ADVERTISEMENT

ಡೇವಿಡ್ ವಾರ್ನರ್ ಮೇಲಿನ ನಿಷೇಧ ತೆರವಿಗೆ ಮುಂದಾದ ಕ್ರಿಕೆಟ್ ಆಸ್ಟ್ರೇಲಿಯಾ

ರಾಯಿಟರ್ಸ್
Published 13 ಅಕ್ಟೋಬರ್ 2022, 3:10 IST
Last Updated 13 ಅಕ್ಟೋಬರ್ 2022, 3:10 IST
ಡೇವಿಡ್ ವಾರ್ನರ್ (ಪಿಟಿಐ ಚಿತ್ರ)
ಡೇವಿಡ್ ವಾರ್ನರ್ (ಪಿಟಿಐ ಚಿತ್ರ)   

ಸಿಡ್ನಿ: ಸ್ಫೋಟಕ ಬ್ಯಾಟರ್‌ ಡೇವಿಡ್‌ ವಾರ್ನರ್‌ ಅವರಿಗೆ ತಂಡದ ನಾಯಕತ್ವ ಸ್ಥಾನಗಳ ಮೇಲೆ ಹೇರಲಾಗಿರುವ ನಿಷೇಧವನ್ನು ತೆರವುಗೊಳಿಸಲು ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ) ಮುಂದಾಗಿದೆ. ನಿಷೇಧ ತೆರವಿನ ವಿಚಾರವಾಗಿ ಮಂಡಳಿಯ ಸಮಗ್ರತೆ ಕೋಡ್‌ ಅನ್ನು ಪರಿಶೀಲಿಸಲಾಗುವುದು ಎಂದು ಸಿಎ ಅಧ್ಯಕ್ಷ ಲಾಚ್ಲಾನ್ ಹೆಂಡರ್ಸನ್‌ ಹೇಳಿದ್ದಾರೆ.

2018ರ ಮಾರ್ಚ್‌ನಲ್ಲಿ ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿರುವ ನ್ಯೂಲ್ಯಾಂಡ್ಸ್‌ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಟೆಸ್ಟ್‌ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದ ವೇಳೆ ವರದಿಯಾದ ಚೆಂಡು ವಿರೂಪ ಪ್ರಕರಣದಲ್ಲಿ ಆಸ್ಟ್ರೇಲಿಯಾದ ಆಗಿನ ನಾಯಕ ಸ್ಟೀವ್‌ ಸ್ಮಿತ್‌, ಡೇವಿಡ್‌ವಾರ್ನರ್‌ ಮತ್ತುಕ್ಯಾಮರಾನ್ ಬ್ಯಾಂಕ್ರಾಫ್ಟ್‌ ಭಾಗಿಯಾಗಿದ್ದರು.

ಇದನ್ನೂ ಓದಿ:ಮೋಸದಾಟದ ಮತ್ತೊಂದು ರೂಪ

ADVERTISEMENT

ಹೀಗಾಗಿ ವಾರ್ನರ್‌, ಸ್ಮಿತ್‌ ಅವರಿಗೆ ಒಂದು ವರ್ಷದವರೆಗೆ ಕ್ರಿಕೆಟ್‌ನಿಂದ ಹಾಗೂ ತಂಡದ ನಾಯಕತ್ವ ಸ್ಥಾನಗಳಿಂದ ಶಾಶ್ವತವಾಗಿ ನಿಷೇಧ ಹೇರಲಾಗಿತ್ತು. ಬ್ಯಾಂಕ್ರಾಫ್ಟ್‌ ಅನ್ನು ಒಂಬತ್ತು ತಿಂಗಳು ನಿಷೇಧಿಸಲಾಗಿತ್ತು.

