ಇವತ್ತು ಕ್ರಿಕೆಟ್ ಎಂದರೆ ಹಣ, ಹಣವೆಂದರೆ ಕ್ರಿಕೆಟ್ ಎಂಬಂತಹ ಪರಿಸ್ಥಿತಿ ನಮ್ಮ ದೇಶದಲ್ಲಿದೆ. ಅದರಲ್ಲೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಶುರುವಾದ ಮೇಲಂತೂ ಕ್ರಿಕೆಟ್‌ನಲ್ಲಿ ದುಡ್ಡೇ ದೊಡ್ಡಪ್ಪ. ತನಗಿಂತಲೂ ಹೆಚ್ಚು ಹಣ ಗಳಿಸುತ್ತಿರುವವರನ್ನು ಹಿಂದಿಕ್ಕುವ ಭರದಲ್ಲಿ ವಾಮಮಾರ್ಗ ಹಿಡಿಯುತ್ತಿರುವ ಆಟಗಾರರ ಸಂಖ್ಯೆಯೂ ಕಮ್ಮಿಯೇನಿಲ್ಲ.ಇವತ್ತು ದೊಡ್ಡ ಸುದ್ದಿ ಮಾಡುತ್ತಿರುವ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯ ಮ್ಯಾಚ್ ಫಿಕ್ಸಿಂಗ್ ಹಗರಣದ ಹಿಂದೆಯೂ ಇಂತಹದೊಂದು ಕರಾಳ ಸತ್ಯವಿದೆ.
ಆತ ದೇಶಿ ಕ್ರಿಕೆಟ್‌ನಲ್ಲಿ ತನ್ನದೇ ಛಾಪು ಮೂಡಿಸಿದ್ದ. ಹತ್ತು ವರ್ಷಗಳಿಗೂ ಹೆಚ್ಚು ಕಾಲ ರಣಜಿ ಟ್ರೋಫಿ ಸೇರಿದಂತೆ ಪ್ರತಿಷ್ಠಿತ ಟೂರ್ನಿಗಳಲ್ಲಿ ಆಡಿದ್ದ. ಬ್ಯಾಂಕ್ ನೌಕರಿಯೂ ಸಿಕ್ಕಿತ್ತು. ಹಣ, ಹೆಸರು ಕೂಡ ಇತ್ತು. ಯಾವುದೇ ಕೊರತೆ ಇರಲಿಲ್ಲ. ಬೆಲೆಬಾಳುವ ಮನೆ, ಕಾರು, ಬ್ಯಾಂಕ್ ಬ್ಯಾಲೆನ್ಸ್ ಎಲ್ಲವೂ ಆತನಿಗೆ ಒಲಿದಿತ್ತು. ಆದರೂ 15–20 ಲಕ್ಷ ರೂಪಾಯಿಗೆ ಕೈಯೊಡ್ಡಿ ಕಳಂಕ ಮೆತ್ತಿಕೊಂಡ. ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯಲ್ಲಿ ನಡೆದಿದೆ ಎನ್ನಲಾದ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿ ಕೊಂಡಿರುವ ಬಹುತೇಕ ಆಟಗಾರರ ಕಥೆಯೂ ಇದೆ. ತಮಗೆಲ್ಲವನ್ನೂ ನೀಡಿದ ಕ್ರಿಕೆಟ್‌ಗೇ ಕಳಂಕ ಮೆತ್ತಿ, ತಮಗೂ ಕಂಟಕ ತಂದು ಕೊಂಡಿದ್ದರ ಹಿಂದಿನ ಮರ್ಮ ಏನು ಎಂಬುದೇ ಪ್ರಶ್ನೆ. ಇವರೆಲ್ಲ ಯಾರೋ ಬೀಸಿದ ಬಲೆಗೆ ಬಿದ್ದ ಮುಗ್ಧರು ಎಂದು ಹೇಳಲು ಸಾಧ್ಯವಿಲ್ಲ ಏಕೆಂದರೆ, ಇವತ್ತಿನ ಪೀಳಿಗೆಯ ಕ್ರಿಕೆಟಿಗರು ಬೆಳೆಯುತ್ತಿರುವುದು ಆಧುನಿಕ ತಂತ್ರಜ್ಞಾನಗಳ ನಡುವೆ, ಇಂಟರ್‌ನೆಟ್ ಯುಗದಲ್ಲಿ ಎಲ್ಲ ಮಾಹಿತಿ, ವಿಷಯಗಳೂ ಅವರಿಗೆ ತಿಳಿದಿರಲು ಸಾಧ್ಯವಿದೆ. ಕನಿಷ್ಠ ಅವರು ಪ್ರತಿನಿಧಿಸುವ ಕ್ರಿಕೆಟ್ ಸಂಸ್ಥೆಯ ನಿಯಮಾವಳಿಯನ್ನಂತೂ ಅವರು ಬಲ್ಲರು. ಆದರೂ ಇಂತಹ ಆಮಿಷಗಳಿಗೆ ಬಲಿಯಾಗಲು ಏನು ಕಾರಣವಿರಬಹುದು? ಹಣ ಗಳಿಕೆಯ ಮನಸ್ಥಿತಿಯೇ ದೌರ್ಬಲ್ಯವಾಯಿತೇ? ಅದರ ಮೂಲಕ ಅವರನ್ನು ಫಿಕ್ಸಿಂಗ್ ಮಾಫಿಯಾ ಸೆಳೆಯಿತೇ?
