ADVERTISEMENT

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20ಗೂ ಇಲ್ಲ ಶಮಿ: ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ

ಪಿಟಿಐ
Published 27 ಸೆಪ್ಟೆಂಬರ್ 2022, 5:25 IST
Last Updated 27 ಸೆಪ್ಟೆಂಬರ್ 2022, 5:25 IST
ಮೊಹಮ್ಮದ್ ಶಮಿ
ಮೊಹಮ್ಮದ್ ಶಮಿ   

ನವದೆಹಲಿ: ಕೋವಿಡ್‌ನಿಂದ ಇನ್ನಷ್ಟೇ ಚೇತರಿಸಿಕೊಳ್ಳಬೇಕಿರುವ ವೇಗಿ ಮೊಹಮ್ಮದ್ ಶಮಿ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಕ್ರಿಕೆಟ್ ಸರಣಿಗೂ ತಂಡಕ್ಕೆ ಲಭ್ಯರಿರುವುದಿಲ್ಲ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಲಾಗಿದ್ದು, ಅವರ ಸ್ಥಾನಕ್ಕೆ ಬಂಗಾಳದ ಆಲ್‌ರೌಂಡರ್ ಶಾಬಾಜ್ ಅಹ್ಮದ್‌ಗೆ ಅವಕಾಶ ನೀಡಲಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯ ತಿರುವನಂತಪುರದಲ್ಲಿ ಬುಧವಾರ ನಡೆಯಲಿದೆ.

ಬೆನ್ನು ನೋವಿನಿಂದ ಚೇತರಿಸಿಕೊಳ್ಳದ ದೀಪಕ್ ಹೂಡಾ ಸಹ ಸರಣಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಆಯ್ಕೆ ಸಮಿತಿಯು ಶ್ರೇಯಸ್ ಅಯ್ಯರ್‌ ಅವರನ್ನು ತಂಡಕ್ಕೆ ಕರೆಸಿಕೊಂಡಿದೆ.

ADVERTISEMENT

‘ಶಮಿ ಕೋವಿಡ್‌ನಿಂದ ಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಅವರಿಗೆ ಇನ್ನಷ್ಟು ಸಮಯ ನೀಡಬೇಕಿದೆ. ಅವರ ಬದಲು ಉಮೇಶ್ ಯಾದವ್ ತಂಡದಲ್ಲಿ ಮುಂದುವರಿಯಲಿದ್ದಾರೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಟಿ20 ವಿಶ್ವಕಪ್‌ಗೆ ಮುನ್ನ ವಿಕೆಟ್‌ಕೀಪರ್‌ ಬ್ಯಾಟರ್‌ ದಿನೇಶ್‌ ಕಾರ್ತಿಕ್‌ಗೆ ಇನ್ನಷ್ಟು ಪಂದ್ಯಗಳಲ್ಲಿ ಆಡಲು ಅವಕಾಶ ನೀಡಲಾಗುವುದು ಎಂದು ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಸೋಮವಾರಹೇಳಿದ್ದರು.ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅಷ್ಟೊಂದು ಪ್ರಭಾವಿಗಳೆನಿಸದ ವೇಗಿಗಳಾದ ಭುವನೇಶ್ವರ್‌ ಕುಮಾರ್‌ ಮತ್ತು ಹರ್ಷಲ್‌ ಪಟೇಲ್‌ ಅವರ ಬೆಂಬಲಕ್ಕೂ ರೋಹಿತ್‌ ನಿಂತಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಭಾನುವಾರ ಕೊನೆಗೊಂಡ ಮೂರು ಪಂದ್ಯಗಳ ಟಿ20 ಸರಣಿಯನ್ನು ಭಾರತ 2–1ರಿಂದ ಗೆದ್ದುಕೊಂಡಿತ್ತು. ದಕ್ಷಿಣ ಆಫ್ರಿಕಾ ಸರಣಿಯ ಬಳಿಕ ತಂಡವು ಅಕ್ಟೋಬರ್‌ನಲ್ಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವುದಕ್ಕಾಗಿ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.