‘ಭಾರತ್ ವಿಶ್ವವಿಜೇತಾ ಅಪ್ನಾ.. ಭಾರತ್ ವಿಶ್ವವಿಜೇತಾ.. ಅಪ್ನಾ ಸಂಗ್ ಹೈ ವಿಶ್ವ ವಿಜೇತಾ.. ಹರ್ ಏಕ್ ದಿಶಾ ಮೇ ವಿಜಯ್ ಮಿಲೆ.. ಏಕ್ ತರಫ್ ತಾ ಭಾರತ್ ಕೀ ಕಿಲಾಡಿ.. ಏಕ್ ತರಫ್ ತಾ ಸರಾ ಜಹಾಂ..ಜಹಾ ಏಕತಾ ವಹಾ ವಿಜಯ್..’
ಗಾನ ಸರಸ್ವತಿ ಲತಾ ಮಂಗೇಶ್ವರ್ ಅವರ ಸುಮಧುರ ದನಿಯಲ್ಲಿ ಹೊರಹೊಮ್ಮಿದ ಈ ಹಾಡು ಅಂದು ಕೇಳುಗರ ಮನದಲ್ಲಿ ಅಚ್ಚಳಿಯದೇ ಉಳಿಯಿತು. 1983ರಲ್ಲಿ ಕಪಿಲ್ ದೇವ್ ಬಳಗವು ವಿಶ್ವಕಪ್ ಜಯಿಸಿದಾಗ ತಂಡಕ್ಕೆ ದೊಡ್ಡ ಬಹುಮಾನ ನೀಡುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯೋಜನೆಗೆ ಬಲ ತುಂಬಿದ್ದು ಲತಾ ದೀದಿ. ಸಾರ್ವಜನಿಕ ಕಾರ್ಯಕ್ರಮವೊಂದನ್ನು ಆಯೋಜಿಸಿ ದೇಣಿಗೆ ಸಂಗ್ರಹಿಸುವ ಅವರ ಯೋಚನೆಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿತು. ಅವರ ಗಾನಸುಧೆಗೆ ಮನಸೋತ ಅಭಿಮಾನಿಗಳು ಉದಾರಹೃದಯಿಗಳಾದರು. ಸುಮಾರು ₹ 20 ಲಕ್ಷ ಸಂಗ್ರಹಿಸಲಾಯಿತು.
ಆ ಕಾರ್ಯಕ್ರಮವನ್ನು ಕೆಲವು ವರ್ಷಗಳ ಹಿಂದೆ ಮಾಸ್ಟರ್ ದೀನಾನಾಥ್ ಮಂಗೇಶ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ವತಃ ಕಪಿಲ್ ದೇವ್ ನೆನಪಿಸಿಕೊಂಡು ಭಾವುಕರಾಗಿದ್ದರು.
‘ನಾವು ಅದೇ ಮೊದಲ ಸಲ ಒಂದು ಲಕ್ಷ ರೂಪಾಯಿ ಮೌಲ್ಯದ ಚೆಕ್ ನೋಡಿದ್ದು. ಅದಕ್ಕೆ ಕಾರಣರಾಗಿದ್ದು ಲತಾಜೀ. ನಾವು 1983ರ ವಿಶ್ವಕಪ್ ಜಯಿಸಿದಾಗ ಅವರೊಂದು ಕಾರ್ಯಕ್ರಮ ಮಾಡಿ ಹಣ ಸಂಗ್ರಹಿಸಿದರು. ತಂಡದ ಪ್ರತಿಯೊಬ್ಬರಿಗೂ ತಲಾ ಒಂದು ಲಕ್ಷ ರೂಪಾಯಿ ಚೆಕ್ ನೀಡಿದರು. ಅದೊಂದು ಅವಿಸ್ಮರಣೀಯ ಕ್ಷಣ. ಆಗೆಲ್ಲ ನಮಗೆ ಬಹಳ ದುಡ್ಡು ಸಿಗುತ್ತಿರಲಿಲ್ಲ. ಐದು, ಹತ್ತು ಸಾವಿರವೇ ಹೆಚ್ಚು.ನಮ್ಮ ಮೇಲೆ ಲತಾಜೀ ಸಂಗೀತ ಪ್ರೀತಿಯ ಮಳೆಗರೆದಿದ್ದರು. ಅದಕ್ಕಾಗಿ ನಾನು ಮತ್ತು ತಂಡ ಸದಾ ಆಭಾರಿ’ ಎಂದು ಕಪಿಲ್ ಹೇಳಿದ್ದರು.