1999ರಿಂದ ಈಚೆಗೆ ಕ್ರಿಕೆಟ್ ರಂಗದಲ್ಲಿ ಆಗಿರುವ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣಗಳಿಂದ ದೊಡ್ಡ ದೊಡ್ಡ ಕ್ರಿಕೆಟಿಗರು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿರುವ ಉದಾಹರಣೆಗಳು ಇವೆ. ಅವುಗಳಿಂದ ಜೂನಿಯರ್ ಆಟಗಾರರು ಏಕೆ ಪಾಠ ಕಲಿತಿಲ್ಲ ಎಂಬ ಪ್ರಶ್ನೆ ಕಾಡುತ್ತದೆ.
ಇಂತಹ ನಡವಳಿಕೆಗೆ ಅವರ ಮನಸ್ಥಿತಿ ಮತ್ತು ಬೆಳೆದು ಬಂದ ರೀತಿಯೇ ಕಾರಣ ಎಂದು ಮನಶಾಸ್ತ್ರಜ್ಞರು ವಿಶ್ಲೇಷಿಸುತ್ತಾರೆ. ಆಟದ ಪ್ರೀತಿಗಿಂತ ಹಣಗಳಿಕೆಗೆ ಪ್ರಾಶಸ್ತ್ಯ ನೀಡುತ್ತಿರುವುದು ಒಂದು ಪ್ರಮುಖ ಕಾರಣ ಎನ್ನುತ್ತಾರೆ. ಆಧುನಿಕ ಕ್ರಿಕೆಟ್ ಎಂದರೆ ಹಣ ಗಳಿಕೆಯ ಮತ್ತೊಂದು ಮಾರ್ಗ ಎಂಬಂತಾಗಿದೆ. ಅದರಲ್ಲಿರುವ ವಿಪುಲ ಅವಕಾಶ ಮತ್ತು ಹಣ ಎಲ್ಲರನ್ನೂ ಆಕರ್ಷಿಸುತ್ತಿದೆ. ತಮ್ಮ ಮಗ ಹೇಗಾದರೂ ಮಾಡಿ ಕ್ರಿಕೆಟಿಗನಾಗಬೇಕು ಎಂಬ ಬಯಕೆ ಬಹುತೇಕ ತಂದೆ ತಾಯಂದಿರದ್ದು.
ಯಾವುದೇ ನಗರದ ಕ್ರಿಕೆಟ್ ತರಬೇತಿ ಕೇಂದ್ರಗಳ ಸುತ್ತಮುತ್ತ ಕಾಣಸಿಗುವ ಮಕ್ಕಳ ಪಾಲಕರನ್ನು ಮಾತನಾಡಿಸಿ ನೋಡಿ. ಅವರಲ್ಲಿ ಬಹುತೇಕರು, ‘ನಮ್ಮ ಮಗ ಕ್ರಿಕೆಟ್ ಆಡಬೇಕು. ಒಂದು ಐಪಿಎಲ್ ಆಡಿದರೆ ಸಾಕು ಸಾಕಷ್ಟು ದುಡ್ಡು ಬರುತ್ತದೆ. ಆಮೇಲೆ ಒಂದಿಷ್ಟು ಡೊಮೆಸ್ಟಿಕ್ ಆಡಿದ್ರೂ ಸಾಕು. ನೌಕರಿನೂ ಸಿಗಬಹುದು. ಅದೃಷ್ಟ ಖುಲಾಯಿಸಿದರೆ ಭಾರತ ತಂಡಕ್ಕೂ ಆಡಬಹುದು. ಒಟ್ಟಿನಲ್ಲಿ ದುಡ್ಡಿಗೆ ಮೋಸ ಇಲ್ಲ ಅಲ್ವಾ?’ ಎಂದು ಹೇಳುತ್ತಾರೆ.
ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಎಲ್ಲ ಪಾಲಕರೂ ಒಳ್ಳೆಯದನ್ನೇ ಬಯಸುತ್ತಾರೆ. ಅದರಲ್ಲಿ ತಪ್ಪೇನಿಲ್ಲ. ಆದರೆ, ಚಿಗುರುಮೀಸೆ ಮಾಗುವ ಮುನ್ನವೇ ಕೈಸೇರುವ ಕೋಟಿ ಕೋಟಿ ಹಣ ಮತ್ತು ಕೀರ್ತಿಯನ್ನು ನಿಭಾಯಿಸುವ ಮನಸ್ಥಿತಿ ಅವರದ್ದಾಗಿರುತ್ತದೆಯೇ? ಅದು ಜೀವನದ ಅನುಭವದಿಂದ ಬರುವಂತಹದ್ದಲ್ಲವೇ?
‘ನಾನು ಕ್ರಿಕೆಟ್ ಶಿಬಿರವೊಂದರಲ್ಲಿ ಮೈಂಡ್ ಟ್ರೇನರ್ ಆಗಿದ್ದೆ. ಆಗ ನೋಡಿದ್ದೆ. ಬಹಳಷ್ಟು ಪಾಲಕರು ತಮ್ಮ ಮಕ್ಕಳಿಗೆ ಕ್ರಿಕೆಟ್ ಇಷ್ಟವಿಲ್ಲದಿದ್ದರೂ ಶಿಬಿರಕ್ಕೆ ತಂದು ಸೇರಿಸುತ್ತಿದ್ದರು. ಹೇಗಾದರೂ ಮಾಡಿ ಕ್ರಿಕೆಟಿಗರನ್ನಾಗಿ ಬೆಳೆಸುವುದು ಅವರ ಉದ್ದೇಶ. ಅದಕ್ಕಾಗಿ ಖರ್ಚು ಮಾಡಲು ಸಿದ್ಧರಿದ್ದರು. ಏಕೆಂದರೆ ಮುಂದೊಂದು ದಿನ ಆತ ಗಳಿಸುತ್ತಾನೆ ಎಂಬ ವಿಶ್ವಾಸ. ಆ ಪುಟ್ಟ ಮಕ್ಕಳಿಗೂ ಅವರು ಮುಂದೆ ಜಾಸ್ತಿ ಹಣ, ಹೆಸರು ಗಳಿಸಲು ಕ್ರಿಕೆಟ್ ಒಂದೇ ಮಾರ್ಗ ಎಂದು ಪ್ರತಿಕ್ಷಣವೂ ತಲೆಯಲ್ಲಿ ತುಂಬುತ್ತಿದ್ದರು. ಈ ರೀತಿ ಬೆಳೆದ ಹುಡುಗರಿಗೆ ಕ್ರಿಕೆಟ್‌ನ ಬಗ್ಗೆ ನೈಜ ಪ್ರೀತಿ ಬರಲು ಹೇಗೆ ಸಾಧ್ಯ ಹೇಗಾದರೂ ಸರಿ ಹಣ ಬರಲಿ ಎಂಬ ಭಾವನೆ ಬೆಳೆಯುವುದು ಸಹಜ’ ಎಂದು ಕ್ರೀಡಾ ಮನಃಶಾಸ್ತ್ರಜ್ಞೆ ದೇಚಮ್ಮ ಹೇಳುತ್ತಾರೆ.
