ADVERTISEMENT

IPL 2021: ಹೈದರಾಬಾದ್ ಸವಾಲು ಮೀರುವುದೇ ಆರ್‌ಸಿಬಿ?

ಕಣಕ್ಕೆ ಇಳಿಯಲು ಸಜ್ಜಾದ ದೇವದತ್ತ ಪಡಿಕ್ಕಲ್: ಕೇನ್ ವಿಲಿಯಮ್ಸನ್ ಆಡಲು ಫಿಟ್‌?

ಪಿಟಿಐ
Published 12 ಏಪ್ರಿಲ್ 2021, 19:30 IST
Last Updated 12 ಏಪ್ರಿಲ್ 2021, 19:30 IST
ಯಜುವೇಂದ್ರ ಚಾಹಲ್ ಮತ್ತು ವಿರಾಟ್ ಕೊಹ್ಲಿ –ಪಿಟಿಐ ಚಿತ್ರ
ಯಜುವೇಂದ್ರ ಚಾಹಲ್ ಮತ್ತು ವಿರಾಟ್ ಕೊಹ್ಲಿ –ಪಿಟಿಐ ಚಿತ್ರ   

ಚೆನ್ನೈ: ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಜಯ ಗಳಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಬುಧವಾರದ ಪಂದ್ಯದಲ್ಲಿ ಸನ್‌ ರೈಸರ್ಸ್ ಹೈದರಾಬಾದ್ ಎದುರು ಸೆಣಸಲಿದೆ.

ಮುಂಬೈ ಎದುರಿನ ಪಂದ್ಯದಲ್ಲಿ ಬೆಂಗಳೂರು ಎಲ್ಲ ವಿಭಾಗದಲ್ಲೂ ಪಾರುಪತ್ಯ ಸ್ಥಾಪಿಸಿತ್ತು. ಡೆತ್‌ ಓವರ್‌ಗಳ ಪರಿಣಿತ ಬೌಲರ್‌ನ ಹುಡುಕಾಟದಲ್ಲಿದ್ದ ತಂಡಕ್ಕೆ ಹರ್ಷಲ್ ಪಟೇಲ್ ಹೊಸ ಭರವಸೆ ಮೂಡಿಸಿದ್ದಾರೆ. ಮುಂಬೈ ತಂಡವನ್ನು ಸಾಮಾನ್ಯ ಮೊತ್ತಕ್ಕೆ ಕಟ್ಟಿಹಾಕಲು ನೆರವಾಗಿದ್ದ ಅವರನ್ನು ಬುಧವಾರದ ಪಂದ್ಯದಲ್ಲೂ ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳಲು ತಂಡ ಪ್ರಯತ್ನಿಸಲಿದೆ.

ಮೊಹಮ್ಮದ್ ಸಿರಾಜ್, ಕೈಲ್ ಜೆಮೀಸನ್‌ ಮುಂತಾದವರು ವೇಗದ ದಾಳಿಗೆ ಮೊನಚು ತುಂಬಲು ಸಜ್ಜಾಗಿದ್ದಾರೆ. ಸ್ಪಿನ್ ವಿಭಾಗದ ಚುಕ್ಕಾಣಿ ಹಿಡಿಯಲು ಯಜುವೇಂದ್ರ ಚಾಹಲ್ ಮತ್ತು ವಾಷಿಂಗ್ಟನ್ ಸುಂದರ್ ಇದ್ದಾರೆ. ದೇವದತ್ತ ಪಡಿಕ್ಕಲ್ ಅನುಪಸ್ಥಿತಿಯಲ್ಲಿ ಇನಿಂಗ್ಸ್ ಆರಂಭಿಸುವ ಜವಾಬ್ದಾರಿ ಹೊತ್ತಿದ್ದ ವಾಷಿಂಗ್ಟನ್ ಸುಂದರ್ ನಾಯಕ ವಿರಾಟ್ ಕೊಹ್ಲಿ ಜೊತೆ ಸೊಗಸಾಗಿ ಆಡಿದ್ದಾರೆ. ಎಬಿ ಡಿವಿಲಿಯರ್ಸ್‌, ಗ್ಲೆನ್ ಮ್ಯಾಕ್ಸ್‌ವೆಲ್‌ ಮುಂತಾದವರು ತಂಡದ ಬ್ಯಾಟಿಂಗ್‌ ಶಕ್ತಿಯ ಬೆನ್ನೆಲುಬು ಆಗಿದ್ದಾರೆ.

