ಲಂಡನ್: ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿಯು (ಇಸಿಬಿ) ಇಂಗ್ಲೆಂಡ್‌ನಲ್ಲಿನ ಮಹಿಳಾ ಕ್ರಿಕೆಟ್‌ನ ಹಾಗೂ ಟಿ–20 ಮಾದರಿಯ ವುಮೆನ್ಸ್ ಹಂಡ್ರೆಡ್ ಮಾದರಿಯ ಪಂದ್ಯಗಳಿಗೆ ಲಿಂಗತ್ವ ಅಲ್ಪಸಂಖ್ಯಾತ ಆಟಗಾರರಿಗೆ ನಿಷೇಧ ಹೇರಿದೆ.
ಪ್ರೌಢಾವಸ್ಥೆಯ ಸಂದರ್ಭದಲ್ಲಿ ಪುರುಷರ ಗುಣಲಕ್ಷಣ ಹೊಂದುವ ಯಾವುದೇ ಪುರುಷ ಅಥವಾ ಮಹಿಳೆಯು ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳುವಂತಿಲ್ಲ ಎಂಬ ನಿಯಮವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕಳೆದ ವರ್ಷ ಜಾರಿಗೆ ತಂದಿತ್ತು.
ಇಸಿಬಿಯ ಈ ಹಿಂದಿನ ನೀತಿಯಂತೆ, ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರು ಕ್ರಿಕೆಟ್ ಮಂಡಳಿಯಿಂದ ಅನುಮತಿ ಪತ್ರ ತಂದಲ್ಲಿ ಅಂಥವರು ಪಾಲ್ಗೊಳ್ಳಬಹುದು ಎಂದು ಹೇಳಿತ್ತು. ಆದರೆ ಈಗ ಅದನ್ನು ಬದಲಿಸಿ, 2025ರಿಂದ ಐಸಿಸಿ ನಿಯಮವನ್ನೇ ಪಾಲಿಸುವುದಾಗಿ ಹೇಳಿದೆ. ಈ ವಿಷಯವನ್ನು ಪತ್ರಿಕಾ ಹೇಳಿಕೆ ಮೂಲಕ ಇಸಿಬಿ ತಿಳಿಸಿದೆ.
‘ಲಿಂಗತ್ವ ಅಲ್ಪಸಂಖ್ಯಾತರ ಪಾಲ್ಗೊಳ್ಳುವಿಕೆಯ ವಿಷಯವು ಅತ್ಯಂತ ಸಂಕೀರ್ಣವಾದದ್ದು. ಇವರ ಪಾಲ್ಗೊಳ್ಳುವಿಕೆಯಿಂದ ತಂಡದಲ್ಲಿ ಸಮತೋಲನ ಕಾಪಾಡುವುದು ಕಷ್ಟ. ಕೆಲವರು ಈ ವಾದವನ್ನು ಬಲವಾಗಿ ಒಪ್ಪುತ್ತಾರೆ’ ಎಂದು ಇಸಿಬಿ ಆಡಳಿತ ಮಂಡಳಿ ಹೇಳಿದೆ.
ಕ್ರಿಕೆಟ್ ಮಂಡಳಿಯ ಈ ನಿರ್ಧಾರವನ್ನು ಲಿಂಗತ್ವ ಅಲ್ಪಸಂಖ್ಯಾತರ ಪರ ಗುಂಪುಗಳು ತೀವ್ರವಾಗಿ ವಿರೋಧಿಸಿವೆ. ಜೈವಿಕ ಲಾಭ, ಸುರಕ್ಷತೆ ಹಾಗೂ ನ್ಯಾಯಸಮ್ಮತೆಯ ವಿಷಯವನ್ನು ಮುಂದಿಟ್ಟುಕೊಂಡು ಲಿಂಗತ್ವ ಅಲ್ಪಸಂಖ್ಯಾತ ಕ್ರೀಡಾಪಟುಗಳನ್ನು ಉದ್ದೇಶಪೂರ್ವಕವಾಗಿಯೇ ಕ್ರೀಡೆಗಳಿಂದ ಹೊರಗಿಡಲಾಗುತ್ತಿದೆ ಎಂದು ಹೋರಾಟಗಾರ್ತಿ ಸೀಮಾ ಪಟೇಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಿಂಗತ್ವ ಅಲ್ಪಸಂಖ್ಯಾತ ಆಟಗಾರರಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಈಗಲೂ ಅವಕಾಶ ನೀಡಿದೆ. 12 ತಿಂಗಳವರೆಗೂ ದೇಹದಲ್ಲಿ ಪ್ರತಿ ಡೆಸಿಲೀಟರ್‌ನಲ್ಲಿ 10 ನ್ಯಾನಾ ಗ್ರಾಮ್‌ನಷ್ಟು ಟೆಸ್ಟೊಸ್ಟೆರಾನ್ ಮಟ್ಟವನ್ನು ಕಾಯ್ದುಕೊಂಡಲ್ಲಿ ಅಂಥವರಿಗೆ ಅವಕಾಶ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.