ADVERTISEMENT

ಕೆಟ್ಟಪದ ಪ್ರಯೋಗಿಸಬೇಡಿ ಮೊಹಮ್ಮದ್‌ ಅಮೀರ್ ಮನವಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 19:12 IST
Last Updated 18 ಜೂನ್ 2019, 19:12 IST
   

ಮ್ಯಾಂಚೆಸ್ಟರ್‌: ಆಟಗಾರರ ವಿರುದ್ಧ ‘ಕೆಟ್ಟ ಬೈಗುಳನ್ನು’ ಪ್ರಯೋಗಿಸಬೇಡಿ ಎಂದು ಪಾಕಿಸ್ತಾನ ಪೇಸ್‌ ಬೌಲರ್‌ ಮೊಹಮ್ಮದ್‌ ಅಮೀರ್‌ ಮನವಿ ಮಾಡಿದ್ದಾರೆ. ಇದೇ ವೇಳೆ ಟೀಕಿಸುವಾಗ ಕುಟುಂಬವನ್ನು ಎಳೆದುತರಬೇಡಿ ಎಂದು ಹಿರಿಯ ಆಲ್‌ರೌಂಡರ್‌ ಶೋಯೆಬ್‌ ಮಲಿಕ್‌ ಹೇಳಿದ್ದಾರೆ.

ವಿಶ್ವಕಪ್‌ ಪಂದ್ಯದಲ್ಲಿ ಭಾನುವಾರ ‘ಬದ್ಧ ಎದುರಾಳಿ’ ಭಾರತ ತಂಡಕ್ಕೆ 89 ರನ್‌ಗಳಿಂದ ಸೋತ ನಂತರ ಪಾಕ್‌ ತಂಡದ ಆಟಗಾರರನ್ನು ಸಾಮಾಜಿಕ ಜಾಲತಾಣಗಳಲ್ಲಿ ಲೇವಡಿ ಮಾಡಲಾಗುತ್ತಿದೆ. ಹಿರಿಯ ಆಟಗಾರರು ತಂಡವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಸರ್ಫರಾಜ್‌ ನಾಯಕತ್ವ ‘ಬುದ್ಧಿಗೇಡಿ’ ಎಂದು ಶೋಯೆಬ್‌ ಅಖ್ತರ್‌ ನಿಂದಿಸಿದ್ದರು. ಶೋಯೆಬ್‌ ಮಲ್ಲಿಕ್‌ ಪತ್ನಿ, ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಜೊತೆ ರಾತ್ರಿ ವೇಳೆ ಅಡ್ಡಾಡುತ್ತಿದ್ದ ವಿಡಿಯೊ ‘ವೈರಲ್‌’ ಆಗಿ ಬಿರುಗಾಳಿ ಎಬ್ಬಿಸಿತ್ತು.‌

ADVERTISEMENT

‘ಚಿಲ್ಲರೆ ವಿಷಯಗಳಿಗೆ ಸಂಬಂಧಿಸಿದ ಚರ್ಚೆ ವೇಳೆ ಕುಟುಂಬಗಳಿಗೆ ಸಂಬಂಧಿಸಿ ಮಾತನಾಡುವಾಗ ಗೌರವದ ಎಲ್ಲೆ ಮೀರಬಾರದು ಎಂದು ಮಾಧ್ಯಮಗಳು ಮತ್ತು ಜನರಿಗೆ ಆಟಗಾರರ ಪರವಾಗಿ ಮನವಿ ಮಾಡುತ್ತೇನೆ’ ಎಂದು ಮಲಿಕ್‌ ಟ್ವೀಟ್‌ ಮಾಡಿದ್ದಾರೆ. ಭಾರತದ ವಿರುದ್ಧ ಖಾತೆ ತೆರೆಯುವ ಮೊದಲೇ ನಿರ್ಗಮಿಸಿದ್ದ ಶೋಯೆಬ್‌, ಕ್ರಿಕೆಟ್‌ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ವಿಡಿಯೊ ಭಾರತ ವಿರುದ್ಧ ಪಂದ್ಯದ ಮುನ್ನಾದಿನ ರಾತ್ರಿಯದ್ದಲ್ಲ ಎಂದು ಶೋಯೆಬ್‌ ಸ್ಪಷ್ಟಪಡಿಸಿದ್ದಾರೆ.

ಭಾನುವಾರದ ಪಂದ್ಯದಲ್ಲಿ ತಂಡ ಸೋತಿದ್ದರಿಂದ, ಶೋಯೆಬ್‌ ಅವರಿಗೆ ತಂಡದಲ್ಲಿ ಮತ್ತೊಮ್ಮೆ ಆಡುವ ಅವಕಾಶ ನೀಡಬಾರದು ಎಂದು ಮೊಹಮದ್‌ ಯೂಸುಫ್‌ ಸೇರಿದಂತೆ ಕೆಲವು ಹಿರಿಯ ಆಟಗಾರರು ಹೇಳಿದ್ದಾರೆ. ವಿಶ್ವಕಪ್‌ ನಂತರ ಶೋಯೆಬ್‌ ಆಟಕ್ಕೆ ವಿದಾಯ ಹೇಳುವ ಸಾಧ್ಯತೆಯಿದೆ.

‘ನಿಮಗೆ ಟೀಕಿಸುವ ಹಕ್ಕಿದೆ. ಆದರೆ ದಯವಿಟ್ಟು ಕೆಟ್ಟ ಪದ ಬಳಸಬೇಡಿ. ದೇವರ ದಯದಿಂದ ನಮ್ಮ ತಂಡ ಚೇತರಿಸಿಕೊಳ್ಳಲಿದೆ. ನಿಮ್ಮ ಬೆಂಬಲ ಬೇಕು’ ಎಂದು ಅಮೀರ್‌ ಮನವಿ ಮಾಡಿದ್ದಾರೆ.

ಐದು ಪಂದ್ಯಗಳಲ್ಲಿ ನಾಲ್ಕನ್ನು ಸೋತಿರುವ ಪಾಕ್‌ ತಂಡ, ದಕ್ಷಿಣ ಆಫ್ರಿಕ ವಿರುದ್ಧ ಜೂನ್‌ 23ರಂದು ತನ್ನ ಮುಂದಿನ ಪಂದ್ಯ ಆಡಲಿದೆ. ಸದ್ಯ ಕೊನೆಯಿಂದ ಎರಡನೇ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.