ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ (ಕೆಪಿಎಲ್) ನಡೆದಿದೆ ಎನ್ನಲಾದ ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಸಂಬಂಧ ಬಂಧಿಸಲಾಗಿದ್ದ ‘ಬೆಳಗಾವಿ ಪ್ಯಾಂಥರ್ಸ್’ ತಂಡದ ಕೋಚ್ ಸುಧೀಂದ್ರ ಶಿಂಧೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದೇ 2ರಂದು ಶಿಂಧೆ ಅವರ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಅದರ ಮರುದಿನವೇ ಶಿಂಧೆಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದರು.
ಕಸ್ಟಡಿ ಅವಧಿ ಮುಗಿದಿದ್ದರಿಂದ ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.
ಕಣ್ಣೀರಿಟ್ಟ ಶಿಂಧೆ: ಪ್ರಕರಣದ ತನಿಖಾಧಿಕಾರಿ ಎದುರು ಹೇಳಿಕೆ ದಾಖಲಿಸುವ ವೇಳೆಯಲ್ಲಿ ಅತ್ತಿದ್ದ ಶಿಂಧೆ, ತನಗೂ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲವೆಂದು ವಾದಿಸಿದ್ದಾರೆ. ಜೊತೆಗೆ ಶನಿವಾರ ನ್ಯಾಯಾಲಯದ ಎದುರು ಕಣ್ಣೀರಿಟ್ಟರು ಎಂದು ಮೂಲಗಳು ಹೇಳಿವೆ.
‘ನಿಯಮದ ಪ್ರಕಾರ ತಂಡದ ಮಾಲೀಕ ಹೇಳಿದ ರೀತಿಯಲ್ಲಿ ಕೆಲಸ ಮಾಡಿದ್ದೇನೆ. ಆಟಗಾರರಿಗೂ ತರಬೇತಿ ನೀಡಿದ್ದೇನೆ. ಆದರೆ, ಮ್ಯಾಚ್ ಫಿಕ್ಸಿಂಗ್‌ನಲ್ಲಿ ನನ್ನ ಪಾತ್ರವೇನು ಇಲ್ಲ’ ಎಂಬುದಾಗಿ ಅವರು ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.