ADVERTISEMENT

IPL 2021 – ಬಯೊಬಬಲ್‌ನಲ್ಲೂ ಕೋವಿಡ್ ಪಿಡುಗು: ಐಪಿಎಲ್‌ ಟೂರ್ನಿ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 4 ಮೇ 2021, 8:28 IST
Last Updated 4 ಮೇ 2021, 8:28 IST
ಐಪಿಎಲ್ ಟ್ರೋಪಿ
ಐಪಿಎಲ್ ಟ್ರೋಪಿ   

ನವದೆಹಲಿ: ಕೋವಿಡ್–19 ಸಾಂಕ್ರಾಮಿಕದ ಪಿಡುಗು ತೀವ್ರಗೊಂಡಿರುವ ಬೆನ್ನಲ್ಲೇ ಮಹತ್ವದ ನಿರ್ಧಾರ ಕೈಗೊಂಡಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಸಕ್ತ ಸಾಲಿನ ಐಪಿಎಲ್‌ ಟೂರ್ನಿಯನ್ನು ಅನಿರ್ದಿಷ್ಟ ಅವಧಿಗೆ ಸ್ಥಗಿತಗೊಳಿಸುವುದಾಗಿ ಮಂಗಳವಾರ ಘೋಷಿಸಿದೆ.

ಈ ಕುರಿತು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತುಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಮಾಹಿತಿ ನೀಡಿದ್ದಾರೆ.

ಕೋಲ್ಕತ್ತ ನೈಟ್‌ ರೈಡರ್ಸ್ ತಂಡದ ಆಟಗಾರರಾದ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ ಅವರಿಗೆ ಕೋವಿಡ್–19 ಸೋಂಕು ದೃಢಪಟ್ಟಿದ್ದರಿಂದ ಸೋಮವಾರ ನಡೆಯಬೇಕಿದ್ದ ಆರ್‌ಸಿಬಿ–ಕೆಕೆಆರ್ ನಡುವಣ ಪಂದ್ಯ ಮುಂದೂಡಿಕೆಯಾಗಿತ್ತು.

ಇದಾದ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಬೌಲಿಂಗ್ ಕೋಚ್ ಎಲ್.ಬಾಲಾಜಿ ಅವರಿಗೆ ಕೋವಿಡ್ ಸೋಂಕು ತಗುಲಿರುವುದು ಗೊತ್ತಾಗಿತ್ತು. ಎರಡೆರಡು ಬಾರಿ ನಡೆಸಿದ ಪರೀಕ್ಷೆಯಲ್ಲಿಯೂ ಅವರಿಗೆ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ನಾಳೆ (ಬುಧವಾರ) ರಾಜಸ್ಥಾನ್ ರಾಯಲ್ಸ್ ಮತ್ತು ಸಿಎಸ್‌ಕೆ ವಿರುದ್ಧ ನಡೆಯಬೇಕಿದ್ದ ಪಂದ್ಯವನ್ನೂ ಮುಂದೂಡಲಾಗಿದೆ ಎಂದು ಮಂಗಳವಾರ ಬೆಳಿಗ್ಗೆ ಬಿಸಿಸಿಐ ತಿಳಿಸಿತ್ತು.

ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಣ ಇಂದಿನ ಪಂದ್ಯ ನಡೆಯಲಿದೆ ಎಂದೇ ಬೆಳಿಗ್ಗೆ ಹೇಳಲಾಗಿತ್ತು. ಆದರೆ ಅಷ್ಟರಲ್ಲೇ, ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ವೃದ್ಧಿಮಾನ್ ಸಹಾ ಅವರಿಗೂ ಸೋಂಕು ತಗುಲಿರುವುದು ದೃಢಪಟ್ಟಿತು.

ಈ ಮಧ್ಯೆ, ದೇಶದಾದ್ಯಂತ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿರುವುದು, ಕೋಲ್ಕತ್ತ ಮತ್ತು ಬೆಂಗಳೂರಿನಲ್ಲಿ ಕೋವಿಡ್ ಪರಿಸ್ಥಿತಿ ಉಲ್ಪಣಗೊಂಡಿರುವುದನ್ನು ಗಮನದಲ್ಲಿಟ್ಟುಕೊಂಡು ಟೂರ್ನಿಯ ಮುಂದಿನ ಎಲ್ಲ ಪಂದ್ಯಗಳನ್ನೂ ಮುಂಬೈಗೆ ಸ್ಥಳಾಂತರಿಸಲು ಬಿಸಿಸಿಐ ಚಿಂತನೆ ನಡೆಸಿತ್ತು. ಈ ಕುರಿತು ಬಿಸಿಸಿಐ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.