ADVERTISEMENT

ಒಂದು ಜೀವ ಹಲವು ರೂಪ: ಶೇನ್ ವಾರ್ನ್ ಕುರಿತ ಬರಹ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2022, 19:30 IST
Last Updated 12 ಮಾರ್ಚ್ 2022, 19:30 IST
ಶೇನ್ ವಾರ್ನ್
ಶೇನ್ ವಾರ್ನ್   

ಫುಟ್‌ಬಾಲ್ ಕ್ಷೇತ್ರದಲ್ಲಿ ಡಿಯಾಗೊ ಮರಡೋನಾ ಅವರಿಗಿದ್ದ ರಂಗುರಂಗಿನ ವರ್ಚಸ್ಸು ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾದ ಶೇನ್ ವಾರ್ನ್ ಅವರಿಗೆ ಇತ್ತು. ಕ್ರಿಕೆಟ್‌ ಅಂಗಳದಲ್ಲಿ ಅವರು ಎಷ್ಟು ಹೆಸರು ಮಾಡಿದ್ದರೋ ಹೊರಗೂ ಅವರ ಜೀವನಶೈಲಿ ಅಷ್ಟೇ ಸುದ್ದಿ ಮಾಡಿತ್ತು. ಮದಿರೆ, ಮಾನಿನಿಯರ ಸಂಗದ ಅವರ ಜೀವನ ವರ್ಣರಂಜಿತವಾಗಿತ್ತು. ತಮ್ಮ ಎಲ್ಲ ಗುಣಗಳು, ಹವ್ಯಾಸಗಳನ್ನು ಅವರು ಎಂದೂ ಮುಚ್ಚಿಟ್ಟಿರಲಿಲ್ಲ. ಅವರ ವ್ಯಕ್ತಿತ್ವದ ಒಂದು ಝಲಕ್‌ ಇಲ್ಲಿದೆ...

***

ಶೇನ್ ವಾರ್ನ್ ಕಿಂಡರ್‌ಗಾರ್ಡನ್‌ ಶಾಲೆಗೆ ಹೋಗುತ್ತಿದ್ದರು. ಕಾಂಕ್ರಿಟ್ ಸಿಲಿಂಡರ್ ತಯಾರು ಮಾಡುವ ಕಾರ್ಖಾನೆ ಪಕ್ಕದಿಂದ ನಡೆದುಕೊಂಡು ಹೋಗುತ್ತಿದ್ದರು. ಅದೇ ಸಂದರ್ಭದಲ್ಲಿ ಕಾಂಪೌಂಡ್ ಮೇಲಿಂದ ಹಾರಿದ್ದ ವ್ಯಕ್ತಿಯೊಬ್ಬ ಶೇನ್ ಮೇಲೆ ಬಿದ್ದ. ಈ ಅವಘಡದಲ್ಲಿ ಪುಟ್ಟ ಬಾಲಕನ ಎರಡೂ ಕಾಲುಗಳ ಮೂಳೆ ಮುರಿದವು. ವೈದ್ಯರು ದಪ್ಪ ಬ್ಯಾಂಡೇಜ್ ಹಾಕಿದರು. ನಡೆದಾಡಲು ಕಷ್ಟಪಡುತ್ತಿದ್ದ ಹುಡುಗ ಶೇನ್‌ಗೆ ತಂದೆ ಕೀತ್ ಒಂದು ಟ್ರಾಲಿ ಸಿದ್ಧಪಡಿಸಿಕೊಟ್ಟರು.

ADVERTISEMENT

ಟ್ರಾಲಿಯ ಆಸರೆಯಲ್ಲಿ ಓಡಾಡುವಾಗ ಮಣಿಕಟ್ಟಿನ ಮೇಲೆ ಹೆಚ್ಚು ಭಾರ ಬೀಳುತ್ತಿತ್ತು. ಅದರಿಂದಾಗಿ ಮಣಿಕಟ್ಟು ಬಲಿಷ್ಠವಾದವು. ಕ್ರಿಕೆಟ್ ಆಡಲಾರಂಭಿಸಿದಾಗ ಮಣಿಕಟ್ಟಿನ ಬಲದಿಂದ ಮಾಡುತ್ತಿದ್ದ ಸ್ಪಿನ್ ಬ್ಯಾಟರ್‌ಗಳಿಗೆ ಸಿಂಹಸ್ವಪ್ನವಾದವು.

