ಚಂಡೀಗಢ: ಫಾಲೊಆನ್‌ಗೆ ಒಳಗಾಗಿದ್ದ ಕರ್ನಾಟಕ ಅಮೋಘವಾಗಿ ಪುಟಿದೆದ್ದು, ಕೂಚ್ ಬಿಹಾರ್ ಟ್ರೋಫಿ ಕ್ರಿಕೆಟ್ (19 ವರ್ಷದೊಳಗಿನವರ) ಟೂರ್ನಿ ಪಂದ್ಯದಲ್ಲಿ ಆತಿಥೇಯ ಚಂಡೀಗಢ ತಂಡವನ್ನು 53 ರನ್‌ಗಳಿಂದ ಸೋಲಿಸಿತು. ನಾಯಕ ಧೀರಜ್ ಗೌಡ (31ಕ್ಕೆ 5) ಕರ್ನಾಟಕದ ಈ ಅಮೋಘ ಜಯದಲ್ಲಿ ಮಿಂಚಿದಿರು.
ಇಲ್ಲಿನ ಸೆಕ್ಟರ್ 26 ಕ್ರಿಕೆಟ್ ಮೈದಾನದಲ್ಲಿ ನಡೆದ ನಾಲ್ಕು ದಿನಗಳ ಪಂದ್ಯದ ಮೂರನೇ ದಿನವಾದ ಗುರುವಾರ ಫಾಲೊ ಆನ್‌ಗೆ ಒಳಗಾದ ಕರ್ನಾಟಕ ಎರಡನೇ ಇನಿಂಗ್ಸ್‌ನಲ್ಲಿ 8 ವಿಕೆಟ್‌ಗೆ 312 ರನ್ ಗಳಿಸಿತ್ತು. ಅಂತಿಮ ದಿನವಾದ ಶುಕ್ರವಾರ ಆ ಮೊತ್ತಕ್ಕೆ 11 ರನ್ ಸೇರಿಸಿ 323ಕ್ಕೆ ಆಲೌಟ್ ಆಯಿತು. ಇದಕ್ಕೆ ಮೊದಲು ಚಂಡೀಗಢ ಮೊದಲ ಇನಿಂಗ್ಸ್‌ನಲ್ಲಿ 173 ರನ್ ಮುನ್ನಡೆ ಪಡೆದಿತ್ತು.
ಹೀಗಾಗಿ ಗೆಲುವಿಗೆ 150 ರನ್‌ಗಳ ಗುರಿ ಎದುರಿಸಿದ ಚಂಡೀಗಢ, ಸ್ಪಿನ್ ಆಲ್‌ರೌಂಡರ್ ಧೀರಜ್ ಗೌಡ ಅವರ ದಾಳಿಗೆ ಸಿಲುಕಿ 97 ರನ್‌ಗಳಿಗೆ ಆಲೌಟ್ ಆಯಿತು. ವೇಗದ ಬೌಲರ್ ಸಮರ್ಥ್ ಎನ್. (10ಕ್ಕೆ2) ಆರಂಭದಲ್ಲಿ ಪೆಟ್ಟು ನೀಡಿದ ನಂತರ ಧೀರಜ್, ಎದುರಾಳಿ ತಂಡದ ಪತನ ತ್ವರಿತಗೊಳಿಸಿರು. ಆರಂಭ ಆಟಗಾರ– ವಿಕೆಟ್ ಕೀಪರ್ ಅಕ್ಷ್ ರಾಣಾ (26) ಮತ್ತು ಇಹಿತ್ ಸಲಾರಿಯಾ (36) ಬಿಟ್ಟರೆ ಉಳಿದವರಾರೂ ಎರಡಂಕಿ ತಲುಪಲಿಲ್ಲ.
ಸ್ಕೋರುಗಳು: ಮೊದಲ ಇನಿಂಗ್ಸ್: ಚಂಡೀಗಢ: 272, ಕರ್ನಾಟಕ: 99; ಎರಡನೇ ಇನಿಂಗ್ಸ್: ಕರ್ನಾಟಕ (ಫಾಲೊಆನ್): 71.5 ಓವರುಗಳಲ್ಲಿ 323 (ಹಾರ್ದಿಕ್ ರಾಜ್ 44, ಮಾರ್ಕಂಡೇಯ ಪಾಂಚಾಲ್ 59ಕ್ಕೆ5); ಚಂಡೀಗಢ: 36.1 ಓವರುಗಳಲ್ಲಿ 97 (ಅಕ್ಷ್ ರಾಣಾ 26, ಇಹಿತ್ ಸಲಾರಿಯಾ 36; ಸಮರ್ಥ್ ಎನ್ 10ಕ್ಕೆ2, ಧೀರಜ್ ಗೌಡ 31ಕ್ಕೆ5).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.