ADVERTISEMENT

ಐಪಿಎಲ್‌ನಿಂದ ವಾಪಸ್: ಕ್ವಾರಂಟೈನ್ ಮುಗಿದ ಬಳಿಕ ಭಾವುಕರಾದ ಆಸ್ಟ್ರೇಲಿಯಾ ಆಟಗಾರರು

ಪಿಟಿಐ
Published 31 ಮೇ 2021, 11:38 IST
Last Updated 31 ಮೇ 2021, 11:38 IST
ಹೋಟೆಲ್ ಕೊಠಡಿಯಿಂದ ಹೊರಬಂದಾಕ್ಷಣ ‍ಪತ್ನಿಯನ್ನು ಅಪ್ಪಿಕೊಂಡ ಪ್ಯಾಟ್ ಕಮಿನ್ಸ್‌ –ಟ್ವಿಟರ್ ಚಿತ್ರ
ಹೋಟೆಲ್ ಕೊಠಡಿಯಿಂದ ಹೊರಬಂದಾಕ್ಷಣ ‍ಪತ್ನಿಯನ್ನು ಅಪ್ಪಿಕೊಂಡ ಪ್ಯಾಟ್ ಕಮಿನ್ಸ್‌ –ಟ್ವಿಟರ್ ಚಿತ್ರ   

ಸಿಡ್ನಿ: ಮುಂದೂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಂಡು ವಾಪಸ್ ಹೋಗಿರುವ ಆಸ್ಟ್ರೇಲಿಯಾದ ಆಟಗಾರರು, ನೆರವು ಸಿಬ್ಬಂದಿ ಮತ್ತು ವೀಕ್ಷಕ ವಿವರಣೆಕಾರರ ಕ್ವಾರಂಟೈನ್ ಅವಧಿ ಮುಗಿದಿದ್ದು ಸೋಮವಾರ ಹೋಟೆಲ್ ಕೊಠಡಿಗಳಿಂದ ಹೊರಗೆ ಬಂದಿದ್ದಾರೆ.

14 ದಿನ ಕೋಟೆಲ್‌ನಲ್ಲೇ ಕಳೆದಿದ್ದ ಆಟಗಾರರು ಮನೆಯ ಕಡೆಗೆ ಸಾಗುವ ಮುನ್ನ ಪರಸ್ಪರ ಅಪ್ಪಿಕೊಂಡು ಸಂಭ್ರಮಿಸಿದರು. ಕೆಲವರ ಕಣ್ಣಿಂದ ಆನಂದಬಾಷ್ಪ ಸುರಿಯಿತು.

ಬಯೊಬಬಲ್‌ನಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡ ಕಾರಣ ಈ ತಿಂಗಳ ಮೊದಲ ವಾರ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಲಾಗಿದೆ. ಭಾರತರಿಂದ ವಿಮಾನಯಾನಕ್ಕೆ ನಿರ್ಬಂಧ ಇದ್ದುದರಿಂದ ಆಸ್ಟ್ರೇಲಿಯಾದ 38 ಮಂದಿ ಮಾಲ್ಡಿವ್ಸ್‌ಗೆ ಹೋಗಿ ಅಲ್ಲಿಂದ ತವರಿಗೆ ಮರಳಿದ್ದರು. ಆದರೆ ಅವರು ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಬೇಕಾಗಿತ್ತು.

ADVERTISEMENT

ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಅವರನ್ನು ಗರ್ಭಿಣಿ ಪತ್ನಿ ಬೆಕಿ ಬಾಸ್ಟನ್ ಕಾಯುತ್ತಿದ್ದರು. ಹೋಟೆಲ್‌ನಿಂದ ಹೊರಗೆ ಬಂದ ಕೂಡಲೇ ಅಪ್ಪಿ ಮುದ್ದಾಡಿದ ಭಾವುಕ ಕ್ಷಣಗಳ ವಿಡಿಯೊವನ್ನು ಸ್ಥಳೀಯ ಕ್ರೀಡಾ ಪತ್ರಕರ್ತ ಕ್ಲೋ ಅಮಾಂಡ ಬೇಲಿ ಅವರು ಟ್ವಿಟರ್‌ಗೆ ಅಪ್‌ಲೋಡ್ ಮಾಡಿ ‘ದಿನದ ವಿಡಿಯೊ’ ಎಂದು ಬರೆದುಕೊಂಡಿದ್ದಾರೆ.

ಸ್ಟೀವ್ ಸ್ಮಿತ್‌, ಗ್ಲೆನ್ ಮ್ಯಾಕ್ಸ್‌ವೆಲ್‌, ಡೇವಿಡ್ ವಾರ್ನರ್‌ ಮುಂತಾದವರು ಕೂಡ ಕುಟಂಬದವರ ಜೊತೆ ಸಂತಸ ಹಂಚಿಕೊಂಡರು. ಬಹುತೇಕರು ಏಪ್ರಿಲ್‌ನಲ್ಲಿ ಭಾರತಕ್ಕೆ ಬಂದ ನಂತರ ಕುಟುಂಬದ ಸದಸ್ಯರನ್ನು ನೋಡಿಲ್ಲ. ಮ್ಯಾಕ್ಸ್‌ವೆಲ್ ಅವರು ಮಾರ್ಕಸ್‌ ಸ್ಟೋಯಿನಿಸ್ ಅವರನ್ನು ಅಪ್ಪಿಕೊಂಡು ಕುಶಲೋಪರಿ ವಿಚಾರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.