ಢಾಕಾ: ಬಾಂಗ್ಲಾದೇಶ ಕ್ರಿಕೆಟ್ ತಂಡದ ಅನುಭವಿ ವಿಕೆಟ್ ಕೀಪರ್ ಮುಷ್ಫಿಕುರ್ ರಹೀಮ್, ಕೋವಿಡ್–19 ಪಿಡುಗಿನಿಂದ ಸಂಕಷ್ಟಕ್ಕೆ ಸಿಲುಕಿರುವವರ ನೆರವಿಗೆ ಧಾವಿಸಿದ್ದಾರೆ.
2013ರಲ್ಲಿ ನಡೆದಿದ್ದ ಶ್ರೀಲಂಕಾ ಎದುರಿನ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿದಾಗ ಬಳಸಿದ್ದ ಬ್ಯಾಟ್ ಅನ್ನು ಹರಾಜಿಗಿಟ್ಟಿದ್ದಾರೆ. ಇದರಿಂದ ಸಂಗ್ರಹವಾಗುವ ಮೊತ್ತವನ್ನು ಕೋವಿಡ್–19 ಪರಿಹಾರ ನಿಧಿಗೆ ನೀಡಲು ತೀರ್ಮಾನಿಸಿದ್ದಾರೆ.
‘ಟೆಸ್ಟ್‌ನಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿದಾಗ ಈ ಬ್ಯಾಟ್ ಬಳಸಿದ್ದೆ. ಇದು ನನ್ನ ಪಾಲಿಗೆ ತುಂಬಾ ಅಮೂಲ್ಯವಾದುದು. ಈ ಬ್ಯಾಟ್‌ನೊಂದಿಗೆ ಸಾಕಷ್ಟು ಸುಮಧುರ ನೆನಪುಗಳೂ ಇವೆ. ದೇಶವು ಸಂಕಷ್ಟಕ್ಕೆ ಸಿಲುಕಿದೆ. ನನ್ನಿಂದ ಸಾಧ್ಯವಾದಷ್ಟು ದೇಣಿಗೆ ನೀಡಲು ಇದು ಸೂಕ್ತ ಸಮಯ. ಹೀಗಾಗಿಯೇ ಬ್ಯಾಟ್ ಹರಾಜಿಗಿಟ್ಟಿದ್ದೇನೆ’ ಎಂದು ಮುಷ್ಫಿಕುರ್, ಸೋಮವಾರ ಟ್ವೀಟ್ ಮಾಡಿದ್ದಾರೆ.
‘ಆನ್‌ಲೈನ್‌ನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಮೊತ್ತವನ್ನು ಬಡವರು ಹಾಗೂ ನಿರ್ಗತಿಕರ ಕಲ್ಯಾಣಕ್ಕೆ ವಿನಿಯೋಗಿಸುತ್ತಿರುವುದರಿಂದ ಆಸಕ್ತರು ಸಾಧ್ಯವಾದಷ್ಟು ಹೆಚ್ಚು ಬಿಡ್ ಮಾಡಬೇಕು’ ಎಂದು ಅವರು ಮನವಿ ಮಾಡಿದ್ದಾರೆ.
ಜನಸಾಮಾನ್ಯರು ಕೊರೊನಾ ಬಿಕ್ಕಟ್ಟಿನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ದೇಣಿಗೆ ಸಂಗ್ರಹಿಸುವ ಸಲುವಾಗಿ ಆಟಗಾರರು ತಮ್ಮ ಜೆರ್ಸಿ, ಬ್ಯಾಟ್ ಸೇರಿದಂತೆ ಇತರೆ ವಸ್ತುಗಳನ್ನು ಹರಾಜಿಗಿಡಬೇಕು ಎಂದು ಬಾಂಗ್ಲಾ ತಂಡದ ಆಲ್‌ರೌಂಡರ್ ಶಕೀಬ್ ಅಲ್ ಹಸನ್, ಇತ್ತೀಚೆಗೆ ಮನವಿ ಮಾಡಿಕೊಂಡಿದ್ದರು.
ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಜೋಸ್ ಬಟ್ಲರ್ ಅವರು ವಿಶ್ವಕಪ್ ಫೈನಲ್‌ನಲ್ಲಿ ಧರಿಸಿದ್ದ ಜೆರ್ಸಿಯನ್ನು ಹರಾಜಿಗಿಟ್ಟು ₹ 61 ಲಕ್ಷ ಸಂಗ್ರಹಿಸಿದ್ದರು. ಅದನ್ನು ಕೋವಿಡ್ ಪರಿಹಾರ ನಿಧಿಗೆ ಕೊಟ್ಟಿದ್ದರು.
32 ವರ್ಷ ವಯಸ್ಸಿನ ರಹೀಮ್, 70 ಟೆಸ್ಟ್ ಪಂದ್ಯಗಳನ್ನಾಡಿದ್ದು, 36.47ರ ಸರಾಸರಿಯಲ್ಲಿ 4,413ರನ್ ದಾಖಲಿಸಿದ್ದಾರೆ. ಇದರಲ್ಲಿ ಮೂರು ದ್ವಿಶತಕ ಹಾಗೂ ಏಳು ಶತಕಗಳು ಸೇರಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.