’ಬಹುಶಃ ಅವತ್ತು ನನ್ನ ಕಾಲು ಮುರಿಯದೇ ಹೋಗಿದ್ದರೆ, ಇಷ್ಟು ದೊಡ್ಡ ಕ್ರಿಕೆಟಿಗನಾಗಲು ಸಾಧ್ಯವೇ ಆಗುತ್ತಿರಲಿಲ್ಲ’ ಎಂದು ಶೇನ್ ಹೇಳಿಕೊಂಡಿದ್ದರು.

ಟೆನಿಸ್‌ ಕೋರ್ಟ್‌ನಲ್ಲಿ ಸ್ಪಿನ್ ಪಾಠ

ಶೇನ್ ವಾರ್ನ್ ತಮ್ಮ ಲೆಗ್‌ ಸ್ಪಿನ್ ಬೌಲಿಂಗ್ ಕಲೆಯ ಮೂಲಪಾಠಗಳನ್ನು ಕಲಿತಿದ್ದು ಟೆನಿಸ್ ಕೋರ್ಟ್‌ನಲ್ಲಂತೆ. ಶೇನ್ ತಾಯಿ ಬ್ರಿಗೆಟ್ ಅವರು 1970ರಲ್ಲಿ ರಾಜಕೀಯ ಧುರೀಣ ಬಾಬ್ ಹಾಕ್ ಮತ್ತು ಹೇಜಲ್ ದಂಪತಿಯ ಮನೆಯನ್ನು ಸ್ವಚ್ಛಗೊಳಿಸಲು ಹೋಗುತ್ತಿದ್ದರು. ಆಗ ಶೇನ್ ಮತ್ತು ಸಹೋದರ ಜೇಸನ್ ಕೂಡ ತಾಯಿಯೊಂದಿಗೆ ಅಲ್ಲಿಗೆ ಹೋಗುತ್ತಿದ್ದರು. ಶೇನ್ ಕ್ರಿಕೆಟ್ ಪ್ರೀತಿ ಮತ್ತು ಮಣಿಕಟ್ಟಿನ ಶಕ್ತಿಯನ್ನು ಹಾಕ್ ಗಮನಿಸಿದ್ದರು. ಮುಂದೆ ಅವರು ಪ್ರಧಾನಿಯಾದರು. ಆ ಸಂದರ್ಭದಲ್ಲಿ ಸರ್ಕಾರದಿಂದ ಅವರ ಮನೆಯ ಆವರಣದಲ್ಲಿ ಟೆನಿಸ್ ಕೋರ್ಟ್ ನಿರ್ಮಿಸಲು ಅನುದಾನ ಲಭಿಸಿತು. ಆಗ ತಯಾರಾದ ಟೆನಿಸ್ ಕೋರ್ಟ್‌ನಲ್ಲಿ ಶೇನ್‌ಗೆ ಸ್ವತಃ ಬಾಬ್ ಹಾಕ್ ಅವರೇ ಸ್ಪಿನ್ ಬೌಲಿಂಗ್ ಮೂಲಪಾಠಗಳನ್ನು ಹೇಳಿಕೊಟ್ಟಿದ್ದರಂತೆ. ಅದರಿಂದಾಗಿಯೇ ಶೇನ್ ಅವರಿಗೆ ಹಾಕ್ ದಂಪತಿಯ ಬಗ್ಗೆ ಅಪಾರ ಗೌರವ ಇತ್ತು.