ಅವರ ಮಾತನ್ನು ತಳ್ಳಿ ಹಾಕುವಂತಿಲ್ಲ. 12 ವರ್ಷಗಳ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭವಾದಾಗ ಬಹಳಷ್ಟು ಹಿರಿಯರು ಸಿಡಿಮಿಡಿಗೊಂಡಿದ್ದರು. ಹರಾಜು ಪ್ರಕ್ರಿಯೆಯಲ್ಲಿ ಆಟಗಾರರನ್ನು ಮಾರಾಟ ಮಾಡುವುದು, ಕೋಟಿಗಟ್ಟಲೇ ಹಣ ನೀಡುವ ಫ್ರ್ಯಾಂಚೈಸ್‌ಗಳಿಗೆ ಅವರು ಆಡುವುದನ್ನು ಬಹಳಷ್ಟು ಜನ ಟೀಕಿಸಿದ್ದರು. ಆದರೆ ಕ್ರಮೇಣ ಐಪಿಎಲ್ ಇಡೀ ಕ್ರಿಕೆಟ್ ಜಗತ್ತನೇ ಆವರಿಸಿಕೊಂಡಿದೆ. ಇವತ್ತು ಒಬ್ಬ ಕ್ರಿಕೆಟಿಗನನ್ನು ಕೇವಲ ಆತನ ರನ್, ವಿಕೆಟ್ ಗಳಿಕೆ ಮತ್ತು ಫೀಲ್ಡಿಂಗ್ ಕ್ಷಮತೆಯ ಆಧಾರದಲ್ಲಿ ಅಳೆಯಲಾಗುತ್ತಿಲ್ಲ. ಆತನ ಬ್ರ್ಯಾಂಡ್ ಮೌಲ್ಯವೂ ಜೊತೆಗೂಡಿದೆ. ವಿರಾಟ್ ಕೊಹ್ಲಿ, ಮಹೇಂದ್ರಸಿಂಗ್ ಧೋನಿ ಅವರ ಬಳಿ ಎಂತಹ ಕಾರುಗಳು ಇವೆ. ಎಷ್ಟು ಆದಾಯ ಬರುತ್ತದೆ, ಎಷ್ಟು ಜಾಹೀರಾತುಗಳಲ್ಲಿ ಅವರು ಇದ್ದಾರೆ ಎಂಬುದೆಲ್ಲ ಆಕರ್ಷಣೆಯ ವಿಷಯಗಳಾಗಿವೆ. ಅದಕ್ಕೆ ಇವತ್ತು ಕ್ರಿಕೆಟಿಗರು ಕೇವಲ ಜಿಮ್ ಮತ್ತು ನೆಟ್ಸ್‌ನಲ್ಲಿ ಅಷ್ಟೇ ಅಲ್ಲ. ನಟನೆ, ನೃತ್ಯ ಕಲಿಕೆ ಶಾಲೆಗಳು ಮತ್ತು ಬ್ಯೂಟಿ ಪಾರ್ಲರ್‌ಗಳಿಗೂ ಆಗಾಗ ಭೇಟಿ ನೀಡುವ ಪರಿಪಾಠ ಆರಂಭವಾಗಿದೆ.
ಫ್ರ್ಯಾಂಚೈಸ್ ಲೀಗ್‌ಗಳು ಈಗ ನಗರ ಮಟ್ಟದಲ್ಲಿಯೂ ತಲೆ ಎತ್ತಿವೆ. ಆದರೆ, ಅಲ್ಲಿ ಎಲ್ಲ ಆಟಗಾರರಿಗೂ ಒಂದೇ ರೀತಿಯ ಸಂಭಾವನೆ ಸಿಗುತ್ತಿಲ್ಲ. ಬಿಡ್‌ನಲ್ಲಿ ಪ್ರತಿಯೊಬ್ಬರಿಗೂ ವ್ಯತ್ಯಾಸವಿರುತ್ತದೆ. ಈ ತಾರತಮ್ಯವೂ ಆಟಗಾರರಲ್ಲಿ ಅನಗತ್ಯ ಪೈಪೋಟಿ ಹುಟ್ಟುಹಾಕುವುದರಲ್ಲಿ ಸಂಶಯವಿಲ್ಲ.
2012ರಲ್ಲಿ ಕೆಎಸ್‌ಸಿಎ ಕಾರ್ಯದರ್ಶಿಯಾಗಿದ್ದ ಹಿರಿಯ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರು ಇಂತಹ ಒಂದು ಸಾಧ್ಯತೆಯನ್ನು ಆಗಲೇ ಗುರುತಿಸಿದ್ದರು. ಪತ್ರಿಕೆಗೆ ಅವರು ನೀಡಿದ್ದ ಸಂದರ್ಶನದಲ್ಲಿಯೂ ಈ ಮಾತು ಹೇಳಿದ್ದರು.
