ADVERTISEMENT

ವೆಸ್ಟ್ ಇಂಡೀಸ್ ‘ಎ’ ವಿರುದ್ಧದ ಅಭ್ಯಾಸ ಪಂದ್ಯ: ಚೇತೇಶ್ವರ್ ಪೂಜಾರ ಶತಕ ಸುಂದರ

ಇನಿಂಗ್ಸ್ ಆರಂಭಿಸಿದ ಕನ್ನಡಿಗ ಜೋಡಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2019, 14:11 IST
Last Updated 18 ಆಗಸ್ಟ್ 2019, 14:11 IST
ಚೇತೇಶ್ವರ್ ಪೂಜಾರ
ಚೇತೇಶ್ವರ್ ಪೂಜಾರ   

ಕೂಲಿಡ್ಜ್‌, ವೆಸ್ಟ್ ಇಂಡೀಸ್: ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ಗಾಗಿ ಚೇತೇಶ್ವರ್ ಪೂಜಾರ ಭರ್ಜರಿ ಅಭ್ಯಾಸ ಆರಂಭಿಸಿದರು.

ಭಾನುವಾರ ಇಲ್ಲಿ ಆರಂಭವಾದ ವೆಸ್ಟ್ ಇಂಡೀಸ್ ‘ಎ’ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಪೂಜಾರ ಶತಕ (100; 187ಎಸೆತ, 8ಬೌಂಡರಿ, 1ಸಿಕ್ಸರ್) ಬಾರಿಸಿದರು. ಇದರಿಂದಾಗಿ ಭಾರತ ತಂಡವು ದಿನದಾಟದ ಅಂತ್ಯಕ್ಕೆ 88.5 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 297 ರನ್ ಗಳಿಸಿತು.

ಟಾಸ್ ಗೆದ್ದ ಭಾರತ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡುತ್ತಿಲ್ಲ. ಅವರ ಬದಲಿಗೆ ಅಜಿಂಕ್ಯ ರಹಾನೆ ತಂಡದ ನಾಯಕತ್ವ ವಹಿಸಿದ್ದಾರೆ. ಕರ್ನಾಟಕದ ಕೆ.ಎಲ್. ರಾಹುಲ್ ಮತ್ತು ಮಯಂಕ್ ಅಗರವಾಲ್ ಅವರು ಇನಿಂಗ್ಸ್‌ ಆರಂಭಿಸಿದ್ದು ವಿಶೇಷ. ಆದರೆ ದೊಡ್ಡ ಜೊತೆಯಾಟದ ಆರಂಭ ನೀಡಲು ಇಬ್ಬರಿಗೂ ಸಾಧ್ಯವಾಗಲಿಲ್ಲ. 11ನೇ ಓವರ್‌ನಲ್ಲಿ ಮಯಂಕ್ (12; 28ಎಸೆತ) ಮಧ್ಯಮವೇಗಿ ಜೋನಾಥನ್ ಕಾರ್ಟರ್ ಅವರ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದರು. ಆಗ ಕ್ರೀಸ್‌ಗೆ ಬಂದ ಟೆಸ್ಟ್ ಪರಿಣತ ಚೇತೇಶ್ವರ್ ಪೂಜಾರ ತಮ್ಮ ಬ್ಯಾಟಿಂಗ್ ಸೊಬಗನ್ನು ಉಣಬಡಿಸಿದರು.

ADVERTISEMENT

ಇನ್ನೊಂದೆಡೆ ಲಯ ಕಂಡುಕೊಳ್ಳಲು ಪ್ರಯತ್ನಿಸಿದ ಕೆ.ಎಲ್. ರಾಹುಲ್ ಕೇವಲ 36 ರನ್‌ ಗಳಿಸಿ ಔಟಾದರು. 46 ಎಸೆತ ಎದುರಿಸಿದ ಅವರು 5ಬೌಂಡರಿ ಮತ್ತು ಒಂದು ಸಿಕ್ಸರ್ ಗಳಿಸಿದರು.

14ನೇ ಓವರ್‌ನಲ್ಲಿ ರಾಹುಲ್ ಔಟಾದರು. ಕ್ರೀಸ್‌ಗೆ ಬಂದ ಅಜಿಂಕ್ಯ ರಹಾನೆ ಕೇವಲ ಆರು ಎಸೆತ ಆಡಿ ಒಂದು ರನ್ ಗಳಿಸಿದರು. ಕಾರ್ಟರ್‌ಗೆ ವಿಕೆಟ್ ಒಪ್ಪಿಸಿ ನಡೆದರು.

ಪೂಜಾರ ಜೊತೆಗೂಡಿದ ರೋಹಿತ್ ಶರ್ಮಾ (68; 115ಎಸೆತ, 8ಬೌಂಡರಿ 1ಸಿಕ್ಸರ್) ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 132 ರನ್‌ ಸೇರಿಸಿದರು. ಅಕಿಮ್ ಫ್ರೆಜರ್ ಎಸೆತದಲ್ಲಿ ರೋಹಿತ್ ಔಟಾದರು. ಪೂಜಾರ ಗಾಯಗೊಂಡು ನಿವೃತ್ತಿಯಾದರು. ಹನುಮವಿಹಾರಿ ಮತ್ತು ರಿಷಭ್ ಪಂತ್ ಅವರು ತಂಡದ ಮೊತ್ತಕ್ಕೆ ರನ್‌ಗಳ ಕಾಣಿಕೆ ನೀಡಿದರು. ಇದರಿಂದಾಗಿ ತಂಡದ ಮೊತ್ತವು 300ರ ಸನಿಹ ತಲುಪಿದೆ. ಇನ್ನೂ ಎರಡು ದಿನಗಳ ಆಟ ಬಾಕಿ ಇದೆ.

ಇದೇ 22ರಂದು ಭಾರತ ಮತ್ತು ವಿಂಡೀಸ್ ನಡುವಣ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಟೂರ್ನಿಯ ಅಂಗವಾಗಿರುವ ಈ ಸರಣಿಯಲ್ಲಿ ಎರಡು ಪಂದ್ಯಗಳು ನಡೆಯಲಿವೆ.

ಸಂಕ್ಷಿಪ್ತ ಸ್ಕೋರು: ಭಾರತ: 88.5 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 297 (ಕೆ.ಎಲ್. ರಾಹುಲ್ 36, ಮಯಂಕ್ ಅಗರವಾಲ್ 12, ಚೇತೇಶ್ವರ್ ಪೂಜಾರ 100, ರೋಹಿತ್ ಶರ್ಮಾ 68, ಜಿ. ಹನುಮವಿಹಾರಿ ಔಟಾಗದೆ 37, ರಿಷಭ್ ಪಂತ್ 33, ಕಿಯಾನ್ ಹಾರ್ಡಿಂಗ್ 57ಕ್ಕೆ1, ಜೋನಾಥನ್ ಕಾರ್ಟರ್ 39ಕ್ಕೆ3, ಅಕಿಂ ಫ್ರೆಜರ್ 63ಕ್ಕೆ1)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.