ಸದ್ಯ ಚುಟುಕು (ಟಿ20) ಮಾದರಿಯಲ್ಲಿ ಆಸ್ಟ್ರೇಲಿಯಾ ತಂಡ ಮುನ್ನಡೆಸುತ್ತಿರುವ ಆ್ಯರನ್‌ ಫಿಂಚ್‌ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಹೀಗಾಗಿ ತೆರವಾಗಿರುವಏಕದಿನ ತಂಡದ ನಾಯಕ ಸ್ಥಾನಕ್ಕೆ ಡೇವಿಡ್‌ ವಾರ್ನರ್ ಅವರನ್ನು ಪರಿಗಣಿಸಬೇಕು. ಅವರ ಮೇಲಿನ ನಿಷೇಧ ಕೈಬಿಡಬೇಕು ಎಂದು ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಒತ್ತಾಯಿಸಿದ್ದಾರೆ. ಇದರಿಂದಾಗಿ ಸಿಎ ಈ ನಿರ್ಧಾರಕ್ಕೆ ಬಂದಿದೆ.

ಆಟಗಾರರ ಮೇಲಿನ ನಿಷೇಧವನ್ನು ತೆರವುಗೊಳಿಸಬಹುದು ಎಂಬುದನ್ನು ಪರಿಗಣಿಸುವುದು ಮುಖ್ಯ ಎಂದು ಸಿಎ ಅಧ್ಯಕ್ಷ ಲಾಚ್ಲಾನ್ ಹೆಂಡರ್ಸನ್‌ ಅವರು ಗುರುವಾರ ನಡೆದವಾರ್ಷಿಕ ಸಾಮಾನ್ಯ ಸಭೆಯ ನಂತರ ಮಾಧ್ಯಮದವರಿಗೆ ಹೇಳಿದ್ದಾರೆ.

ಸಾಧ್ಯವಾದಷ್ಟು ಬೇಗಪರಿಶೀಲನೆಯನ್ನು ನಡೆಸಲಾಗುವುದು. ಖಾಲಿ ಇರುವ ನಾಯಕತ್ವದ ಸ್ಥಾನಗಳಿಗೆ ವಾರ್ನರ್ ಅವರನ್ನು ಪರಿಗಣಿಸಲು ಅಗತ್ಯವಾದ ಬದಲಾವಣೆಗಳನ್ನು ಸೂಕ್ತ ಸಮಯದಲ್ಲಿ ತರಲಾಗುವುದು ಎಂದೂ ಅವರು ಮಾಹಿತಿ ನೀಡಿದ್ದಾರೆ.

'ಚೆಂಡು ವಿರೂಪದ ಬಗ್ಗೆ ಬೌಲರ್‌ಗಳಿಗೂ ಗೊತ್ತಿತ್ತು'
ಮೆಲ್ಬೋರ್ನ್ (ಪಿಟಿಐ‌): ಚೆಂಡು ವಿರೂಪ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಕ್ಯಾಮರಾನ್ ಬ್ಯಾಂಕ್ರಾಫ್ಟ್‌, ಪ್ರಕರಣದ ಬಗ್ಗೆ ಅಂದಿನ ನಾಯಕ ಸ್ಟೀವನ್ ಸ್ಮಿತ್, ಡೇವಿಡ್ ವಾರ್ನರ್ ಜೊತೆಗೆ ತಂಡದಲ್ಲಿದ್ದ ಬೌಲರ್‌ಗಳಿಗೂ ಅರಿವಿತ್ತು ಎಂದು ಕಳೆದ ವರ್ಷ ಮೇ ತಿಂಗಳಲ್ಲಿ ಹೇಳಿಕೆ ನೀಡಿದ್ದರು.

ಪಂದ್ಯದ ವೇಳೆ ಪ್ಯಾಂಟ್ ಜೇಬಲ್ಲಿ ಸ್ಯಾಂಡ್ ಪೇಪರ್ ಹೊಂದಿದ್ದ ಬ್ಯಾಂಕ್ರಾಫ್ಟ್ ಚೆಂಡನ್ನು ವಿರೂಪಗೊಳಿಸುವ ವೇಳೆ ಸಿಕ್ಕಿಬಿದ್ದಿದ್ದರು.

ಅಂದಿನ ಆಸೀಸ್ ತಂಡದಲ್ಲಿ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ಜೋಶ್ ಹೇಜಲ್‌ವುಡ್, ಮಿಚೆಲ್ ಮಾರ್ಶ್ ಮತ್ತು ನಥನ್ ಲಯನ್ ಬೌಲರ್‌ಗಳಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.