ADVERTISEMENT

ದೇವದತ್ತ ಪಡಿಕ್ಕಲ್ ಕಣಕ್ಕೆ?

ಕೋವಿಡ್–19 ಸೋಂಕಿಗೆ ಒಳಗಾಗಿದ್ದ ದೇವದತ್ತ ಪಡಿಕ್ಕಲ್ ಹೈದರಾಬಾದ್ ಎದುರಿನ ಪಂದ್ಯದಲ್ಲಿ ಕಣಕ್ಕೆ ಇಳಿಯುವರೇ ಎಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳನ್ನು ಕಾಡತೊಡಗಿದೆ. ಈ ನಡುವೆ ಸೋಮವಾರ ಟ್ವೀಟ್ ಮಾಡಿರುವ ದೇವದತ್ತ ತಾವೀಗ ಸಂಪೂರ್ಣ ಗುಣಮುಖರಾಗಿದ್ದು ಐಪಿಎಲ್‌ನಲ್ಲಿ ಆಡಲು ಸಜ್ಜಾಗಿರುವುದಾಗಿ ಹೇಳಿದ್ದಾರೆ.

ಮಾರ್ಚ್ 22ರಂದು ಸೋಂಕಿಗೆ ಒಳಗಾಗಿದ್ದ ಪಡಿಕ್ಕಲ್ ಕೆಲವು ದಿನ ಪ್ರತ್ಯೇಕವಾಸದಲ್ಲಿದ್ದರು. ಬೇಗನೇ ಗುಣಮುಖರಾಗಿ ಬೆಂಗಳೂರು ತಂಡದ ಅಭ್ಯಾಸ ಶಿಬಿರಕ್ಕೆ ಹಾಜರಾಗಿದ್ದರು.

‘ಕೋವಿಡ್‌ನಿಂದಾಗಿ ಹಿನ್ನಡೆ ಆಗಿದ್ದು ನಿಜ. ಆ ಸೋಂಕು ತಗಲಬಾರದು ಎಂದು ಆಶಿಸಿದ್ದೆ. ಆದರೆ ನಿಯಂತ್ರಿಸಲು ಆಗಲಿಲ್ಲ. ಆದರೆ ಗುಣಮುಖನಾದ ನಂತರ ಫಿಟ್ ಆಗಿರಲು ಗಮನ ಕೊಟ್ಟೆ. ಹೀಗಾಗಿ ಈಗ ಆಡಲು ಸಜ್ಜಾಗಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಕೋಲ್ಕತ್ತ ಎದುರಿನ ಪಂದ್ಯದಲ್ಲಿ ಆಡದೇ ಇದ್ದ ಸನ್‌ರೈಸರ್ಸ್‌ನ ಕೇನ್ ವಿಲಿಯಮ್ಸನ್ ಸದ್ಯದಲ್ಲೇ ಆಡಲು ಸಜ್ಜಾಗಲಿದ್ದಾರೆ ಎಂದು ಕೋಚ್ ಟ್ರೆವರ್ ಬೇಯ್ಲಿಸ್ ಹೇಳಿದ್ದು ಬೆಂಗಳೂರು ಎದುರು ಅವರು ಕಣಕ್ಕೆ ಇಳಿಯುವರೇ ಎಂಬ ಕುತೂಹಲಕ್ಕೆ ಕಾರಣವಾಗಿದೆ.

ಭುಜದಲ್ಲಿ ನೋವು ಕಾಣಿಸಿಕೊಂಡ ಕಾರಣ ಬಾಂಗ್ಲಾದೇಶ ಎದುರಿನ ಸರಣಿಯಲ್ಲಿ ವಿಲಿಯಮ್ಸನ್ ಆಡಿರಲಿಲ್ಲ. ಫಿಟ್ ಆಗಿರದ ಕಾರಣ ಐಪಿಎಲ್‌ನಲ್ಲೂ ಕೆಲಕಾಲ ವಿರಾಮ ಬಯಸಿದ್ದರು. ಆದರೆ ಈಗ ಫಿಟ್‌ ಆಗಿದ್ದಾರೆ ಎಂದು ಬೇಯ್ಲಿಸ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.