ಬಾಲಿವುಡ್ ಅನ್ನು ಲತಾ ದೀದಿಯನ್ನು ಹೊರತುಪಡಿಸಿ ನೋಡಲು ಸಾಧ್ಯವೇ ಇಲ್ಲ. ಅಷ್ಟೊಂದು ಹಾಸುಹೊಕ್ಕಾಗಿರುವ ಎರಡು ಹೆಸರುಗಳಿವು. ಅವರು ತಮ್ಮ ಸುಮಧುರ ಗಾಯನದಿಂದ ಜನಪ್ರಿಯರಾದಷ್ಟೇ ತಮ್ಮ ವ್ಯಕ್ತಿತ್ವ ಮತ್ತು ನಡವಳಿಕೆಯಿಂದಲೂ ದೊಡ್ಡವರಾಗಿದ್ದರು. ಎಷ್ಟೇ ಜನಪ್ರಿಯತೆ, ಹಣ, ಅವಕಾಶ, ಸಮ್ಮಾನಗಳು ಬಂದರೂ ತಮ್ಮ ಸರಳ ಉಡುಗೆ, ತೊಡುಗೆಗಳನ್ನು ಬಿಟ್ಟವರಲ್ಲ. ಅದೇ ರೀತಿ ತಮ್ಮ ಕ್ರಿಕೆಟ್ ಪ್ರೀತಿಯನ್ನೂ ಕಡಿಮೆ ಮಾಡಿಕೊಂಡವರಲ್ಲ.
ಮುಂಬೈ, ದೆಹಲಿಯಲ್ಲಿ ಅಂತರರಾಷ್ಟ್ರೀಯ ಪಂದ್ಯಗಳು ನಡೆದಾಗಲೆಲ್ಲ ಅವರು ಸ್ವಲ್ಪಹೊತ್ತಾದರೂ ಹೋಗಿ ವೀಕ್ಷಿಸುವುದನ್ನು ಬಿಡುತ್ತಿರಲಿಲ್ಲ. ಬ್ಯಾಟಿಂಗ್ ಚಾಂಪಿಯನ್ ಸಚಿನ್ ತೆಂಡೂಲ್ಕರ್ ಎಂದರೆ ಲತಾ ದೀದಿಗೆ ಅಚ್ಚುಮೆಚ್ಚು. ತಮಗೆ ಬಿಡುವು ಸಿಕ್ಕಾಗಲೆಲ್ಲ ಅವರ ಪಂದ್ಯಗಳನ್ನು ನೋಡುತ್ತಿದ್ದರು. ಸಚಿನ್ ಕೂಡ ಅಷ್ಟೇ.ಕ್ರಿಕೆಟ್ ನಡುವೆ ಸಮಯ ಸಿಕ್ಕಾಗ, ಮುಂಬೈನಲ್ಲಿದ್ದಾಗಲೆಲ್ಲ ಲತಾ ಅವರನ್ನು ಭೇಟಿಯಾಗಿ ಮಾತನಾಡಿ ಬರುತ್ತಿದ್ದರು.
ಕ್ರಿಕೆಟಿಗರಷ್ಟೇ ಅಲ್ಲ. ಬೇರೆ ಕ್ರೀಡಾಪಟುಗಳಿಗೂ ಲತಾ ಅವರು ಗೌರವ ನೀಡುತ್ತಿದ್ದರು. ವೇಗದ ರಾಣಿ ಪಿ.ಟಿ. ಉಷಾ ಒಲಿಂಪಿಕ್ಸ್‌ನಲ್ಲಿ ಗಮನ ಸೆಳೆದು ಮರಳಿದ ನಂತರ ಅವರನ್ನು ಅಭಿನಂದಿಸಿದ್ದರು. ನವಯುಗದ ಮಾಧ್ಯಮಗಳಾದ ಟ್ವಿಟರ್ ಮೂಲಕ ಕ್ರಿಕೆಟ್‌ನಲ್ಲಿ ಭಾರತದ ಸಾಧನೆ ಮತ್ತು ಆಟಗರರನ್ನು ಸದಾ ಅಭಿನಂದಿಸುತ್ತಿದ್ದರು. ಇನ್ನು ಮುಂದೆ ಅಂತಹ ಸಂದೇಶಗಳು ನೋಡಲು ಸಿಗುವುದಿಲ್ಲ. ಆದರೆ, ಅವರದ್ದೇ ಜನಪ್ರಿಯ ಹಾಡಿನ ಸಾಲುಗಳಲ್ಲಿರುವಂತೆ, ಅವರಿರಲಿ ಬಿಡಲಿ ಈ ಪರಿಸರದ ಪ್ರತಿ ಕಣದಲ್ಲಿಯೂ (ರಹೇ ನಾ ರಹೇ ಹಮ್ ಬನಕೆ ಸಮಾ..ಮೆಹಕಾ ಕರೇಂಗೆ ಬನಕೇ ಕಲಿ..ಬನಕೇ ಸಮಾ..) ಸದಾ ಇರುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.