ವಿಲಾಸಿ ಜೀವನಪ್ರೇಮಿ

ಮಧ್ಯಮವರ್ಗದ ಆರ್ಥಿಕ ಸಂಕಷ್ಟಗಳನ್ನು ಅನುಭವಿಸಿದ್ದ ಶೇನ್‌ಗೆ ಮೊದಲಿನಿಂದಲೂ ದೊಡ್ಡ ಶ್ರೀಮಂತನಾಗುವ ಮತ್ತು ವಿಲಾಸಿ ಜೀವನ ನಡೆಸುವ ಖಯಾಲಿ ಬೆಳೆದಿತ್ತು. ತಮ್ಮ ಖರ್ಚಿಗಾಗಿ ಪಿಜಾ, ಬರ್ಗರ್ ಡೆಲಿವರಿಬಾಯ್ ಆಗಿಯೂ ಅಲ್ಪಾವಧಿ ಕೆಲಸ ಮಾಡಿದ್ದ ಶೇನ್‌ಗೆ ವ್ಯಾವಹಾರಿಕ ಜ್ಞಾನ ಚೆನ್ನಾಗಿ ಇತ್ತು. ಪಂದ್ಯಗಳನ್ನು ಗೆಲ್ಲಿಸುವ ಆಟಗಾರನಾಗಿ ಬೆಳೆದಂತೆಲ್ಲ ಕ್ರಿಕೆಟ್ ಆಸ್ಟ್ರೇಲಿಯಾದಿಂದ ಉಳಿದವರಿಗಿಂತ ಹೆಚ್ಚು ಸಂಭಾವನೆಗೆ ಬೇಡಿಕೆ ಇಟ್ಟಿದ್ದರು. ಒಂದಷ್ಟನ್ನು ಪಡೆಯುವಲ್ಲಿಯೂ ಯಶಸ್ವಿಯಾಗಿದ್ದರು. ಜೊತೆಗೆ ಜಾಹೀರಾತು ಮತ್ತು ವಾಣಿಜ್ಯ ಒಪ್ಪಂದಗಳಿಗೂ ಕೈಹಾಕಿದ್ದರು. ಕಾಮೆಂಟ್ರಿ ಒಪ್ಪಂದದಲ್ಲಿಯೇ ಮೂರು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಣ ಪಡೆದಿದ್ದರು. ಅವರ ಒಟ್ಟು ಆಸ್ತಿಯ ಮೌಲ್ಯ ₹ 35 ಸಾವಿರ ಕೋಟಿ!

ಕಾರುಗಳ ಖಯಾಲಿ

ಶೇನ್ ವಾರ್ನ್‌ ಅವರಿಗೆ ಐಷಾರಾಮಿ ಕಾರುಗಳ ಖಯಾಲಿ ಇತ್ತು. ಅವರ ವೈಭವೋಪೇತ ಮನೆಯ ಕೆಳ ಅಂತಸ್ತಿನ ಗ್ಯಾರೇಜ್‌ನಲ್ಲಿ ಫೆರಾರಿ, ಬೆಂಟ್ಲಿ, ಮರ್ಸಿಡಿಸ್, ಬಿಎಂಡಬ್ಲ್ಯು, ಬುಗಾಟಿ ವೆರಾನ್, ಹೋಲ್ಡನ್ ವಿಕೆ ಕಮಾಂಡರ್, ಲ್ಯಾಂಬೊರ್ಗಿನಿ ಸೇರಿದಂತೆ 20 ಕಾರುಗಳಿದ್ದವು. ತಮ್ಮ ಮನೆಯಲ್ಲಿ ಹದಿಮೂರು ವೈಭವೋಪೇತ ಬೆಡ್‌ರೂಮ್‌ಗಳು, ವಿಶಾಲವಾದ ಹಾಲ್, ಮದಿರಾ ಭವನ ಮತ್ತು ಕೆಳಅಂತಸ್ತಿನಲ್ಲಿ ದೊಡ್ಡದಾದ ಸುಸಜ್ಜಿತ ಗ್ಯಾರೇಜಿನಲ್ಲಿ ಕಾರುಗಳ ಸಂತೆಯೇ ಇದೆ ಎಂದು ಯಾವಾಗಲೂ ಹೇಳಿಕೊಳ್ಳುತ್ತಿದ್ದರು.