‘ಮಕ್ಕಳ ಮನದಲ್ಲಿ ಹಣ ಗಳಿಕೆಯ ತಾರತಮ್ಯ ಮೂಡಿಸುವುದು ಸರಿಯಲ್ಲ. ಕ್ರಿಕೆಟ್ ಕಲಿತು, ಅರಿತು, ಪ್ರೀತಿಸಲು ಆರಂಭಿಸುವ ವಯಸ್ಸಿನಲ್ಲಿಯೇ ಫ್ರ್ಯಾಂಚೈಸ್ ಲೀಗ್ ಗಳಲ್ಲಿ ಆಡಲು ಆರಂಭಿಸಿದರೆ ಮನಸ್ಥಿತಿ ಬದಲಾಗುತ್ತದೆ. ದೀರ್ಘ ಮಾದರಿಯ ಪಂದ್ಯಗಳಿಂದ ವಿಮುಖರಾಗುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದ್ದರು.
ಆ ಸಂದರ್ಭದಲ್ಲಿ ಕೆಲವು ವರ್ಷ ಕೆಪಿಎಲ್ ಅನ್ನು ಸ್ಥಗಿತ ಮಾಡಲಾಗಿತ್ತು. ಗ್ರಾಮೀಣ ಪ್ರದೇಶಗಳ ಆಟಗಾರರಿಗೆ ಅವಕಾಶ ಕೊಡಬೇಕು ಎನ್ನುವ ಉದ್ದೇಶದೊಂದಿಗೆ 2014–15ರಲ್ಲಿ ಮತ್ತೆ ಕೆಪಿಎಲ್ ಆರಂಭವಾಯಿತು. ಅದಕ್ಕಾಗಿ ಮೈಸೂರು, ಹುಬ್ಬಳ್ಳಿ ನಗರಗಳಲ್ಲಿಯೂ ಕ್ರೀಡಾಂಗಣಗಳಲ್ಲಿ ಹೊನಲು ಬೆಳಕಿನ ವ್ಯವಸ್ಥೆ ಮಾಡಲಾಯಿತು. ಜನಜಾತ್ರೆಯಂತೆ ಸೇರಿ ಹುರಿದುಂಬಿಸಿದರು. ಆದರೆ ಈಗ ಬಹಿರಂಗವಾಗಿರುವ ಫಿಕ್ಡಿಂಗ್ ಹಗರಣ ಅವರೆಲ್ಲರನ್ನೂ ತಲ್ಲಣಗೊಳಿಸಿದ್ದರಲ್ಲಿ ಅನುಮಾನವೇ ಇಲ್ಲ.
‘ಹಣದಿಂದ ಎಲ್ಲವನ್ನೂ ಪಡೆಯಲು ಸಾಧ್ಯವಿಲ್ಲ. ಆಟದಿಂದ ಮತ್ತು ಪ್ರಾಮಾಣಿಕ ನಡವಳಿಕೆಯಿಂದ ಗಳಿಸಿದ ಗೌರವ, ಘನತೆ ಮತ್ತು ಜನರ ವಿಶ್ವಾಸವನ್ನು ವಾಮಮಾರ್ಗದಿಂದ ಗಳಿಸಿದ ಹಣವು ಮಣ್ಣುಪಾಲು ಮಾಡುತ್ತದೆ. ಶ್ರೀಮಂತ ಪರಂಪರೆಗೆ ಕಳಂಕದ ಮಸಿ ಬಳಿಯುತ್ತದೆ’ ಎಂದು ಹಲವು ಹಿರಿಯ ಕ್ರಿಕೆಟಿಗರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಕ್ರಿಕೆಟ್ ಆಡಲು ಬರುವ ಮಕ್ಕಳಿಗೆ ಮತ್ತು ಪಾಲಕರಿಗೆ ಸೂಕ್ತ ಮಾರ್ಗದರ್ಶನ ನೀಡುವ ಕೆಲಸವನ್ನು ಕ್ರಿಕೆಟ್ ಅಕಾಡೆಮಿಗಳು ಮತ್ತು ಸಂಸ್ಥೆಗಳು ಮಾಡುವ ತುರ್ತು ಈಗ ಇದೆ. ಏಕೆಂದರೆ ಕ್ರಿಕೆಟ್ ಎಂದರೆ ಬರೀ ದೈಹಿಕ ಚಟುವಟಿಕೆ ಮಾತ್ರವಲ್ಲ. ಅದೊಂದು ಮೈಂಡ್‌ಗೇಮ್. ದೇಹವನ್ನು ಹುರಿಗೊಳಿಸುವುದರ ಜೊತೆಗೆ ಮನಸ್ಸನ್ನೂ ಸದೃಢಗೊಳಿಸಬೇಕು.
