ADVERTISEMENT

ಕೆಪಿಎಲ್‌ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ‘ಸ್ಪಾಟ್‌ ಫಿಕ್ಸಿಂಗ್‌’, ಬೆಟ್ಟಿಂಗ್

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2019, 20:30 IST
Last Updated 7 ನವೆಂಬರ್ 2019, 20:30 IST
   

ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್‌) ಕ್ರಿಕೆಟ್ ಪಂದ್ಯಾವಳಿಯಲ್ಲಿ ನಡೆದಿದೆ ಎನ್ನಲಾದ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಹಗರಣದ ತನಿಖೆ ನಡೆಸುತ್ತಿರುವ ಕೇಂದ್ರ ಅಪರಾಧ ದಳ (ಸಿಸಿಬಿ), ಮತ್ತೆ ಇಬ್ಬರು ಪ್ರಮುಖ ಆಟಗಾರರನ್ನು ಬಂಧಿಸಿದೆ.

ಬಳ್ಳಾರಿ ಟಸ್ಕರ್ಸ್ ತಂಡದ ನಾಯಕ ಸಿ.ಎಂ.ಗೌತಮ್ ಮತ್ತು ಆ ತಂಡದ ಆಟಗಾರ ಅಬ್ರಾರ್ ಖಾಜಿ ಬಂಧಿತರು. ಬಂಧಿತರನ್ನು ನಗರದ 30ನೇ ಎಸಿಎಂಎಂ ಕೋರ್ಟ್‌ನಲ್ಲಿ ಹಾಜರುಪಡಿಸಲಾಗಿದ್ದು, ಇಬ್ಬರನ್ನೂ ಕೋರ್ಟ್‌ ನ. 13ರವರೆಗೆ ಸಿಸಿಬಿ ವಶಕ್ಕೆ ನೀಡಿದೆ.

‘2019ರ ಆವೃತ್ತಿಯ ಫೈನಲ್‌ ಪಂದ್ಯ ಬಳ್ಳಾರಿ ಟಸ್ಕರ್ಸ್‌ ಮತ್ತು ಹುಬ್ಬಳ್ಳಿ ಟೈಗರ್ಸ್‌ ನಡುವೆ ಆಗಸ್ಟ್ 31ರಂದು ಮೈಸೂರಿನಲ್ಲಿ ನಡೆದಿತ್ತು.

ADVERTISEMENT

ಆ ಪಂದ್ಯದಲ್ಲಿ ಮಂದಗತಿಯಲ್ಲಿ ಬ್ಯಾಟಿಂಗ್‌ ಮಾಡುವ ಮೂಲಕ ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದ ಗೌತಮ್‌ ಮತ್ತು ಖಾಜಿಗೆ ₹ 20 ಲಕ್ಷ ಪಾವತಿಯಾಗಿದೆ. ಅಲ್ಲದೆ, ಅವರಿಬ್ಬರೂ ಬೆಂಗಳೂರು ಬ್ಲಾಸ್ಟರ್ಸ್‌ ತಂಡದ ಎದುರು ನಡೆದ ಪಂದ್ಯದಲ್ಲೂ ಫಿಕ್ಸಿಂಗ್‌ ನಡೆಸಿರುವ ಮಾಹಿತಿ ಸಿಕ್ಕಿದೆ’ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದರು.

ಪೊಲೀಸ್ ಕಮಿಷನರ್‌ ಭಾಸ್ಕರ್‌ ರಾವ್‌, ‘ಬಂಧಿತರಾದವರನ್ನು ಬಿಡುವಂತೆ ಪೊಲೀಸರ ಮೇಲೆ ಭಾರಿ ಒತ್ತಡ ಬರುತ್ತಿದೆ. ಆದರೆ, ಯಾರನ್ನೂ ಬಿಡುವ ಪ್ರಶ್ನೆ ಇಲ್ಲ’ ಎಂದರು.

ಅಮಾನತು
ಕೆಪಿಎಲ್ ಟೂರ್ನಿಯಲ್ಲಿ ಫಿಕ್ಸಿಂಗ್ ಮಾಡಿದ ಆರೋಪದಲ್ಲಿ ಬಂಧಿತರಾಗಿರುವ ಬಳ್ಳಾರಿ ಟಸ್ಟರ್ಸ್‌ ತಂಡದ ನಾಯಕ ಸಿ.ಎಂ. ಗೌತಮ್, ವಿವಿಧ ತಂಡಗಳ ಆಟಗಾರರಾದ ಅಬ್ರಾರ್ ಖಾಜಿ, ಎಂ. ವಿಶ್ವನಾಥನ್, ನಿಶಾಂತ್ ಸಿಂಗ್ ಶೇಖಾವತ್ ಮತ್ತು ಕೋಚ್ ವಿನೂ ಪ್ರಸಾದ್ ಅವರನ್ನು ‘ಕ್ರಿಕೆಟ್‌ನ ಎಲ್ಲ ಮಾದರಿ ಮತ್ತು ಚಟುವಟಿಕೆಗಳಿಂದ ಅಮಾನತು ಮಾಡಲಾಗಿದೆ ಎಂದು ಕೆಎಸ್‌ಸಿಎ ವಕ್ತಾರ ವಿನಯ್ ಮೃತ್ಯುಂಜಯ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.