ಪತ್ನಿ, ಮೂವರು ಮಕ್ಕಳು ಮತ್ತು ಗೆಳತಿಯರು

ಶೇನ್ ವಾರ್ನ್ ರಾಷ್ಟ್ರೀಯ ತಂಡದಲ್ಲಿ ಪದಾರ್ಪಣೆ ಮಾಡುವ ಮುನ್ನವೇ ಪರಿಚಯವಾಗಿದ್ದವರು ಸಿಮೊನ್ ಕ್ಯಾಲ್ಹಾನ್. ಸೆಲೆಬ್ರಿಟಿ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದರು. ಪರಿಚಯ ಪ್ರೇಮವಾಗಿ ಬೆಳೆದು, 1995ರಲ್ಲಿ ಮದುವೆಯೂ ಆಯಿತು. ಮೂವರು ಮುದ್ದಾದ ಮಕ್ಕಳೂ ಅವರ ಬಾಳಿನಲ್ಲಿ ಖುಷಿ ತುಂಬಿದರು. ಆದರೆ, ‘ಪ್ಲೇ ಬಾಯ್‌’ ಆಗಿಯೇ ಉಳಿದಿದ್ದ ಶೇನ್ ವಾರ್ನ್ ದಾಂಪತ್ಯ ಜೀವನಕ್ಕೆ ಪರಸ್ತ್ರೀ ಸಂಗವು ಮುಳುವಾಯಿತು. 2005ರಲ್ಲಿ ಸಿಮೊನ್ ವಿಚ್ಛೇದನ ಪಡೆದರು.

ರೂಪದರ್ಶಿ ಎಮಿಲಿ ಸ್ಕಾಟ್ ಮತ್ತು ವಿವಾಹ ವಿಚ್ಛೇದನದ ನಂತರ ನಟಿ ಲೀಜ್ ಹರ್ಲಿಯೊಂದಿಗೆ ಒಂದಷ್ಟು ಕಾಲ ಸಹಜೀವನ ನಡೆಸಿದ್ದು ಆಸ್ಟ್ರೇಲಿಯಾ ನಿಯತಕಾಲಿಕೆಗಳಿಗೆ ರಸವತ್ತಾದ ಕಥೆಗಳನ್ನು ಕಟ್ಟಿಕೊಟ್ಟಿದ್ದವು. ಶೇನ್ ವಾರ್ನ್ ಭಾಗಿಯಾಗಿದ್ದ ’ತ್ರೀಸಮ್‌‘ ಪ್ರಕರಣವೂ ಬಾರಿ ಸುದ್ದಿಯಾಗಿತ್ತು.

ಅನಕೊಂಡ ಕಚ್ಚಿದ ಪ್ರಸಂಗ

ಸದಾ ಸೆಲಿಬ್ರಿಟಿಯಾಗಿರಲು ವಾರ್ನ್ ಏನು ಬೇಕಾದರೂ ಮಾಡಲು ಸಿದ್ಧರಾಗಿರುತ್ತಿದ್ದರು. ಜನಪ್ರಿಯ ರಿಯಾಲಿಟಿ ಶೋ ’ದ ಸೆಲಿಬ್ರಿಟಿ‘ಯಲ್ಲಿಯೂ ಅವರು ಭಾಗವಹಿಸಿದ್ದರು. ಈ ಕಾರ್ಯಕ್ರಮದ ಅತ್ಯಂತ ಕಠಿಣ ಟಾಸ್ಕ್ ಆಗಿದ್ದ ದಕ್ಷಿಣ ಆಫ್ರಿಕಾದ ದಟ್ಟಾರಣ್ಯದಲ್ಲಿ ಜೀವನ ಎಪಿಸೋಡ್‌ನಲ್ಲಿ ಅವರಿದ್ದರು. ಅಲ್ಲಿ ಹಾವುಗಳು ತುಂಬಿದ್ದ ಕೊಳದಲ್ಲಿ ಅವರು ನಿಂತಾಗ ಅನಕೊಂಡಾ ಹಾವೊಂದು ಅವರ ತಲೆಗೆ ಕಚ್ಚಿತ್ತು. ಆದರೆ, ವಿಷಕಾರಿಯಲ್ಲದ ಕಾರಣ ಅವರಿಗೆ ಯಾವುದೇ ಅಪಾಯವಾಗಿರಲಿಲ್ಲ.

