ADVERTISEMENT

ನ್ಯೂಜಿಲೆಂಡ್ ತೊರೆದ ಬಾಂಗ್ಲಾ ಕ್ರಿಕೆಟ್‌ ತಂಡ

ರಾಯಿಟರ್ಸ್
Published 16 ಮಾರ್ಚ್ 2019, 20:10 IST
Last Updated 16 ಮಾರ್ಚ್ 2019, 20:10 IST
ಬಾಂಗ್ಲಾದೇಶ ಕ್ರಿಕೆಟ್ ತಂಡದ ಆಟಗಾರರು ನ್ಯೂಜಿಲೆಂಡ್ ವಿಮಾನ ನಿಲ್ದಾಣದ ಮೂಲಕ ಶನಿವಾರ ಮರಳಿದರು. –ಎಎಫ್‌ಪಿ ಚಿತ್ರ
ಬಾಂಗ್ಲಾದೇಶ ಕ್ರಿಕೆಟ್ ತಂಡದ ಆಟಗಾರರು ನ್ಯೂಜಿಲೆಂಡ್ ವಿಮಾನ ನಿಲ್ದಾಣದ ಮೂಲಕ ಶನಿವಾರ ಮರಳಿದರು. –ಎಎಫ್‌ಪಿ ಚಿತ್ರ   

ವೆಲಿಂಗ್ಟನ್‌: ಮಸೀದಿಯಲ್ಲಿ ಉಗ್ರರ ದಾಳಿ ನಡೆದು 24 ತಾಸುಗಳ ಒಳಗೆ ಬಾಂಗ್ಲಾದೇಶ ಕ್ರಿಕೆಟ್ ತಂಡ ನ್ಯೂಜಿಲೆಂಡ್‌ನಿಂದ ವಾಪಸಾಗಿದೆ.

ನ್ಯೂಜಿಲೆಂಡ್ ಎದುರಿನ ಮೂರನೇ ಟೆಸ್ಟ್‌ ಶನಿವಾರ ಆರಂಭವಾಗಬೇಕಿತ್ತು. ಪಂದ್ಯ ನಡೆಯಬೇಕಾಗಿದ್ದ ಅಲ್ ನೂರ್ ಮಸೀದಿಯ ಬಳಿ ಇರುವ ಹಗ್ಲಿ ಓವಲ್‌ನಲ್ಲಿ ಪಂದ್ಯ ನಿಗದಿಯಾಗಿತ್ತು. ಈ ಮಸೀದಿಯಲ್ಲಿ ನಡೆದ ದಾಳಿಗೆ 41 ಮಂದಿ ಬಲಿಯಾಗಿದ್ದಾರೆ. ದಾಳಿ ಸಂದರ್ಭದಲ್ಲಿ ಬಾಂಗ್ಲಾ ತಂಡ ಕ್ರೀಡಾಂಗಣದತ್ತ ಹೋಗುತ್ತಿತ್ತು. ಘಟನೆಯ ನಂತರ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಲಾಗಿತ್ತು.

‘ದಾಳಿಯ ನಂತರ ಆಟಗಾರರ ಸುರಕ್ಷತೆಯ ಬಗ್ಗೆ ಆತಂಕ ಮೂಡಿದೆ’ ಎಂದು ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳ ಆಡಳಿತ ಅಭಿಪ್ರಾಯಪಟ್ಟಿದೆ.

ADVERTISEMENT

‘ಮುಂದಿನ ದಿನಗಳಲ್ಲಿ ಯಾವುದೇ ದೇಶಕ್ಕೆ ಪ್ರವಾಸ ಕೈಗೊಂಡರೂ ಸೂಕ್ತ ಭದ್ರತೆಯನ್ನು ಕೋರಲಾಗುವುದು. ಅದನ್ನು ಮಾನ್ಯ ಮಾಡಿದರೆ ಮಾತ್ರ ಪ್ರವಾಸ ಕೈಗೊಳ್ಳಲಿದ್ದೇವೆ’ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ನಜ್ಮುಲ್‌ ಹಸನ್‌ ತಿಳಿಸಿದರು.

‘ನ್ಯೂಜಿಲೆಂಡ್‌ನಲ್ಲಿ ಪಂದ್ಯಗಳನ್ನು ಆಯೋಜಿಸುವಾಗ ಹೆಚ್ಚು ಎಚ್ಚರಿಕೆಯಿಂದ ಇರಬೇಕು’ ಎಂದು ಪಾಕಿಸ್ತಾನದ ಮಾನವ ಹಕ್ಕುಗಳ ರಕ್ಷಣಾ ಸಚಿವ ಶಿರೀನ್‌ ಮಜರಿ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯನ್ನು ಆಗ್ರಹಿಸಿದ್ದಾರೆ.

ಸೂಪರ್ ರಗ್ಬಿ ಪಂದ್ಯ ರದ್ದು
ಶನಿವಾರ ನಡೆಯಬೇಕಾಗಿದ್ದ ಒಟಾಗೊ ಹಿಗ್‌ಲ್ಯಾಂಡರ್ಸ್ ಮತ್ತು ಕ್ಯಾಂಟರ್‌ಬರಿ ಕ್ರೂಸೇಡರ್ಸ್ ನಡುವಿನ ರಗ್ಬಿ ಪಂದ್ಯವನ್ನು ದಾಳಿಯ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ.

ಕ್ರೈಸ್ಟ್ ಚರ್ಚ್‌ನಿಂದ 360 ಕಿಲೋಮೀಟರ್ಸ್ ದೂರ ಇರುವ ಡುಬ್ಲಿನ್‌ನಲ್ಲಿ ಪಂದ್ಯ ನಡೆಯಬೇಕಾಗಿತ್ತು. ಉಭಯ ತಂಡಗಳ ಆಡಳಿತ, ಸ್ಥಳೀಯ ಆಡಳಿತ ಮತ್ತು ಪೊಲೀಸರ ಜೊತೆ ಚರ್ಚಿಸಿ ಪಂದ್ಯ ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.