್ ಪಾಜೀ ವಿಶ್ವಕಪ್ ಗೆದ್ದಾಗ ನಾನು ಅಲ್ಲಿದ್ದೆ. ಇಂಗ್ಲೆಂಡ್‌ಗೆ ಭಾರತೀಯ ಕ್ರಿಕೆಟ್ ತಂಡ ಬಂದಾಗಲೆಲ್ಲಾ ನಾನು ಅವರಿಗಾಗಿ ಪ್ರಾರ್ಥಿಸುತ್ತೇನೆ. ನಾನು ದೇವರನ್ನು ನಂಬುವವಳು. ನಾನು ಗಣಪತಿಯ ಭಕ್ತೆ.ಭಾರತ ತಂಡ ಗೆಲ್ಲುತ್ತದೆ ಎಂಬ ನಂಬಿಕೆ ನನಗಿದೆ. ನಾನು ಆಟಗಾರರಿಗೆ ಇಲ್ಲಿಂದಲೇ ಹಾರೈಸುತ್ತೇನೆ. ಅವರು ಚೆನ್ನಾಗಿ ಆಡಲಿ, ಪಂದ್ಯ ಗೆಲ್ಲಲಿ’ ಎಂದರು.

ಕೊಹ್ಲಿ ಟ್ವೀಟ್; ಈ ಭೇಟಿಯ ನಂತರ ಟ್ವೀಟ್ ಮಾಡಿರುವ ವಿರಾಟ್, ‘ಚಾರುಲತಾ ಪಟೇಲ್‌ ಜೀ ಮತ್ತು ಅಪಾರ ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಚಿರಋಣಿಯಾಗಿದ್ದೇನೆ. ವಯಸ್ಸು ಕೇವಲ ಸಂಖ್ಯೆಯಷ್ಟೇ. ಆಸಕ್ತಿ ಮತ್ತು ಪ್ರೀತಿ ದೊಡ್ಡದು. ಅದೇ ಶ್ರೇಷ್ಠವಾದದ್ದು. ಚಾರುಲತಾ ಅವರ ಆಶೀರ್ವಾದದೊಂದಿಗೆ ಮುಂದಿನ ಸವಾಲಿನತ್ತ ಸಾಗುತ್ತಿದ್ದೇವೆ’ ಎಂದು ಬರೆದಿದ್ದಾರೆ

ಈ ಅಜ್ಜಿಯ ಉತ್ಸಾಹವನ್ನು ನೋಡಿ ಉದ್ಯಮಿ ಆನಂದ್ ಮಹೇಂದ್ರ ಅವರು ಭಾರತವು ಆಡಲಿರುವ ಮುಂದಿನ ಪಂದ್ಯಗಳನ್ನು ವೀಕ್ಷಿಸಲು ಅವರಿಗೆ ಟಿಕೆಟ್ ಕೊಡಿಸುವುದಾಗಿ ಹೇಳಿದ್ಧಾರೆ.

ಪಂದ್ಯದಲ್ಲಿ ಭಾರತ ತಂಡವು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿತ್ತು. ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 314 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಬಾಂಗ್ಲಾ ತಂಡವು 48 ಓವರ್‌ಗಳಲ್ಲಿ 286 ರನ್ ಗಳಿಸಿ ಆಲೌಟ್‌ ಆಯಿತು. ವಿರಾಟ್ ಕೊಹ್ಲಿ ಬಳಗವು ಸೆಮಿಫೈನಲ್ ಪ್ರವೇಶಿಸಿತು.

ಹೀಗೊಬ್ಬರು ಅಭಿಮಾನಿಯನ್ನು ನಾನು ಈವರೆಗೆ ನೋಡಿರಲಿಲ್ಲ: ಕೊಹ್ಲಿ

ನನ್ನ ಎಲ್ಲ ಅಭಿಮಾನಿಗಳಿಗೆ ಅವರ ಪ್ರೀತಿ ಮತ್ತು ಬೆಂಬಲಕ್ಕೆ ವಿಶೇಷವಾಗಿ ಚಾರುಲತಾ ಪಟೇಲ್‌ ಜೀ ಅವರಿಗೆ ನನ್ನ ಧನ್ಯವಾದಗಳು.ಅವರಿಗೆ 87 ವರ್ಷ, ಹೀಗೊಬ್ಬರು ಅಭಿಮಾನಿಯನ್ನು ನಾನು ಈವರೆಗೆ ನೋಡಿರಲಿಲ್ಲ. ವಯಸ್ಸು ಕೇವಲ ಸಂಖ್ಯೆ ಮಾತ್ರ ಆದರೆ ಉತ್ಸಾಹ ನಿಮ್ಮನ್ನು ಪುಟಿದೇಳುವಂತೆ ಮಾಡುತ್ತದೆ.ಅವರ ಆಶೀರ್ವಾದದೊಂದಿಗೆ ನಾವು ಮುಂದಿನ ಹಂತಕ್ಕೆ ಹೋಗುತ್ತಿದ್ದೇವೆ ಎಂದಿದ್ದಾರೆ ಕೊಹ್ಲಿ.

ಈ ಅಜ್ಜಿಯ ಉತ್ಸಾಹವನ್ನು ನೋಡಿ ಖ್ಯಾತ ಉದ್ಯಮಿ ಆನಂದ್ ಮಹೇಂದ್ರ ಅವರು ಭಾರತದ ಇತರ ಪಂದ್ಯಗಳನ್ನು ವೀಕ್ಷಿಸಲು ಇವರಿಗೆ ಉಚಿತ ಟಿಕೆಟ್ ಆಫರ್ ನೀಡಿದ್ದಾರೆ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.