ಜೋಹಾನ್ಸ್‌ಬರ್ಗ್:ಕೊರೊನಾ ವೈರಸ್ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ಕ್ರಿಕೆಟಿಗರು ಸ್ವಯಂ ನಿರ್ಬಂಧ ಹೇರಿಕೊಳ್ಳಲು ನಿರ್ಧರಿಸಿದ್ದಾರೆ.
ದಕ್ಷಿಣ ಆಫ್ರಿಕಾ ತಂಡದ ಆಟಗಾರರಿಗೆ 14 ದಿನಗಳ ಏಕಾಂತವಾಸ ಅನುಭವಿಸುವಂತೆ ವೈದ್ಯರು ಈಗಾಗಲೇ ಸಲಹೆ ನೀಡಿದೆ.
ಭಾರತ ವಿರುದ್ಧದ ಏಕದಿನಕ್ರಿಕೆಟ್ ಸರಣಿಯು ಅರ್ಧದಲ್ಲೇ ರದ್ದಾದ ಬಳಿಕ ಆಫ್ರಿಕನ್ನರು ಮಂಗಳವಾರ ತವರಿಗೆ ತೆರಳಿದ್ದರು. ಅವರನ್ನು ವೈದ್ಯರು ಬುಧವಾರಕೂಲಂಕಷವಾಗಿ ಪರೀಕ್ಷಿಸಿದ್ದರು.ಮುಖ್ಯ ವೈದ್ಯಾಧಿಕಾರಿ ಶುಯಬ್ ಮಾಂಜ್ರಾ ಅವರು ಆಟಗಾರರಿಗೆ ‘ಸೆಲ್ಫ್ ಕ್ವಾರೆಂಟೈನ್’ಗೆ (ಪ್ರತ್ಯೇಕ ವಾಸ) ಸಲಹೆ ನೀಡಿದ್ದಾರೆ.
‘ಆಟಗಾರರು ಸ್ವತಃ ತಮ್ಮ ಮೇಲೆ ನಿರ್ಬಂಧ ಹೇರಿಕೊಳ್ಳುವುದು ಅನಿವಾರ್ಯವಾಗಿದೆ. ಅವರು ಸಾಮಾಜಿಕ ಚಟುವಟಿಕೆಗಳು ಮತ್ತು ಸಂಪರ್ಕವನ್ನು 14 ದಿನಗಳವರೆಗೆ ಕಡಿದುಕೊಳ್ಳಬೇಕು. ವೈರಸ್ ಸೋಂಕಿನ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರಲ್ಲಿ ತೋರಿಸಿಕೊಳ್ಳಬೇಕು. ಆ ಮೂಲಕ ಸೋಂಕು ಹರಡುವುದನ್ನು ಮತ್ತು ತಮಗೆ ಅಪಾಯವಾಗುವುದನ್ನು ತಪ್ಪಿಸಿಕೊಳ್ಳಬೇಕು’ ಎಂದು ಡಾ.ಮಾಂಜ್ರಾ ತಿಳಿಸಿದ್ದರು.
ಇದೀಗ ಆಸ್ಟ್ರೇಲಿಯಾ ಪ್ರವಾಸವನ್ನು ಮೊಟಕುಗೊಳಿಸಿರುವ ಕಿವೀಸ್ ಆಟಗಾರರು, 14 ದಿನಗಳ ಸ್ವಯಂ ಏಕಾಂತವಾಸಕ್ಕೆ ನಿರ್ಧರಿಸಿದ್ದಾರೆ. ಅಲ್ಲಿನ ಪ್ರಧಾನಿಜೆಸಿಂಡಾ ಆರ್ಡರ್ನ್ ಅವರು, ವಿದೇಶದಿಂದ ಮರಳಿದ ಎಲ್ಲರೂ ಸ್ವಯಂಪ್ರತ್ಯೇಕ ವಾಸ ನಡೆಸುವಂತೆ ಬುಧವಾರ ಕರೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.