ಡಿಸ್ಟಿಲರಿ ಮತ್ತು ಸ್ಯಾನಿಟೈಸರ್

ಶೇನ್ ಕ್ರಿಕೆಟ್‌ನಷ್ಟೇ ವ್ಯಾಪಾರ ವಹಿವಾಟಿನಲ್ಲಿಯೂ ಚಾಣಾಕ್ಷರಾಗಿದ್ದರು. ಅವರು ತಮ್ಮದೇ ಸ್ವಂತ ಡಿಸ್ಟಿಲರಿ ಹೊಂದಿದ್ದರು. ಅದರಲ್ಲಿ ತಯಾರಾಗುತ್ತಿದ್ದ ಜಿನ್‌ಗೆ ಉತ್ತಮ ಬೇಡಿಕೆ ಇತ್ತು. 2020ರಲ್ಲಿ ಕೊರೊನಾ ಹಾವಳಿ ಆರಂಭವಾದಾಗ, ಆ ಡಿಸ್ಟಿಲರಿಯಲ್ಲಿ ಜಿನ್ ತಯಾರಿಕೆ ನಿಲ್ಲಿಸಿದರು. ಬದಲಿಗೆ ಆಲ್ಕೋಹಾಲ್ ಮಿಶ್ರಿತ ಸ್ಯಾನಿಟೈಸರ್‌ ಉತ್ಪಾದಿಸಲು ಆರಂಭಿಸಿದರು.

ದೇಹತೂಕ ಮತ್ತು ಉದ್ದೀಪನ ಮದ್ದು

ಕ್ರಿಕೆಟ್ ಆಟಗಾರನಾಗಿದ್ದರೂ ಕಠಿಣ ಫಿಟ್‌ನೆಸ್‌ ಕ್ರಮಗಳನ್ನು ಅವರು ಪಾಲಿಸುತ್ತಿರಲಿಲ್ಲ. ಕಠಿಣ ವ್ಯಾಯಾಮಗಳು, ಐಸ್ ಬಾತ್ ಮತ್ತು ಕ್ರೀಡಾವಿಜ್ಞಾನದ ಬಗ್ಗೆ ಅವರಿಗೆ ರೇಜಿಗೆ ಇತ್ತು. ತಿಂಡಿಪೋತರಾಗಿದ್ದ ವಾರ್ನ್‌ಗೆ ಸಿಗರೇಟ್ ಮತ್ತು ಬಿಯರ್ ಎಂದರೆ ಅಚ್ಚುಮೆಚ್ಚು. ದಿನವೊಂದಿಗೆ 40 ಸಿಗರೇಟ್ ಸೇದುತ್ತಿದ್ದರಂತೆ. ಪಿಂಟ್‌ ಬಿಯರ್‌ ಕುಡಿಯುತ್ತಿದ್ದರು. ಇದರಿಂದಾಗಿ ಅವರ ದೇಹತೂಕ ಹೆಚ್ಚಿತ್ತು. ಅದನ್ನು ಇಳಿಸಲು ಉದ್ದೀಪನ ಮದ್ದುಗಳ ಮೊರೆ ಕೂಡ ಹೋಗಿದ್ದರು.

2003ರ ವಿಶ್ವಕಪ್ ಟೂರ್ನಿ ಸಂದರ್ಭದಲ್ಲಿ ಅವರು ಡುರೆಟಿಕ್ಸ್ ಮದ್ದು ಸೇವನೆ ಮಾಡಿ ಸಿಕ್ಕಿಬಿದ್ದಿದ್ದರು. ಇದರಿಂದಾಗಿ ವಿಶ್ವಕಪ್ ಆಡುವ ಅವಕಾಶ ಕಳೆದುಕೊಂಡಿದ್ದರು. ದೇಹ ತೂಕ ಇಳಿಸಲು ಇದನ್ನು ತೆಗೆದುಕೊಂಡಿದ್ದಾಗಿ ಒಪ್ಪಿಕೊಂಡಿದ್ದರು. ಕೆಲ ತಿಂಗಳುಗಳ ಹಿಂದೆ ಬೆರಾಟಿಕ್ಸ್ ಚಿಕಿತ್ಸೆ ಕೂಡ ಪಡೆದಿದ್ದರಂತೆ.

ಅವರು ನಿಧನರಾಗುವ ಮುನ್ನ 14 ದಿನಗಳ ಜಲಾಹಾರ ಚಿಕಿತ್ಸೆ ಪಡೆದಿದ್ದರು. ಆಹಾರ ಸೇವನೆ ಮಾಡದೇ ಬರಿ ದ್ರವಾಹಾರ ಸೇವಿಸುತ್ತಿದ್ದರು ಎಂದೂ ವರದಿಯಾಗಿತ್ತು. ಅವರ ನಿರ್ಗಮನದಿಂದ ಕ್ರೀಡೆಯ ವರ್ಣರಂಜಿತ ಅಧ್ಯಾಯವೊಂದಕ್ಕೆ ತೆರೆ ಬಿದ್ದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.