ನವದೆಹಲಿ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ಪುನರಾಯ್ಕೆಗಾಗಿ ರಾಹುಲ್ ದ್ರಾವಿಡ್ ಅವರು ಮನಸ್ಸು ಮಾಡದಿದ್ದರೆ, ವಿವಿಎಸ್ ಲಕ್ಷ್ಮಣ್ ಅವರು ನೇಮಕವಾಗುವ ಸಾಧ್ಯತೆ ದಟ್ಟವಾಗಿದೆ.
ಟಿ20 ವಿಶ್ವಕಪ್ ಟೂರ್ನಿಯ ನಂತರ ದ್ರಾವಿಡ್ ಅವರ ಕಾರ್ಯಾವಧಿ ಮುಗಿಯಲಿದೆ. ನೂತನ ಕೋಚ್ ಆಯ್ಕೆಗೆ ಬಿಸಿಸಿಐ ಅರ್ಜಿಯನ್ನೂ ಆಹ್ವಾನಿಸಿದೆ. ಒಂದೊಮ್ಮೆ ದ್ರಾವಿಡ್ ಅವರು ಕೋಚ್ ಆಗಿ ಮುಂದುವರಿಯಲು ಬಯಿಸಿದರೆ, ಮತ್ತೊಮ್ಮೆ ಅರ್ಜಿ ಹಾಕಿ ಪ್ರಕ್ರಿಯೆಯ ಮೂಲಕವೇ ಆಯ್ಕೆಯಾಗಬೇಕು ಎಂದು ಈಚೆಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದರು.
ಅರ್ಜಿ ಹಾಕಲು ಮೇ 27ರವರೆಗೆ ಸಮಯ ನಿಗದಿಪಡಿಸಲಾಗಿದೆ.
ಕಳೆದ ಮೂರು ವರ್ಷಗಳಿಂದ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥರಾಗಿರುವ ಲಕ್ಷ್ಮಣ್ ಅವರು ಭಾರತ ತಂಡದಲ್ಲಿ ದ್ರಾವಿಡ್ ಅವರೊಂದಿಗೆ ಆಡಿದವರು. 49 ವರ್ಷದ ಲಕ್ಷ್ಮಣ್ ಅವರು ಕೋಚ್ ಆಗಿಯೂ ಅನುಭವ ಹೊಂದಿದ್ದಾರೆ.
ಭಾರತ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್, ಆಸ್ಟ್ರೇಲಿಯಾದ ಜಸ್ಟಿನ್ ಲ್ಯಾಂಗರ್ ಹಾಗೂ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೋಚ್ ಆಗಿರುವ ಸ್ಟೀಫನ್ ಫ್ಲೆಮಿಂಗ್ ಅವರೂ ಕೋಚ್ ಸ್ಥಾನಕ್ಕಾಗಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.