ಬೆಂಗಳೂರು: ಪ್ರಸಕ್ತ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆರಂಭದಿಂದಲೂ ಉತ್ತಮ ಲಯದೊಂದಿಗೆ ಎದುರಾಳಿಗಳನ್ನು ಮಣಿಸುತ್ತಿರುವ ಟೀಂ ಇಂಡಿಯಾ, ಭಾನುವಾರ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಕಾಂಗರೂ ಪಡೆಯನ್ನು ಮಣಿಸಿ ವಿಶ್ವವಿಜೇತವಾಗಲಿ ಎಂದು ಕ್ರೀಡಾಭಿಮಾನಿಗಳು, ಗಣ್ಯರು ಶುಭ ಹಾರೈಸಿದ್ದಾರೆ.
ಮೈಕ್ರೊ ಬ್ಲಾಗಿಂಗ್ ವೇದಿಕೆ ಎಕ್ಸ್‌ನಲ್ಲಿ ಭಾರತ ತಂಡಕ್ಕೆ ಶುಭ ಹಾರೈಕೆಗಳ ಮಹಾಪೂರವೇ ಹರಿದುಬರುತ್ತಿವೆ. ಅಂತಿಮ ಪಂದ್ಯ ನಡೆಯಲಿರುವ ಅಹಮದಾಬಾದ್‌ನಲ್ಲಿ ಜನರು ತ್ರಿವರ್ಣ ಧ್ವಜ ಎಲ್ಲೆಡೆ ಹಾರಾಡುತ್ತಿದೆ. ತೆರೆದ ವಾಹನಗಳಲ್ಲಿ ತ್ರಿವರ್ಣ ಧ್ವಜ ಬೀಸುತ್ತಾ ಜನರು ಭಾರತದ ಜಯಕ್ಕಾಗಿ ಹಾರೈಸುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ರಿಕೆಟ್ ಅಭಿಮಾನಿ. ಬೆಂಗಳೂರಿನಲ್ಲಿ ನಡೆಯುವ ಪಂದ್ಯಗಳನ್ನು ಕ್ರೀಡಾಂಗಣಕ್ಕೆ ಹೋಗಿ ನೋಡುವ ಅವರು ಭಾರತ ತಂಡದ ಅಪ್ಪಟ ಅಭಿಮಾನಿ. ಟೀಂ ಇಂಡಿಯಾ ಗೆಲುವಿಗಾಗಿ ಅವರು ಶುಭ ಕೋರಿದ್ದಾರೆ.
‘ನಾಳಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾಕೂಟದ ಫೈನಲ್ ಪಂದ್ಯದಲ್ಲಿ ಭಾರತೀಯರ ಗೆಲುವನ್ನು ಸಂಭ್ರಮಿಸಲು ನಾನು ಎಲ್ಲರಂತೆ ಕಾತುರನಾಗಿದ್ದೇನೆ. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಎಲ್ಲಾ ವಿಭಾಗಗಳಲ್ಲೂ ನಮ್ಮದು ಒಂದು ಪರಿಪೂರ್ಣ ತಂಡವಾಗಿರುವುದರಿಂದ ಈ ಬಾರಿಯ ವಿಶ್ವಕಪ್ ಭಾರತದ ಮಡಿಲು ಸೇರುವುದು ನಿಶ್ಚಿತ’ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಾಕ್ಸರ್ ಫ್ಲಾಯ್ಡ್ ಮೇವೆದರ್ ಜೂನಿಯರ್ ಅವರೂ ಭಾರತ ತಂಡದ ಜಯಕ್ಕಾಗಿ ಶುಭ ಹಾರೈಸಿದ್ದಾರೆ. ತಂಡಕ್ಕೆ ಅಭಿನಂದನೆ ಸಲ್ಲಿಸಿರುವ ಅವರು ವಿಶ್ವಕಪ್ ಅಂತಿಮ ಹಣಾಹಣಿಯಲ್ಲಿ ಖಂಡಿತವಾಗಿಯೂ ಉತ್ತಮ ಪ್ರದರ್ಶನ ನೀಡುತ್ತೀರಿ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಂತೂ ರೋಹಿತ್ ಬಳಗಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ನೆಚ್ಚಿನ ತಂಡ ಈ ಬಾರಿ ಕಪ್ ಗೆಲ್ಲಲಿದೆ ಎಂದು ಅಭಿನಂದನೆ ಸಲ್ಲಿಸುತ್ತಿದ್ದಾರೆ.
ದೇಶವ್ಯಾಪಿ ಭಾರತ ತಂಡದ ಗೆಲುವಿಗಾಗಿ ವಿಶೇಷ ಪ್ರಾರ್ಥನೆ, ಹೋಮ, ಹವನ, ಕಲೆಯಲ್ಲಿ ವಿಶ್ವಕಪ್ ರಚಿಸಿ ಭಾರತ ತಂಡಕ್ಕೆ ಶುಭ ಕೋರಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.