ಪ್ರತಿಭೆ,ಉತ್ಸಾಹ ವಿಭಿನ್ನ
ಪ್ರತಿಭೆ ಮತ್ತು ಉತ್ಸಾಹ ಎರಡು ಪದಗಳಿಗೂ ವ್ಯತ್ಯಾಸವಿದೆ. ಉತ್ಸಾಹದಿಂದ ಆಡಲು ಬರುವ ಎಲ್ಲರಿಗೂ ಪ್ರತಿಭೆ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೇವಲ ಮಕ್ಕಳ ಅಥವಾ ಅವರ ಪಾಲಕರ ಉತ್ಸಾಹದಿಂದಲೇ ಕ್ರಿಕೆಟ್‌ಗೆ ಬರುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಪ್ರತಿಭೆ ಕೆಲವರಲ್ಲಿ ಮಾತ್ರ ಇರುತ್ತದೆ. ಅವರಿಗೆ ಆಟವು ಬೇಗನೆ ಒಲಿಯುತ್ತದೆ. ಅದನ್ನು ಅಪ್ಪ–ಅಮ್ಮ ಮತ್ತು ಕೋಚ್‌ಗಳು ಸರಿಯಾಗಿ ಗುರುತಿಸಬೇಕು. ಪ್ರತಿಭೆಗೆ ತಕ್ಕನಾಗಿ ಅವರಿಗೆ ಮಾರ್ಗದರ್ಶನ ನೀಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸೋಲು ಮತ್ತು ಗೆಲುವು ಎರಡನ್ನೂ ಸಮಚಿತ್ತದಿಂದ ಸ್ವೀಕರಿಸುವುದನ್ನು ಕಲಿಸಬೇಕು. ಚಿಕ್ಕ ವಯಸ್ಸಿನಲ್ಲಿಯೇ ಅಪಾರ ಹಣ ಮತ್ತು ಕೀರ್ತಿ ನಿಭಾಯಿಸುವುದನ್ನು ಕಲಿಸಬೇಕು. ಇಲ್ಲದಿದ್ದರೆ ಜೀವನದಲ್ಲಿ ಎದುರಾಗುವ ಒಂದೇ ಒಂದು ಸೋಲು ಅವರ ಹಾದಿ ತಪ್ಪಿಸಬಹುದು. ಇವತ್ತು ಜೀವನಶೈಲಿಯಲ್ಲಿ ರಾಜಿ ಮಾಡಿಕೊಳ್ಳಲು ಯಾರೂ ಸಿದ್ಧರಿಲ್ಲ. ಎಲ್ಲರಿಗೂ ಐಷಾರಾಮಿ ಜೀವನವೇ ಬೇಕು. ಅದಕ್ಕಾಗಿ ಹೇಗಾದರೂ, ಎಲ್ಲಿಂದಾದರೂ ಹಣ ಬರಲಿ. ಒಟ್ಟಿನಲ್ಲಿ ದುಡ್ಡು ಸಿಗಲಿ ಎಂಬ ಮನೋಭಾವ. ಆದರೆ ಹಣ ಬಂದಾಗ ಅದನ್ನು ನಿರ್ವಹಿಸುವ ಸಾಮರ್ಥ್ಯವೂ ಇರಬೇಕಲ್ಲ. ಅದನ್ನು ಹೇಳಿಕೊಡುವ ಮಾರ್ಗದರ್ಶನ ನೀಡುವ ಕೆಲಸವು ಮನೆಯಿಂದಲೇ ಆರಂಭವಾಗಬೇಕು ಎಂದು ಕ್ರೀಡಾ ಮನಶಾಸ್ತ್ರಜ್ಞೆ ದೇಚಮ್ಮ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.