ನವದೆಹಲಿ (ಪಿಟಿಐ): ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆ ಆರೋಪ ಎದುರಿಸುತ್ತಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ರಾಹುಲ್ ದ್ರಾವಿಡ್, ಅವರಿಗೆ ನವೆಂಬರ್ 12ರಂದು ವಿಚಾರಣೆಗೆ ಹಾಜರಾಗಲು ಬಿಸಿಸಿಐ ಒಂಬುಡ್ಸ್‌ಮನ್ ಡಿ.ಕೆ. ಜೈನ್ ಸೂಚಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 26ರಂದು ದ್ರಾವಿಡ್ ಅವರನ್ನು ಮುಂಬೈನಲ್ಲಿ ಒಂಬುಡ್ಸ್‌ಮನ್ ಮೊದಲ ಸಲ ವಿಚಾರಣೆ ಮಾಡಿದ್ದರು. ಈಗ ಎರಡನೇ ಸಲ ವಿಚಾರಣೆಗಾಗಿ ಬುಧವಾರ ರಾತ್ರಿ ದ್ರಾವಿಡ್ ಅವರಿಗೆ ಜೈನ್ ಇಮೇಲ್ ಸಂದೇಶ ಕಳಿಸಿದ್ದಾರೆ. ದೆಹಲಿಯಲ್ಲಿ ನಡೆಯುವ ವಿಚಾರಣೆಗೆ ಹಾಜರಾಗಲು ತಿಳಿಸಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ (ಎಂಪಿಸಿಎ) ಆಜೀವ ಸದಸ್ಯ ಸಂಜೀವ್ ಗುಪ್ತಾ ಅವರು ದ್ರಾವಿಡ್ ಅವರನ್ನು ಎನ್‌ಸಿಎ ಅಧ್ಯಕ್ಷರನ್ನಾಗಿ ನೇಮಕ ಮಾಡಬಾರದು. ಅವರು ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘಿಸಿದ್ದಾರೆ ಎಂದು ಬಿಸಿಸಿಐಗೆ ದೂರು ಸಲ್ಲಿಸಿದ್ದರು. ದ್ರಾವಿಡ್ ಅವರು ಇಂಡಿಯಾ ಸಿಮೆಂಟ್ಸ್ ಕಂಪೆನಿಯ ಉಪಾಧ್ಯಕ್ಷರಾಗಿದ್ದಾರೆ. ಆದ್ದರಿಂದ ಅವರು ಎನ್‌ಸಿಎ ಮುಖ್ಯಸ್ಥರಾಗುವಂತಿಲ್ಲ. ಎರಡು ಲಾಭದಾಯಕ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವುದು ನಿಯಮ ಉಲ್ಲಂಘನೆಯಾಗುತ್ತದೆ ಎಂದು ಗುಪ್ತಾ ದೂರಿನಲ್ಲಿ ಉಲ್ಲೇಖಿಸಿದ್ದರು.
ಈ ಕುರಿತು ದ್ರಾವಿಡ್ ಅವರು ಈಗಾಗಲೇ ತಮ್ಮ ವಿವರಣೆ ನೀಡಿದ್ದಾರೆ. ತಾವು ಇಂಡಿಯಾ ಸಿಮೆಂಟ್ಸ್‌ನಿಂದ ದೀರ್ಘ ರಜೆ (ಲಿವ್ ಆಫ್ ಅಬ್ಸೆನ್ಸ್) ತೆಗೆದುಕೊಂಡಿದ್ದು. ಹಿತಾಸಕ್ತಿ ನಿಯಮ ಉಲ್ಲಂಘನೆ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಹೋದ ಆಗಸ್ಟ್‌ನಲ್ಲಿ ದ್ರಾವಿಡ್ ಅವರಿಗೆ ಈ ಪ್ರಕರಣದ ಕುರಿತು ನೋಟಿಸ್ ನೀಡಿದಾಗಲೇ ಹಿರಿಯ ಕ್ರಿಕೆಟಿಗ ಸೌರವ್ ಗಂಗೂಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ‘ಈ ದೇಶದ ಕ್ರಿಕೆಟ್ ಅನ್ನು ದೇವರೇ ಕಾಪಾಡಬೇಕು’ ಎಂದು ಗಂಗೂಲಿ ನಿಯಮದ ವಿರುದ್ಧ ಕಿಡಿ ಕಾರಿದ್ದರು. ಈಚೆಗೆ ಅವರು ಬಿಸಿಸಿಐ ಅಧ್ಯಕ್ಷರಾಗಿ ನೇಮಕವಾದ ನಂತರವೂ ಹಿತಾಸಕ್ತಿ ಸಂಘರ್ಷ ನಿಯಮವು ಗಂಭೀರ ವಿಷಯವಾಗಿದೆ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.