ಸಿಡ್ನಿ: ಟೀಂ ಇಂಡಿಯಾ ಆಟಗಾರರ ವಿರುದ್ಧ ನಡೆದ ಜನಾಂಗೀಯ ನಿಂದನೆ ಪ್ರಕರಣ ಸಂಬಂಧ ಕ್ರಿಕೆಟ್ ಆಸ್ಟ್ರೇಲಿಯಾ(ಸಿಎ) ಭಾರತ ತಂಡಕ್ಕೆ ಕ್ಷಮೆಯಾಚಿಸಿದೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (ಎಸ್‌ಸಿಜಿ) ಶನಿವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ವೇಳೆ ಟೀಮ್ ಇಂಡಿಯಾ ಆಟಗಾರರಾದ ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್ ಅವರಿಗೆ ಕುಡಿದ ಮತ್ತಿನಲ್ಲಿದ್ದ ಪ್ರೇಕ್ಷಕನೊಬ್ಬ ಜನಾಂಗೀಯ ನಿಂದನೆ ಮಾಡಿದ್ದನು.
ಪ್ರಕರಣ ಸಂಬಂಧ ಐಸಿಸಿ ಮ್ಯಾಚ್ ರೆಫರಿ ಡೇವಿಡ್ ಬೂನ್ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ದೂರು ನೀಡಿತ್ತು. ಇದೀಗ ಘಟನೆ ಸಂಬಂಧ ಕ್ರಿಕೆಟ್ ಆಸ್ಟ್ರೇಲಿಯಾ ಪ್ರತಿಕ್ರಿಯಿಸಿದೆ.
ಬಿಸಿಸಿಐ ಮೂಲಗಳ ಪ್ರಕಾರ, ಸಿಡ್ನಿ ಕ್ರೀಡಾಂಗಣದ ಗ್ಯಾಲರಿಯಲ್ಲಿ ಕುಳಿತಿದ್ದ ಪ್ರೇಕ್ಷಕನೊಬ್ಬ ಮೊಹಮ್ಮದ್ ಸಿರಾಜ್ ಅವರನ್ನು ‘ಕೋತಿ’ ಎಂದು ನಿಂದಿಸಿದ್ದ.
ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್ ಅವರಿಗೆ ಪ್ರೇಕ್ಷಕನಿಂದ ಜನಾಂಗೀಯ ನಿಂದನೆ ಘಟನೆ ಕುರಿತಂತೆ, ದಿನದ ಆಟದ ಕೊನೆಯಲ್ಲಿ ನಾಯಕ ಅಜಿಂಕ್ಯ ರಹಾನೆ ಸೇರಿದಂತೆ ತಂಡದ ಸದಸ್ಯರು ಅಂಪೈರ್‌ಗಳು ಮತ್ತು ಭದ್ರತಾ ಅಧಿಕಾರಿಗಳ ಜೊತೆ ಸುದೀರ್ಘ ಚರ್ಚೆ ನಡೆಸಿದ್ದರು.
ಭಾರತದ ಈ ಇಬ್ಬರು ಆಟಗಾರರು ಫೀಲ್ಡಿಂಗ್ ಮಾಡುತ್ತಿದ್ದ ಸಂದರ್ಭ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ವ್ಯಕ್ತಿ ನಿಂದನೆ ಮಾಡಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.