ಮೆಲ್ಬೋರ್ನ್:ಗಮನಾರ್ಹಬೆಳವಣಿಗೆಯೊಂದರಲ್ಲಿ 2018ರ ಚೆಂಡು ವಿರೂಪ ಪ್ರಕರಣದಲ್ಲಿ ಸಿಕ್ಕಿಬಿದ್ದು ನಿಷೇಧಕ್ಕೆ ಒಳಗಾಗಿರುವ ಆಸ್ಟ್ರೇಲಿಯಾದ ಕ್ರಿಕೆಟಿಗ ಕ್ಯಾಮರಾನ್ ಬ್ರಾಂಕ್ರಾಫ್ಟ್, ಸ್ಯಾಂಡ್ ಪೇಪರ್ ಹಗರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಬೆಚ್ಚಿ ಬೀಳಿಸುವ ಮಾಹಿತಿಯನ್ನು ಬಯಲಿಗೆಳೆದಿದ್ದಾರೆ.
ಈ ಹಿನ್ನೆಲೆಯಲ್ಲಿ ಹೆಚ್ಚಿನ ಮಾಹಿತಿ ಕಲೆ ಹಾಕುವ ನಿಟ್ಟಿನಲ್ಲಿ ಬ್ಯಾಂಕ್ರಾಫ್ಟ್ ಅವರನ್ನು ಕ್ರಿಕೆಟ್ ಆಸ್ಟ್ರೇಲಿಯಾದ (ಸಿಎ) ಇಂಟೆಗ್ರಿಟಿ ಘಟಕವು ಸಂಪರ್ಕಿಸಿದೆ.
ಚೆಂಡು ವಿರೂಪ ಪ್ರಕರಣದ ಬಗ್ಗೆ ಅಂದಿನ ನಾಯಕ ಸ್ಟೀವನ್ ಸ್ಮಿತ್, ಡೇವಿಡ್ ವಾರ್ನರ್ ಜೊತೆಗೆ ತಂಡದಲ್ಲಿದ್ದ ಬೌಲರ್‌ಗಳಿಗೂ ಅರಿವಿತ್ತು ಎಂದು ಸ್ವತಃ ನಿಷೇಧಕ್ಕೆ ಒಳಗಾಗಿರುವ ಬ್ಯಾಂಕ್ರಾಫ್ಟ್ ಮಾಹಿತಿ ಹೊರಗೆಡವಿದ್ದಾರೆ.
ದಕ್ಷಿಣ ಆಫ್ರಿಕಾ ಕೇಪ್ ಟೌನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಪ್ಯಾಂಟ್ ಜೇಬಲ್ಲಿ ಸ್ಯಾಂಡ್ ಪೇಪರ್ ಹೊಂದಿದ್ದ ಬ್ಯಾಂಕ್ರಾಫ್ಟ್ ಚೆಂಡನ್ನು ವಿರೂಪಗೊಳಿಸುವ ವೇಳೆ ಸಿಕ್ಕಿಬಿದಿದ್ದರು. ಸ್ಮಿತ್ ಹಾಗೂ ವಾರ್ನರ್ ಮೇಲೆ ಕ್ರಿಕೆಟ್ ಆಸ್ಟ್ರೇಲಿಯಾ ಒಂದು ವರ್ಷದ ನಿಷೇಧವನ್ನು ಹೇರಿದ್ದರೆ ಬ್ಯಾಂಕ್ರಾಫ್ಟ್ ಒಂಬತ್ತು ತಿಂಗಳ ಅಮಾನತಿಗೆ ಒಳಗಾಗಿದ್ದರು.
ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದಿನ ತಮ್ಮ ಹೇಳಿಕೆಗೆ ಹೆಚ್ಚಿನದ್ದನ್ನು ಸೇರಿಸಲು ಬಯಸುವೀರಾ ಎಂಬುದಕ್ಕೆ ಸಂಬಂಧಿಸಿದಂತೆ ರೆಬೆಕ್ಕಾ ಮುರ್ರೆ ನೇತೃತ್ವದ ಕ್ರಿಕೆಟ್ ಆಸ್ಟ್ರೇಲಿಯಾದ ಇಂಟೆಗ್ರಿಟಿ ಘಟಕವು ಕ್ಯಾಮರಾನ್ ಬ್ಯಾಂಕ್ರಾಫ್ಟ್ ಅವರನ್ನು ಸಂಪರ್ಕಿಸಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ನ್ಯಾಷನಲ್ ಟೀಮ್ ನಿರ್ದೇಶಕ ಬೆನ್ ಒಲಿವರ್ ಮಾಹಿತಿ ನೀಡಿದ್ದಾರೆ.
ಆ ಘಟನೆ ಬಗ್ಗೆ ಸಮಗ್ರ ತನಿಖೆ ನಡೆದಿದ್ದು, ಕ್ರಮ ಕೈಗೊಳ್ಳಲಾಗಿದೆ. ಹಾಗಿದ್ದರೂ ವಿವಾದಕ್ಕೆ ಸಂಬಂಧಿಸಿದಂತೆ ಯಾರಾದರೂ ಹೊಸ ಮಾಹಿತಿಯನ್ನು ಹೊಂದಿದ್ದರೆ ನಮ್ಮ ಇಂಟೆಗ್ರಿಟಿ ಘಟಕದ ಮುಂದೆ ಬಂದು ತಿಳಿಸಬಹುದಾಗಿದೆ ಎಂದು ಹೇಳಿದ್ದಾರೆ.
ಬ್ರಿಟನ್‌ನಲ್ಲಿ ಗಾರ್ಡಿಯನ್‌ಗೆ ನೀಡಿದ ಸಂದರ್ಶನದಲ್ಲಿ, ಚೆಂಡು ವಿರೂಪ ಪ್ರಕರಣವು ಕೆಲವು ಬೌಲರ್‌ಗಳಿಗೆ ತಿಳಿದಿತ್ತು ಎಂದು ಬ್ಯಾಂಕ್ರಾಫ್ಟ್ ಬಯಲು ಮಾಡಿದ್ದರು. ಹೌದು, ನಿಸ್ಸಂಶವಾಗಿಯೂ ಬೌಲರ್‌ಗಳಿಗೆ ನೆರವಾಗಲು ನಾನು ಹಾಗೆ ಮಾಡಿದ್ದೆ ಎಂದವರು ಹೇಳಿದ್ದರು.
ಅಂದಿನ ಆಸೀಸ್ ತಂಡದಲ್ಲಿ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ಜೋಶ್ ಹೇಜಲ್‌ವುಡ್, ಮಿಚೆಲ್ ಮಾರ್ಶ್ ಮತ್ತು ನಥನ್ ಲಯನ್ ಬೌಲರ್‌ಗಳಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.